ವಾರ್ಷಿಕ ವರದಿ 2016-17
ನಾಲಂದ ಮಹಾವಿದ್ಯಾಲಯ ಎರಡು ವರ್ಷಗಳನ್ನು ಪೂರೈಸಿ ಮೂರನೆಯ ವರ್ಷದಲ್ಲಿ ಮುನ್ನಡೆಯುತ್ತಿದೆ. ( 26 ಮಾರ್ಚ್ 2015 ) ಕಳೆದ ಎರಡು ವರ್ಷದ ಅವಧಿಯಲ್ಲಿ ಹತ್ತಾರು ಅಡೆತಡೆಗಳನ್ನು ನಿವಾರಿಸಿಕೊಂಡು ಹೊಸದಿಕ್ಕು ಹೊಸದಿಸೆಗಳನ್ನು ಮೈಗೂಡಿಸಿಕೊಂಡು ಬೆಳವಣಿಗೆಯ ಹೊಸ ಮನ್ವಂತರದೆಡೆಗೆ ಮುಖಮಾಡಿದೆ. ನಮ್ಮ ಎದುರು ಆತಂಕಗಳು ಉದ್ಭವವಾದಾಗ ಕುಗ್ಗದೆ, ಧ್ಯೇಯಗಳಿಗೆ ಒಂದಿನಿತು ಕುಂದುಂಟಾಗದಂತೆ ಸಮರ್ಪಕವಾಗಿ ಎದುರಿಸಲು ಶಕ್ತರಾಗಿದ್ದೇವೆ. ಹಿರಿಯರ ಮಾರ್ಗದರ್ಶನ, ಮಾತೃಸಂಸ್ಥೆಯ ನಿರ್ದೇಶನ ನಮ್ಮ ಪಥಕ್ಕೆ ದಾರಿದೀಪಗಳಾಗಿವೆ. ಸುತ್ತು ಮುತ್ತಲ ಸಮಾಜ ಮತ್ತು ಉತ್ಸಾಹಿ ಯುವಜನತೆ ನಾಲಂದದ ಜೊತೆ ಸತತ ಸಂಪರ್ಕದಲ್ಲಿದ್ದು ನೆರವಾಗಿದ್ದಾರೆ. ಯೋಚಿಸಿದ ಯೋಜನೆಗಳು ಕಾಲಕಾಲಕ್ಕೆ ಸಮರ್ಪಕವಾಗಿ ಕೈಗೂಡಲು ಹತ್ತಾರು ದಾನಿಗಳ ಮನಃಪೂರ್ವಕ ಸಹಕಾರದಿಂದ ಸಾಧ್ಯವಾಗಿದೆ.
ನಾಲಂದ ಸಂಸ್ಥೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದಂತೆ ಇದರ ನಿವೇಶನದ ಪಕ್ಕದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಇನ್ನೊಂದು ಸಂಸ್ಥೆ ’ವಿವೇಕಾನಂದ ಶಿಶುಮಂದಿರ’ ಪ್ರಾರಂಭವಾದುದು ಶುಭ ಸುದ್ದಿ. ಎರಡೂ ಸಂಸ್ಥೆಗಳು ಜೊತೆಜೊತೆಯಾಗಿ ಕಾರ್ಯಾಚರಿಸುತ್ತಿವೆ. ನಾಡಿನ ನಾಳಿನ ಒಳಿತಿಗಾಗಿ ಕೈಲಾದ ಕೈಂಕರ್ಯದಲ್ಲಿ ತೊಡಗಿವೆ.
ಪಡ್ರೆ ಗ್ರಾಮ ಸಮಗ್ರ ಗ್ರಾಮ ವಿಕಾಸ
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶನದಂತೆ ಶಿಕ್ಷಣದ ಜೊತೆಗೆ ಸುತ್ತಲಿನ ಸಮಾಜದಲ್ಲೂ ಬದಲಾವಣೆ ತರುವ ಉದ್ದೇಶದೊಂದಿಗೆ ನಾಲಂದ ಸಂಸ್ಥೆ ಪಡ್ರೆ ಗ್ರಾಮ ಸಮಗ್ರ ಗ್ರಾಮವಿಕಾಸ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನನ್ನ ಗ್ರಾಮ ಮತ್ತು ನಾನು ಎಂಬ ಪರಿಕಲ್ಪನೆಯೊಂದಿಗೆ ಗ್ರಾಮದೊಳಗೆ ಉದ್ಯೋಗ ಸೃಷ್ಟಿಸಿಕೊಂಡು ಪರಸ್ಪರ ಸಹಕಾರದಿಂದ ದುಡಿಯುವ ಯೋಜನೆ ಇದು. ಗ್ರಾಮಗಳು ವಿಕಸನವಾಗದೆ ದೇಶ ವಿಕಸಿತಗೊಳ್ಳಲು ಸಾಧ್ಯವಿಲ್ಲ ಎಂಬ ಯೋಚನೆಯ ಜೊತೆಗೆ ನಮ್ಮ ಸಮಾಜ ಸದೃಢ ಸಮಾಜವಾಗಿ ರೂಪುಗೊಳ್ಳಬೇಕಾದ ಅಗತ್ಯ ಕೂಡ ಈ ಯೋಜನೆಯ ತಿರುಳಲ್ಲಿದೆ. ಇದೇ ತಿಂಗಳ 4ನೇ ತಾರೀಕಿನಂದು ನಾಲಂದದಲ್ಲಿ ಇದರ ಉದ್ಘಾಟನೆಯು ನಡೆಯಿತು.
ಮಾತೃಸಂಸ್ಥೆಯ ನಿರ್ದೇಶನ
ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ನಾಲಂದದ ಮಾತೃಸಂಸ್ಥೆ. ಇಲ್ಲಿಯ ಕಾರ್ಯಚಟುವಟುಕೆಗಳಿಗೆ ಪ್ರೇರಣೆ, ಪೋಷಣೆ ಮಾತೃ ಸಂಸ್ಥೆಯಿಂದಾಗುತ್ತಿದೆ. ಕಾಲಕಾಲಕ್ಕೆ ಸಲಹೆ ಸೂಚನೆಗಳು ಬರುತ್ತಿದ್ದು ಅವುಗಳನ್ನು ಪಾಲಿಸಲಾಗುತ್ತಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಕಲ್ಲಡ್ಕ ಪ್ರಭಾಕರ ಭಟ್, ಕಾರ್ಯದರ್ಶಿ ಡಾ | ಕೆ. ಎಂ. ಕೃಷ್ನ ಭಟ್, ಆಡಳಿತ ಸಮಿತಿ ಸದಸ್ಯರಾದ ಶ್ರೀಯುತ ಇ. ಶಿವಪ್ರಸಾದ್ ಮತ್ತು ಇತರ ಸಮಿತಿಗಳ ಸದಸ್ಯರು ಆಡಳಿತ ಮಂಡಳಿಗೆ ದಾರಿತೋರುತ್ತಿದ್ದಾರೆ. ಉಪನ್ಯಾಸಕರ ಪ್ರವಚನ ಸಾಮರ್ಥ್ಯ ವೃದ್ಧಿ, ಪರೀಕ್ಷೆ, ಸಂದರ್ಶನ, ನೇಮಕಾತಿ, ವಿಶೇಷವಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮತ್ತು ಆಡಳಿತ ಮಂಡಳಿಯ ಜೊತೆ ನಿಕಟ ಸಂಪರ್ಕವಿರಿಸಿಕೊಂಡು ಸೂಕ್ತ ಮಾರ್ಗದರ್ಶನ ಹಾಗು ಸಹಕಾರ ನೀಡುತ್ತಿರುವ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರೂ, ಶೈಕ್ಷಣಿಕ ನಿರ್ದೇಶಕರೂ ಆದ ಡಾ| ವಿಘ್ನೇಶ್ವರ ವರ್ಮುಡಿ ಮತ್ತು ಅವರ ಬಳಗಕ್ಕೆ ನಾವು ಸದಾ ಆಭಾರಿ.
ಪದವಿಗಳು
ನಾಲಂದ ಮಹಾವಿದ್ಯಾಲಯದಲ್ಲಿ ಬಿ. ಕಾಂ. (ಫಿನಾನ್ಸ್), ಬಿ.ಕಾಂ. (ಕೊ- ಓಪರೇಷನ್), ಬಿ.ಎ. (ಎಕನಾಮಿಕ್ಸ್), ಬಿ.ಎಸ್ಸಿ, ( ಜಿಯೋಗ್ರಫಿ), ಬಿ.ಬಿ.ಎ. (ಟ್ರಾವೆಲ್ ಎಂಡ್ ಟೂರಿಸಂ), ಎಂ.ಎಸ್ಸಿ. (ಜಿಯೋಗ್ರಫಿ) ಕೋರ್ಸ್‌ಗಳಿವೆ. ಆದರೆ 2016-17 ರ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಬಿ.ಬಿ.ಎ (ಟಿ.ಟಿ.ಎಮ್) ಮತ್ತು ಎಂ.ಎಸ್ಸಿ (ಜಿಯೋಗ್ರಫಿ) ಕೋರ್ಸ್‌ಗೆ ಪ್ರವೇಶಾತಿ ಆಗಿಲ್ಲ. ಮೂರು ವರ್ಷದ ಪದವಿ ತರಗತಿಗಳಲ್ಲಿ ಒಟ್ಟು 99 ವಿದ್ಯಾರ್ಥಿಗಳು ಮತ್ತು 133 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. 19 ಉಪನ್ಯಾಸಕರು ಮತ್ತು 8 ಸಿಬ್ಬಂದಿಗಳಿದ್ದಾರೆ.
ರಾಷ್ಟ್ರೀಯ ಸೇವಾಯೋಜನೆ ಸಕ್ರಿಯ
ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕ ಹತ್ತು ಹಲವು ಉಪಯುಕ್ತ ಯೋಜನೆಗಳನ್ನು ಹಮ್ಮಿಕೊಂಡು ಇಡೀ ಶೈಕ್ಷಣಿಕ ವರ್ಷದಲ್ಲಿ ಸಕ್ರಿಯವಾಗಿತ್ತು. ಯೋಜನಾಧಿಕಾರಿ ಉಪನ್ಯಾಸಕ ಶ್ರೀಯುತ ಶಂಕರ ಖಂಡಿಗೆ ನೇತೃತ್ವದಲ್ಲಿ ಇತರ ಉಪನ್ಯಾಸಕ ಹಾಗು ಸಿಬ್ಬಂದಿಗಳ ಸಹಕಾರದಲ್ಲಿ ಹತ್ತಾರು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಬೇಂಗಪದವಿನ ಶ್ರೀ ಗಿರಿಜಾಂಬಾ ಪ್ರಾಥಮಿಕ ಶಾಲೆಯಲ್ಲಿ ನಡೆದ ಏಳು ದಿವಸಗಳ ಸನಿವಾಸ ಶಿಬಿರ ಎನ್. ಎಸ್. ಎಸ್. ಪಾಲಿಗೆ ಮತ್ತು ಆ ಪರಿಸರದ ನಾಗರಿಕ ಬಂಧುಗಳಿಗೆ ಮರೆಯಲಾರದ್ದು. ಬೇಂಗಪದವಿನಿಂದ ಬಾಂಕನ, ಸೇರಾಜೆ, ದಾಸ್ರೋಕುವಿಗೆ ಹೊಸದಾದ ಸಂಪರ್ಕ ರಸ್ತೆ ನಿರ್ಮಿಸಿದ್ದು ಮತ್ತು ಬೇಂಗಪದವಿನಲ್ಲಿ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಿಕೊಟ್ಟದ್ದು ಬಹಳ ಮುಖ್ಯ ಕೆಲಸ. ಇವುಗಳಲ್ಲದೆ ರ್‍ಯಾಗಿಂಗ್ ಪಿಡುಗಿನ ಬಗ್ಗೆ ಅರಿವು ಮೂಡಿಸಿದ್ದು, ಶಿಕ್ಷಕರ ದಿನಾಚರಣೆಯಂದು ನಿವೃತ್ತ ಶಿಕ್ಷಕ ಸತಾಯುಷಿ ಶ್ರೀಯುತ ಕೆ.ಪಿ. ಮದನ ಮಾಸ್ಟರ್ (ಇತ್ತೀಚೆಗೆ ದಿವಂಗತರಾದರು) ಅವರನ್ನು ಸನ್ಮಾನಿಸಿದ್ದು, ರಕ್ತದಾನದ ಮಹತ್ವದ ಬಗ್ಗೆ ಕಾರ್ಯಾಗಾರ ಹಾಗು ರಕ್ತದಾನ ಶಿಬಿರ ಸಂಘಟಿಸಿದ್ದು, ಬೇಂಗಪದವು ಅಂಗನವಾಡಿಯನ್ನು ಸ್ವಚ್ಛಗೊಳಿಸಿದ್ದು, ಉಕ್ಕಿನಡ್ಕ – ಪರ್ತಿಕ್ಕಾರು ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕದಂತೆ ನಿರ್ಬಂಧಿಸಿದ್ದು, ನಾಯಕತ್ವದ ಬಗ್ಗೆ ಒಂದು ದಿನದ ಕಾರ್ಯಾಗಾರ ಸಂಘಟಿಸಿದ್ದು, ವಿಶ್ವ ಮಹಿಳಾದಿನ, ವಿಶ್ವ ಅರಣ್ಯ ದಿನಗಳನ್ನು ಆಚರಿಸಿದ್ದು – ಹೀಗೆ ಹತ್ತು ಹಲವು ಉಪಯುಕ್ತ ಮತ್ತು ಪ್ರಚಲಿತ ವಸ್ತುಗಳನ್ನು ಎತ್ತಿಕೊಂಡು ಸಮಾಜ ಮತ್ತು ವಿದ್ಯಾರ್ಥಿ ವಲಯದಲ್ಲಿ ಜಾಗೃತಿ ಮೂಡಿಸುವ ಮಹತ್ತರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ರಾಷ್ಟ್ರೀಯ ಯೋಜನೆ ಕಾರ್ಯಕ್ರಮಗಳಲ್ಲಿ ನಾಡಿನ ಅನೇಕ ಗಣ್ಯರು ಭಾಗವಹಿಸಿದ್ದಾರೆ. ಕಾರ್ಯಕ್ರಮಗಳು ನಡೆದಾಗ ಪರಿಸರದ ನಾಗರಿಕ ಬಂಧುಗಳು ಅನ್ಯಾನ್ಯ ಸಹಕಾರವನ್ನು ಕೊಟ್ಟಿದ್ದಾರೆ ಅವರಿಗೆಲ್ಲ ನಾಲಂದ ಸಂಸ್ಥೆ ಸದಾ ಆಭಾರಿಯಾಗಿದೆ.
ಭೂಮಿತ್ರ ಸೇನೆ
’ಭೂಮಿತ್ರ ಸೇನೆ’ ಪರಿಸರದ ಕಾಳಜಿಯುಳ್ಳ ಘಟಕ. ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ನೀರು ಉಳಿಸುವ ಮತ್ತು ಭೂಮಿಯಲ್ಲಿ ಜೀವಜಲ ತುಂಬುವ ಕೆಲಸ ಅತ್ಯಗತ್ಯವಾಗಿ ಆಗಬೇಕಿದೆ. ಭೂಮಿತ್ರ ಸೇನೆ ನೀರಿನ ಬಗ್ಗೆ ಜಾಗೃತಿ ಮೂಡಿಸುವ ’ ಜೀವಜಲ’ ಎಂಬ ಸಾಕ್ಷ್ಯ ಚಿತ್ರವೊಂದನ್ನು ರೂಪಿಸಿದ್ದು ಇದನ್ನು ’ಜಲತಜ್ಞ’ ಶ್ರೀಪಡ್ರೆಯವರು ’ವಿಶ್ವ ಜಲದಿನ’ದಂದು ಕಾಲೇಜಿನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು. ಇದರಲ್ಲಿ ಕಜಂಪಾಡಿ, ನೇರಪ್ಪಾಡಿ, ನಡುಬೈಲುಗಳಲ್ಲಿ ತೋಡಿಗೆ ಕಟ್ಟಿದ ಕಟ್ಟದ ಬಗ್ಗೆ, ಬೇಂಗಪದವಿನಲ್ಲಿ ನೈಸರ್ಗಿಕವಾಗಿ ಉಂಟಾದ ಕೆರೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ. ನೀರುಳಿತಾಯದ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ರ್‍ಯಾಲಿ ಕೂಡ ಸಂಘಟಿಸಲಾಗಿತ್ತು. ’ವಿಶ್ವ ಪರಿಸರ ದಿನಾಚರಣೆ’, ’ ವಿಶ್ವ ಜನಸಂಖ್ಯಾ ದಿನ’, ’ ವಿಶ್ವ ಉರಗ ದಿನ’ಗಳನ್ನು ಕಾಲೇಜಿನಲ್ಲಿ ಆಚರಿಸಿ ಆಯಾಯ ದಿನಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
ವಿದ್ಯಾನಿಧಿ ಹಾಗು ವಿದ್ಯಾಸಿಂಧು
ಆರ್ಥಿಕ ಬಡತನವಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೆರವಾಗುವ ದೃಷ್ಟಿಯಿಂದ ’ವಿದ್ಯಾನಿಧಿ’ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಪ್ರಥಮ ಪದವಿಯಲ್ಲಿ ಉತ್ತಮ ಅಂಕ ಗಳಿಸಿದ ಒಂದು ಕೋರ್ಸಿನ ಒಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಗೆ ಸ್ಕಾಲರ್ ಶಿಪ್ ಕೊಡುವ ಉದ್ದೇಶದಿಂದ ’ವಿದ್ಯಾಸಿಂಧು’ ಯೋಜನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೆ ಬಿ.ಕಾಂ. ಫಿನಾನ್ಸ್ ವಿಭಾಗದಲ್ಲಿ ಉತ್ತಮ ಅಂಕಗಳಿಸಿದ ಒಬ್ಬ ವಿದ್ಯಾರ್ಥಿ / ವಿದ್ಯಾರ್ಥಿನಿಗೆ ದಿ| ಶುಳುವಾಲಮೂಲೆ ನಾರಾಯಣ ಭಟ್ಟ ಮತ್ತು ಬಿ.ಎಸ್ಸಿ ವಿಭಾಗಕ್ಕಾಗಿ ದಿ| ಸೋಮಜೆ ಮಹಾಲಿಂಗ ಭಟ್ಟ ಸ್ಮಾರಕ ದತ್ತಿನಿಧಿಗೆ ಅವರ ಮನೆಯವರ ಒಪ್ಪಿಗೆ ಸಿಕ್ಕಿದೆ. ಇನ್ನುಳಿದ ವಿಭಾಗಗಳಿಗೆ ದತ್ತಿನಿಧಿ ಅಗತ್ಯವಿದ್ದು ಇದಕ್ಕೆ ತಮ್ಮೆಲ್ಲರ ಸಹಾಯ ನಾಲಂದ ಸಂಸ್ಥೆ ಬಯಸುತ್ತದೆ.
ವಿಚಾರ ಸಂಕಿರಣಗಳು ಮತ್ತು ಶಿಬಿರಗಳು
ನಾಲಂದ ಮಹಾವಿದ್ಯಾಲಯದ ಎಲ್ಲ ವಿಭಾಗಗಳ ಆಶ್ರಯದಲ್ಲಿ ಶೈಕ್ಷಣಿಕ ವರ್ಷದುದ್ದಕ್ಕೂ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿದೆ. ’Digital and Cashless socity’ ಎಂಬ ವಿಷಯದಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ಯು.ಎ.ಇ. ಎಕ್ಸ್ಚೇಂಜ್‌ನ ಶ್ರೀ ಸುಧೀರ್ ಕುಮಾರ್ ಶೆಟ್ಟಿ ಇದನ್ನು ಉದ್ಘಾಟಿಸಿದ್ದು ಅವರೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. 2016 ನವೆಂಬರ್ 8 ರಂದು ರಾತ್ರೆ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು 500 ಮತ್ತು 1000 ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದ ಉದ್ದೇಶ, ಅದರ ಪರಿಣಾಮಗಳು, ಹಣರಹಿತವಾಗಿ ನಾವು ವ್ಯವಹರಿಸಲು ನಮ್ಮ ಮುಂದಿರುವ ಹೊಸ ಸೌಕರ್ಯಗಳು, ದೇಶದ ಪ್ರಜೆಗಳಾಗಿ ಇಂತಹ ಮಹೋನ್ನತ ನಿರ್ಧಾರಗಳನ್ನು ಪ್ರಧಾನಿ ಎತ್ತಿಕೊಂಡಾಗ ನಾವೆಲ್ಲ ಅದಕ್ಕೆ ಸಹಕರಿಸಬೇಕಾದ ಅಗತ್ಯಗಳನ್ನು ಶ್ರೀ ಸುಧೀರ್ ಕುಮಾರ್ ಎಳೆ ಎಳೆಯಾಗಿ ವಿವರಿಸಿದರು.
’ತೋಟಗಾರಿಕಾ ಬೆಳೆಗಳು – ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ಸಾಧ್ಯತೆಗಳು’ ವಿಷಯದ ಮೇಲೆ ರಾಷ್ಟ್ರೀಯ ವಿಚಾರ ಸಂಕಿರಣ ನಾಲಂದ ಮಹಾವಿದ್ಯಾಲಯದಲ್ಲಿ ಸಂಘಟಿಸಲಾಗಿತ್ತು. ಅಡಿಕೆ, ತೆಂಗು ಮತ್ತು ರಬ್ಬರ್ ಬೆಳೆಗಳ ಬಗ್ಗೆ ವಿಚಾರ ಸಂಕಿರಣ ಗಮನ ನೀಡಿತು. ಸಿ.ಪಿ.ಸಿ. ಆರ್. ಐ. ಇದರ ನಿರ್ದೇಶಕರಾದ ಡಾ| ಪಿ. ಚೌಡಪ್ಪ , ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅರ್ಥಶಾಸ್ತ್ರ ಸಹ ಪ್ರಾಚಾರ್ಯ ಡಾ| ರವೀಂದ್ರ ಕುಮಾರ್, ಕೇರಳ ರಬ್ಬರ್ ಬೋರ್ಡ್‌ನ ಕ್ಷೇತ್ರಾಧಿಕಾರಿ ಶ್ರೀ ಶೋಭಿ ಜೋಸೆಫ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ವಿಚಾರ ಸಂಕಿರಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಮತ್ತು ಅರ್ಥಶಾಸ್ತ್ರ ಪ್ರಾಚಾಂii ಪ್ರೊ | ಶ್ರೀಪತಿ ಕಲ್ಲೂರಾಯ, ಕ್ಯಾಂಪ್ಕೊ ಅಧ್ಯಕ್ಷರಾದ ಶ್ರೀ ಎಸ್. ಆರ್. ಸತೀಶ್ಚಂದ್ರ, ಶ್ರೀ ಪತ್ತಡ್ಕ ಗಣಪತಿ ಭಟ್, ಶ್ರೀ ಕೋಳಾರು ಸತೀಶ್ಚಂದ್ರ ಭಂಡಾರಿ, ಡಾ| ವಿಘ್ನೇಶ್ವರ ವರ್ಮುಡಿ ಮುಂತಾದವರು ಭಾಗವಹಿಸಿದ್ದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶ್ರೀಮಾತಾ ಯೋಗ ಪೌಂಡೇಶನ್ ಮಲ್ಲ ಇದರ ನಿರ್ದೇಶಕರಾದ ಯೊಗಾಚಾರ್ಯ ಶ್ರೀ ವಿದ್ಯಾಧರ ಇವರು ಒಂದು ವಾರದ ಕಾಲ ಯೋಗ ತರಗತಿಯನ್ನು ನಾಲಂದದಲ್ಲಿ ನಡೆಸಿಕೊಟ್ಟರು.
ವಿವೇಕಾನಂದ ಜಯಂತಿಯನ್ನು ಔಚಿತ್ಯಪೂರ್ಣವಾಗಿ ಆಚರಿಸಲಾಯಿತು. ನಿವೃತ್ತ ಅಧ್ಯಾಪಕರಾದ ಶ್ರೀ ಕರುಣಾಕರ ಮಾಸ್ತರ್‌ಬೋವಿಕ್ಕಾನ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿವೇಕಾನಂದರ ತತ್ವಾದರ್ಶಗಳು ಹೇಗೆ ಇಂದಿಗೂ ಪ್ರಸ್ತುತವಾಗಿದೆಯೆಂದು ತಿಳಿಯಪಡಿಸಿದರು.
ಈ ವರ್ಷ ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಸುಬಂಧು (ಎಂಡೋಸಲ್ಫಾನ್ ಪೀಡಿತ ಉಪೇಕ್ಷಿತ ಬಂಧುಗಳಿಗೆ ಸಹಾಯ ಮಾಡುವ ಕಾಲೇಜಿನಲ್ಲಿ ಸಂಘಟಿಸಿದ ವಿದ್ಯಾರ್ಥಿ, ಅಧ್ಯಾಪಕ, ಆಡಳಿತ ಮಂಡಳಿ ಹಾಗೂ ದಾನಿಗಳಿಂದ ಕೂಡಿದ ಕ್ಲಬ್) ಫಲಾನುಭವಿಗಳಿಗೆ ಕೊಡುಗೆಗಳನ್ನು ನೀಡುವ ಮೂಲಕ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
ಯಕ್ಷಗಾನ ಸ್ಪಧೆಯಲ್ಲಿ ’ ಎ’ ಗ್ರೇಡ್
ಕಣ್ಣೂರು ವಿಶ್ವವಿದ್ಯಾನಿಲಯದ ಕಲೋತ್ಸವ 2016-17 ಪೊವ್ವಲ್ ನ ಎಲ್. ಬಿ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದ್ದು ನಾಲಂದ ಕಾಲೇಜಿನ 58 ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿವಿಧ ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಕನ್ನಡ ಸಣ್ಣ ಕಥೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಯಕ್ಷಗಾನ ಸ್ಪರ್ಧೆಯಲ್ಲಿ ’ ಎ’ ಗ್ರೇಡ್‌ನೊಂದಿಗೆ ದ್ವಿತೀಯ ಬಹುಮಾನ ನಾಲಂದ ತಂಡಕ್ಕೆ ಲಭಿಸಿದ್ದು ಆಡಳಿತ ಮಂಡಳಿ ವಿವಿಧ ಸ್ಪರ್ಧೆಗಳ ಬಹುಮಾನ ವಿಜೇತರನ್ನು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿದ ತಂಡಗಳನ್ನು ಅಭಿನಂದಿಸುತ್ತದೆ.
ಸಹಾಯ ಮತ್ತು ಕೊಡುಗೆಗಳು
ನಾಲಂದ ಮಹಾವಿದ್ಯಾಲಯಕ್ಕೆ ಹಲವಾರು ದಾನಿಗಳು, ಸಂಸ್ಥೆಗಳು ವಸ್ತು ರೂಪದಲ್ಲಿ, ಹಣದ ರೂಪದಲ್ಲಿ ಉದಾರ ಕೊಡುಗೆ ನೀಡಿದ್ದಾರೆ. ಸೆಮಿನಾರ್‌ಗಳನ್ನು ಸಂಘಟಿಸಿದಾಗ ಊರಿನ ಅನೇಕ ಬಂಧುಗಳು ವಿವಿಧ ರೂಪದಲ್ಲಿ ನೆರವಾಗಿದ್ದಾರೆ. ಈ ಎಲ್ಲ ಸಹಕಾರಕ್ಕಾಗಿ ಆಡಳಿತ ಮಂಡಳಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದೆ. ನಿಮ್ಮೆಲ್ಲರ ಸಹಾಯ ಮತ್ತು ಸಹಕಾರಗಳನ್ನು ಮುಂದೆಯೂ ಸಂಸ್ಥೆ ನಿರೀಕ್ಷಿಸುತ್ತದೆ.
ಗಣ್ಯರ ಭೇಟಿ
ವಿವಿಧ ಸಂದರ್ಭಗಳಲ್ಲಿ ನಾಲಂದ ಮಹಾವಿದ್ಯಾಲಯಕ್ಕೆ ಅನೇಕ ಗಣ್ಯರು ಭೇಟಿ ನೀಡಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಕೊಡುವ ನಾಲಂದದ ಮಹಾನ್ ಧ್ಯೇಯವನ್ನು ಮತ್ತು ಬೆಳವಣಿಗೆಯನ್ನು ಮುಕ್ತಕಂಠದಿಂದ ಅವರೆಲ್ಲ ಪ್ರಶಂಸಿದ್ದಾರೆ. ನಾಲಂದಕ್ಕೆ ಭೇಟಿ ನೀಡಿದ ಪ್ರಮುಖರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸೇವಾ ಪ್ರಮುಖ್ ಶ್ರೀಯುತ ಅಜಿತ್ ಪ್ರಸಾದ ಮಹಾಪಾತ್ರ, ಸಿ.ಪಿ.ಸಿ.ಆರ್.ಐ.ಯ ನಿರ್ದೇಶಕ ಡಾ| ಪಿ. ಚೌಡಪ್ಪ, ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ| ಶ್ರೀಪತಿ ಕಲ್ಲೂರಾಯ, ವಿದ್ಯಾಭಾರತಿ ದಕ್ಷಿಣ ಮಧ್ಯಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಜಿ. ಆರ್. ಜಗದೀಶ್, ಯು.ಎ.ಇ. ಎಕ್ಸ್ಚೇಂಜ್‌ನ ಶ್ರೀಯುತ ಸುಧೀರ್ ಕುಮಾರ್ ಶೆಟ್ಟಿ, ಜಲತಜ್ಞ ಶ್ರೀಪಡ್ರೆ ಮುಂತಾದವರು ಸೇರಿದ್ದಾರೆ.
ಬೀಳ್ಕೊಡುಗೆ
ವಿವೇಕಾನಂದ ವಿದ್ಯಾವರ್ಧಕ ಸಂಘದ ಕೈಗೆ ನಾಲಂದ ಮಹಾವಿದ್ಯಾಲಯದ ಆಡಳಿತ ಬಂದ ನಂತರ ಸಂಸ್ಥೆಯ ಒಳಿತಿಗಾಗಿ ನಿರಂತರ ದುಡಿದ ಮತ್ತು ಅತ್ಯಂತ ಸಮರ್ಥವಾಗಿ ಪ್ರಾಂಶುಪಾಲ ಹುದ್ದೆಯನ್ನು ನಿರ್ವಹಿಸಿದ್ದ ಡಾ| ಕೆ. ಕಮಲಾಕ್ಷ ಅವರು ಇನ್ನೊಂದು ಸಂಸ್ಥೆಯನ್ನು ಮುನ್ನಡೆಸುವ ಮಹತ್ತರ ಧ್ಯೇಯದಿಂದ ಪ್ರಾಂಶುಪಾಲ ಹುದ್ದೆಯನ್ನು ತೊರೆಯಬೇಕಾಯಿತು. ಅವರನ್ನು ನಾಲಂದ ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟಿತು. ಅನೇಕ ವರ್ಷಗಳ ಕಾಲ ನಾಲಂದದಲ್ಲಿ ಪ್ಯೂನ್ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಶ್ರೀಯುತ ಬಿ. ಸುಂದರ ಅವರು ನಿವೃತ್ತರಾಗಿದ್ದು ಅವರ ಸೇವೆಯನ್ನು ಸಂಸ್ಥೆ ಸದಾ ಸ್ಮರಿಸುತ್ತದೆ.
ನೂತನ ಪ್ರಾಂಶುಪಾಲರು
ಡಾ| ಕೆ,ಕಮಲಾಕ್ಷ ಅವರಿಂದ ತೆರವಾದ ಪ್ರಾಂಶುಪಾಲ ಹುದ್ದೆಗೆ ಪ್ರೊ | ಶಂಕರನಾರಾಯಣ ಹೊಳ್ಳ ಅವರನ್ನು ಆಯ್ಕೆ ಮಾಡಲಾಗಿದ್ದು ಆಡಳಿತ ಮಂಡಳಿ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದೆ. ಅವರ ಅವಧಿಯಲ್ಲಿ ಸಂಸ್ಥೆ ಇನ್ನಷ್ಟು ಔನ್ನತ್ಯ ಪಡೆಯಲಿ ಎಂದು ಹಾರೈಸುತ್ತಿದ್ದೇವೆ.
ಭವಿಷ್ಯದ ಯೋಜನೆಗಳು
ನಾಲಂದ ಮಹಾವಿದ್ಯಾಲಯ ಎರಡು ವರ್ಷಗಳ ಅವಧಿಯಲ್ಲಿ ಸುತ್ತಲಿನ ಸಮಾಜದಲ್ಲಿ ಜನಪ್ರೀತಿ ಮೂಡಿಸಿದೆ. ಹೊಸದಾಗಿ ಇನ್ನಷ್ಟು ಕೋರ್ಸ್‌ಗಳು ಬೇಕು ಅನ್ನುವ ಬೇಡಿಕೆ ಸಮಾಜದಿಂದ ಬರುತ್ತಿರುವುದು ನಾವಿಟ್ಟ ಹಜ್ಜೆಗಳು ಸರಿಯಾಗಿವೆ ಎಂಬ ವಿಶ್ವಾಸವನ್ನು ನಮ್ಮಲ್ಲಿ ಮೂಡಿಸಿವೆ. ಸಂಸ್ಥೆ ಇನ್ನಷ್ಟು ಬೆಳೆಯಬೇಕಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಗತ್ಯಗಳ ಪಟ್ಟಿ ಬಹಳ ದೊಡ್ಡದಿದೆ. ಹೊಸ ಶಿಶುಮಂದಿರ, ತರಗತಿ ಕೊಠಡಿಗಳು, ಸುಸಜ್ಜಿತ ಗ್ರಂಥಾಲಯ, ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ವಸತಿ ನಿಲಯಗಳು, ವ್ಯವಸ್ಥಿತ ಆಟದ ಮೈದಾನ, ಶಿಶು ಮಂದಿರದಿಂದ ಮುಂದಿನ ಶಿಕ್ಷಣಕ್ಕೆ ಬೇಕಾದ ಕಟ್ಟಡಗಳು, ಕಾಲೇಜು ಬಸ್ ವ್ಯವಸ್ಥೆ ಹೀಗೆ ಅನೇಕ ಅಗತ್ಯ ಯೋಜನೆಗಳು ಆಗಬೇಕಿದೆ. ಇದುವರೆಗೆ ದಾನಿಗಳು ನೀಡಿದಂತಹ ಸಹಕಾರವನ್ನು ಸಂಸ್ಥೆ ಮುಂದೆಯೂ ನಿರೀಕ್ಷಿಸುತ್ತದೆ. ಪರಸ್ಪರ ಸಹಕಾರದಿಂದ ನಾಲಂದ ಸಂಸ್ಥೆಯನ್ನು ಕಾಸರಗೋಡು ಜಿಲ್ಲೆಯ ಒಂದು ಅತ್ಯುನ್ನತ ಶಿಕ್ಷಣ ಸಂಸ್ಥೆಯಾಗಿ ಬೆಳೆಸೋಣ. ಅದಕ್ಕಾಗಿ ನಿಮ್ಮೆಲ್ಲರ ಸಹಾಯ, ಸಹಕಾರ ಮತ್ತು ಹಾರೈಕೆಯನ್ನು ನಾವು ಬಯಸುತ್ತಿದ್ದೇವೆ.
ಕೃತಜ್ಞತೆಗಳು
ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಮತ್ತು ಅಧಿಕಾರಿಗಳಿಗೆ, ನಾಲಂದದ ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ಪದಾಧಿಕಾರಿಗಳಿಗೆ, ವಿವೇಕಾನಂದ ಮಹಾವಿದ್ಯಾಲಯ ಇದರ ಉಪನ್ಯಾಸಕರಿಗೆ ಮತ್ತು ಕಚೇರಿ ಸಿಬ್ಬಂದಿಗಳಿಗೆ, ಸಮರ್ಥ ರೀತಿಯಲ್ಲಿ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ನಿರ್ವಹಿದ್ದ ನಿವೃತ್ತ ಪ್ರಾಂಶುಪಾಲರಾದ ಡಾ| ಕೆ. ಕಮಲಾಕ್ಷ ಅವರಿಗೆ, ನಾಲಂದ ಮಹಾವಿದ್ಯಾಲಯದ ಆಗು ಹೋಗುಗಳನ್ನು ಉತ್ತಮವಾಗಿ ನಿಭಾಯಿಸುತ್ತಿರುವ ನೂತನ ಪ್ರಾಂಶುಪಾಲರಾದ ಪ್ರೊ| ಶಂಕರನಾರಾಯಣ ಹೊಳ್ಳ ಅವರಿಗೆ, ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಸಂಘಗಳಿಗೆ, ಊರಿನ ಮತ್ತು ಪರವೂರಿನ ದಾನಿಗಳಿಗೆ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಾಲಂದ ಸಂಸ್ಥೆಗೆ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.