×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

’ವ್ಯಸನ ಮುಕ್ತ ಸಮಾಜ ನಿರ್ಮಾಣ ವಿದ್ಯಾರ್ಥಿಗಳ ಧ್ಯೇಯವಾಗಲಿ’

ನಾಲಂದ ಕಾಲೇಜಿನಲ್ಲಿ ಮಾದಕವಸ್ತು ಉಪಯೋಗ ವಿರುದ್ಧ ತರಗತಿ ನೀಡಿ ಸಾಂತ್ವನಂ ಟ್ರಸ್ಟ್ ತಿಳುವಳಿಕಾ ಯಾತ್ರೆ ಸಂಚಾಲಕ ಮೋಹನನ್

ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ.ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ ಎಂದು ಕೋಝಿಕ್ಕೋಡು ಸಾಂತ್ವನಂ ಟ್ರಸ್ಟ್ ತಿಳುವಳಿಕಾ ಸಂದೇಶ ಯಾತ್ರೆಯ ಸಂಚಾಲಕ ಮೋಹನನ್ ಹೇಳಿದರು.

ರಾಜ್ಯ ಜನಮೈತ್ರಿ ಪೊಲೀಸ್ ಮತ್ತು ಕೋಝಿಕ್ಕೋಡು ಸಾಂತ್ವನಂ ಟ್ರಸ್ಟ್ ನೇತೃತ್ವ, ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಹಯೋಗದಲ್ಲಿ ಬುಧವಾರ ನಡೆದ ಮಾದಕ ವಸ್ತು ವಿರುದ್ಧ ತಿಳುವಳಿಕಾ ತರಗತಿಯಲ್ಲಿ ಮಾತನಾಡಿದರು.

Anti-drug-awarness-(2)

Anti-drug-awarness-(1)

ಮಾದಕ ವಸ್ತುಗಳ ಸೇವನೆಯಿಂದ ಶರೀರದಲ್ಲಿ ಉಂಟಾಗುವ ಬದಲಾವಣೆ ಹಾಗೂ ದುಷ್ಪ್ರಭಾವವನ್ನು ಸರಳ ಪ್ರಯೋಗದಿಂದ ತಿಳಿಯಬಹುದಾಗಿದೆ. ಆರಂಭದಲ್ಲಿ ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ತೊಡಗುವ ಮದ್ಯ ಅಥವಾ ಕಡಿಮೆ ಬೆಲೆಗೆ ಸಿಗುವ ಪಾನ್ ವಸ್ತುಗಳ ಸೇವನೆ ಕೊನೆಗೆ ಮಾರಕ ಗಾಂಜಾ, ಅಫೀಮು, ಕೊಕೇನ್ ದಾಸರನ್ನಾಗಿಸುತ್ತದೆ. ಮಿದುಳಿನಲ್ಲಿ ಬದಲಾವಣೆ ತಂದು ಇನ್ನಷ್ಟು ಸೇವಿಸುವಂತೆ ಪ್ರೇರೇಪಿಸಿ ಕೊನೆಗೆ ವ್ಯಸನಿಗಳನ್ನಾಗಿಸುತ್ತದೆ. ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುವ ವ್ಯಸನ ಅಪಘಾತಗಳಿಗೂ ಕಾರಣವಾಗುವುದು.

ಮಾದಕ ದ್ರವ್ಯಗಳನ್ನು ವಿತರಿಸುವ ಜಾಲವನ್ನೂ ಮಟ್ಟಹಾಕಲು ಕಾನೂನಿನೊಂದಿಗೆ ಸಹಕರಿಸುವುದು, ಮಾದಕ ವಸ್ತುಗಳನ್ನು ಬಳಸುತ್ತಿರುವವರಿಗೆ ಅವುಗಳ ಮಾರಕ ಪರಿಣಾಮದ ಕುರಿತು ತಿಳುವಳಿಕೆ ನೀಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಮುಂದಾಗಬೇಕು ಎಂದರು.

ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ ಎಂ. ಮಾತನಾಡಿ, ಅಮಲು ಪದಾರ್ಥ ಸೇವನೆ ಇಂದಿನ ಯುವ ಜನಾಂಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದು ಆತಂಕ ಮೂಡಿಸುತ್ತಿದ್ದು, ಈ ದೃಷ್ಟಿಯಿಂದ ಇಂತಹ ತರಗತಿಗಳು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ ಎಂದರು.

ಕಾಲೇಜು ಪ್ರಿನ್ಸಿಪಾಲ್ ಡಾ. ವಿಘ್ನೇಶ್ವರ ವರ್ಮುಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಮಲು ಸೇವನೆ ಒಂದು ರೀತಿಯ ಫ್ಯಾಷನ್ ಎಂಬುದಾಗಿ ತಿಳಿದ ಯುವಕರು ಮಾದಕ ವಸ್ತುಗಳತ್ತ ಆಕರ್ಷಿತರಾಗಿ ನಿರಂತರ ಉಪಯೋಗಕ್ಕೆ ತೊಡಗುತ್ತಾರೆ. ತಿಳುವಳಿಕಾ ತರಗತಿ ಆಯೋಜನೆಯಿಂದ ಜಾಗೃತಿ ಮೂಡಿಸಲು ಸಾಧ್ಯ.ಜೀವನದ ಗುರಿ ಹಾಗೂ ಹಾದಿ ತಪ್ಪಿಸುವ ಮಾದಕ ವ್ಯಸನ ಹಾಗೂ ವ್ಯಸನಿಗಳಿಂದ ದೂರವಿದ್ದು ಉತ್ತಮ ಹವ್ಯಾಸಗಳನ್ನು ಬೆಳೆಸಿ ಉತ್ತಮ ಭವಿಷ್ಯ ರೂಪಿಸುವಂತೆ ಕರೆ ನೀಡಿದರು.

ಎನ್ನೆಸ್ಸೆಸ್ ಕಾರ್ಯದರ್ಶಿ ರೂಪ, ಧನ್ಯ, ನಿಶ್ಚಿತ, ಸುದೀಶ್, ಭವ್ಯ ಉಪಸ್ಥಿತರಿದ್ದರು.ಉಪನ್ಯಾಸಕ ಶ್ರೀನಿಧಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಯೋಜನಾಧಿಕಾರಿ ಸುರೇಶ್ ಕೆ.ಎಂ.ವಂದಿಸಿದರು.