×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

Annual Report 2015-16

ವಾರ್ಷಿಕ ವರದಿ 2015-16

ಕಾಸರಗೋಡು ಪರಿಸರದಲ್ಲಿ ಸಂಸ್ಕೃತಿಯುಕ್ತ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಅವಕಾಶ ಮತ್ತು ನಮ್ಮ ನೆಲದ ಗುಣಗಳನ್ನು ಬಿಂಬಿಸುವ ಹಾಗು ಮನದಾಳದಲ್ಲಿ ಹುದುಗಿರುವ ದೇಶಪ್ರೇಮವನ್ನು ಬಡಿದೆಬ್ಬಿಸುವ ಶಕ್ತಿಕೇಂದ್ರದ ಅಗತ್ಯವನ್ನು ನಾಡಿನ ಹಿರಿಯರು ಮತ್ತು ಶಿಕ್ಷಣ ಪ್ರಿಯರು ಮನಗಂಡಿದ್ದರು. ಈ ಸದುದ್ದೇಶದಿಂದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಇಲ್ಲಿಯ ಜನರ ಆಶೋತ್ತರಗಳಿಗೆ ಸ್ಪಂದಿಸಿ ನಾಲಂದ ಮಹಾವಿದ್ಯಾಲಯದ ಆಡಳಿತವನ್ನು ಕೈಗೆತ್ತಿಕೊಂಡದ್ದು ನಮಗೆಲ್ಲ ತಿಳಿದ ಸಂಗತಿ. ನಾಲಂದ ಮಹಾವಿದ್ಯಾಲಯ ಒಂದು ವರ್ಷ ಪೂರ್ತಿಗೊಳಿಸಿದ ಸಂಭ್ರಮದಲ್ಲಿದೆ. (26 ಮಾರ್ಚ್ 2015) ಕೇವಲ ಒಂದು ವರ್ಷದ ಅವಧಿಯಲ್ಲಿ ಹತ್ತಾರು ಅಡೆತಡೆಗಳನ್ನು ನಿವಾರಿಸಿಕೊಂಡು ಹೊಸದಿಕ್ಕು ಹೊಸದಿಸೆಗಳನ್ನು ಮೈಗೂಡಿಸಿಕೊಂಡು ಬೆಳವಣಿಗೆಯತ್ತ ಮುಖಮಾಡಿದೆ. ನಮ್ಮ ಎದುರು ಆತಂಕಗಳು ಉದ್ಭವವಾದಾಗ ಕುಗ್ಗದೆ, ಧ್ಯೇಯಗಳಿಗೆ ಒಂದಿನಿತು ಕುಂದುಂಟಾಗದಂತೆ ಸಮರ್ಪಕವಾಗಿ ಎದುರಿಸಲು ಶಕ್ತವಾಗಿದ್ದೇವೆ. ಹಿರಿಯರ ಮಾರ್ಗದರ್ಶನ, ಮಾತೃಸಂಸ್ಥೆಯ ನಿರ್ದೇಶನ ನಮ್ಮ ಪಥಕ್ಕೆ ದಾರಿದೀಪಗಳಾಗಿವೆ. ಪರಿಸರದ ಉತ್ಸಾಹಿ ಯುವಜನತೆ ನಾಲಂದದ ಜೊತೆ ಸತತ ಸಂಪರ್ಕದಲ್ಲಿದ್ದುಕೊಂಡು ಬಹಳಷ್ಟು ನೆರವಾಗಿದೆ.

DSC_0020

DSC_0708

ನಿರ್ದೇಶನದ ಬೆಳಕು
ನಾಲಂದದ ಎಲ್ಲ ಕಾರ್ಯಚಟುವಟಿಕೆಗಳು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ನೆರಳಿನಲ್ಲಿಯೆ ನಡೆಯುತ್ತಿವೆ. ಕಾಲಕಾಲಕ್ಕೆ ಸಲಹೆ ಸೂಚನೆಗಳು ಬರುತ್ತಿದ್ದು ಅವುಗಳನ್ನು ಪಾಲಿಸಲಾಗುತ್ತಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀಯುತ ಎಸ್. ಆರ್. ರಂಗಮೂರ್ತಿ, ಕಾರ್ಯದರ್ಶಿ ಶ್ರೀಯುತ ಇ. ಶಿವಪ್ರಸಾದ್ ಮತ್ತು ಇತರ ಸಮಿತಿಗಳ ಸದಸ್ಯರು ಆಡಳಿತ ಮಂಡಳಿಗೆ ದಾರಿತೋರುತ್ತಿದ್ದಾರೆ. ಉಪನ್ಯಾಸಕರ ಪ್ರವಚನ ಸಾಮರ್ಥ್ಯ ವೃದ್ಧಿ, ಪರೀಕ್ಷೆ, ಸಂದರ್ಶನ, ನೇಮಕಾತಿ ಮತ್ತು ಆಡಳಿತ ಮಂಡಳಿಯ ಜೊತೆ ನಿಕಟ ಸಂಪರ್ಕವಿರಿಸಿಕೊಂಡು ಸೂಕ್ತ ಮಾರ್ಗದರ್ಶನ ನೀಡುತ್ತಿರುವ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ| ವಿಘ್ನೇಶ್ವರ ವರ್ಮುಡಿ ಮತ್ತು ಅವರ ಬಳಗಕ್ಕೆ ನಾವು ಸದಾ ಆಭಾರಿ.

ಶ್ರೀಮಾತಾ
ಸುಂದರ ಮತ್ತು ವ್ಯವಸ್ಥಿತ ’ಶ್ರೀಮಾತಾ’ ನಾಲಂದದ ನೂತನ ಆಡಳಿತ ಕಚೇರಿ ಇರುವ ಕಟ್ಟಡ. ಇದನ್ನು ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಆನೆಮಜಲು ವಿಷ್ಣು ಭಟ್ ಮಲ್ಲದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪ್ರಸಾದರೂಪವಾಗಿ ಕೊಟ್ಟಿದ್ದಾರೆ. ಅವರಿಗೆ ಮಹಾಸಭೆ ವಿಶೇಷವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದೆ.

21 ಮೇ 2015 ರಂದು ನೂತನ ಆಡಳಿತ ಕಚೇರಿಗೆ ಎಡನೀರು ಮಠದ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳು ಶಿಲಾನ್ಯಾಸ ಮಾಡಿದ್ದರು. ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕ ಆಧ್ಯಕ್ಷರಾದ ಶ್ರೀಯುತ ಎಸ್. ಗಣೇಶ್ ರಾವ್ ಮತ್ತು ಅಂದು ಎಣ್ಮಕಜೆ ಪಂಚಾಯತ್ ಅಧ್ಯಕ್ಷರಾಗಿದ್ದ ಶ್ರೀಯುತ ಸೋಮಶೇಖರ್ ಜೆ.ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಕೇರಳ ಪ್ರಾಂತದ ಸಹಸಂಘಚಾಲಕ್ ಶ್ರೀಯುತ ಅಡ್ವಕೇಟ್ ಕೆ.ಕೆ. ಬಲರಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಟುಂಬ ಪ್ರಬೋಧನ್ ಅಖಿಲ ಭಾರತ ಸಂಯೋಜಕರೂ, ನಾಲಂದ ಸಂಸ್ಥೆಯ ಮಾರ್ಗದರ್ಶಕರೂ ಆದ ಶ್ರೀಯುತ ಕಜಂಪಾಡಿ ಸುಬ್ರಹ್ಮಣ್ಯ ಭಟ್ ದಿಕ್ಸೂಚಿ ಭಾಷಣ ಮಾಡಿದ್ದರು. ಶಿಲಾನ್ಯಾಸವಾಗಿ ಒಂದು ವರ್ಷದೊಳಗೆ ಕಟ್ಟಡ ರಚನೆ ಕಾಮಗಾರಿಯನ್ನು ಪೂರ್ತಿಗೊಳಿಸಿದ ಸಾಧನೆ ಇಂಜಿನಿಯರ್ ಮತ್ತು ನಾಲಂದದ ಆಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀಯುತ ರಾಜೇಶ್ ಮಜಕ್ಕಾರ್ ಅವರದು.

’ಶ್ರೀಮಾತಾ’ ಕಟ್ಟಡ 18 ಫೆಬ್ರವರಿ 2016 ರಂದು ಗುರುವಾರ ಉದ್ಘಾಟನೆಗೊಂಡಿತು. ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಎಂ.ಕೆ. ಅಬ್ದುಲ್ ಖಾದರ್ ಉದ್ಘಾಟನೆ ನೆರವೇರಿಸಿದರು. ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀಯುತ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಸರಕಾರ್ಯವಾಹ ಡಾ| ಕೃಷ್ಣ ಗೋಪಾಲ್‌ಜಿ ಪ್ರಧಾನ ಭಾಷಣ ಮಾಡಿದರು. ಟ್ರಿಟಿಯಂ ಕನ್ಸಲ್ಟಿಂಗ್ ಪ್ರೈ. ಲಿ. ಬೆಂಗಳೂರು ಇದರ ಆಡಳಿತ ನಿರ್ದೇಶಕರಾದ ಶ್ರೀಯುತ ವಿಘ್ನರಾಜ ಕುಳೂರು ಮತ್ತು ಎಣ್ಮಕಜೆ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೂಪವಾಣಿ ಆರ್. ಭಟ್ ಅತಿಥಿಗಳಾಗಿ ಭಾಗವಹಿಸಿದ್ದರು. ನಾಡಿನ ಅನೇಕ ಹಿರಿಯರು, ವಿದ್ಯಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜೆ ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಶ್ರೀಯುತ ರಂಗನಾಥ ಶೆಣೈ ನೇತೃತ್ವದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಆಕರ್ಷಕ ಶಾರೀರಿಕ ಕಸರತ್ತು, ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದವು.

ಪದವಿಗಳು
ನಾಲಂದ ಮಹಾವಿದ್ಯಾಲಯದಲ್ಲಿ ಬಿ. ಕಾಂ. ( ಫಿನಾನ್ಸ್), ಬಿ.ಕಾಂ. ( ಕೊ- ಓಪರೇಷನ್), ಬಿ.ಎ. (ಎಕನಾಮಿಕ್ಸ್), ಬಿ.ಎಸ್ಸಿ. ( ಜಿಯೋಗ್ರಫಿ), ಬಿ.ಬಿ.ಎ. (ಟ್ರಾವೆಲ್ ಎಂಡ್ ಟೂರಿಸಂ), ಎಂ.ಎಸ್ಸಿ. (ಜಿಯೋಗ್ರಫಿ) ಕೋರ್ಸ್‌ಗಳಿವೆ. 2016-17 ನೇ ಸಾಲಿಗೆ ಬಿ.ಎ. (ಇಂಗ್ಲಿಷ್) ಮತ್ತು ಎಂ.ಕಾಂ. ಕೋರ್ಸ್‌ಗಳು ಹೊಸದಾಗಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಮಂಜೂರಾಗಿದ್ದು ಇನ್ನಷ್ಟೆ ಸರಕಾರದಿಂದ ಮಂಜೂರಾತಿ ಪತ್ರ ಕೈಸೇರಬೇಕಿದೆ. ಮೂರು ವರ್ಷದ ಪದವಿ ತರಗತಿಗಳಲ್ಲಿ ಒಟ್ಟು 158 ವಿದ್ಯಾರ್ಥಿಗಳು ಮತ್ತು 116 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. 24 ಉಪನ್ಯಾಸಕರು ಮತ್ತು 8 ಸಿಬ್ಬಂದಿಗಳಿದ್ದಾರೆ. ಕೆಲವು ಉಪನ್ಯಾಸಕರನ್ನು ಸಂಸ್ಥೆಯಿಂದ ಬಿಡುಗಡೆಗೊಳಿಸಲಾಗಿದ್ದು ಹೊಸಬರ ನೇಮಕಾತಿ ನಡೆದಿದೆ.

ಪ್ರಾರ್ಥನೆ
ಬೆಳಿಗ್ಗೆ ವಂದೆಮಾತರಂ ಮತ್ತು ಸಂಜೆ ರಾಷ್ಟ್ರಗೀತೆಗಳನ್ನು ಹಾಡಲು ಕ್ರಮ ಕೈಗೊಳ್ಳಲಾಗಿದೆ. ಮೊದಲ ವರ್ಷದ ನಾಲ್ಕು ವಿದ್ಯಾರ್ಥಿನಿಯರಿಗೆ ಇವುಗಳನ್ನು ಹಾಡಲು ತರಬೇತಿ ಕೊಟ್ಟು ಅವರಿಂದ ಎರಡು ಹೊತ್ತು ಪ್ರಾರ್ಥನೆ ನಡೆಯುತ್ತಿದೆ.

ಎನ್.ಎಸ್.ಎಸ್. ಘಟಕ
ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕ ಯೋಜನಾಧಿಕಾರಿ ಉಪನ್ಯಾಸಕ ಶ್ರೀಯುತ ಶಂಕರ ಖಂಡಿಗೆ ನೇತೃತ್ವದಲ್ಲಿ ಹತ್ತಾರು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ವಿಶ್ವ ಪರಿಸರದಿನದಂದು ಸೆಮಿನಾರೊಂದನ್ನು ನಡೆಸಲಾಗಿತ್ತು. ಕಾಸರಗೋಡು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಶ್ರೀಯುತ ಎಂ.ಜೆ. ಶಕ್ತಿಧರನ್ ಇದರಲ್ಲಿ ಭಾಗವಹಿಸಿದ್ದರು. ವಿಶ್ವ ಯೋಗ ದಿನ, ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ, ಶಿಕ್ಷಕರ ದಿನಾಚರಣೆ, ಪೆರ್ಲ ಪೇಟೆಯ ಶುಚೀಕರಣ, ರಕ್ತದಾನ ಶಿಬಿರ, ವಿಶ್ವ ಏಡ್ಸ್ ದಿನ, ಮಾನವ ಹಕ್ಕು ದಿನ ಹೀಗೆ ವರ್ಷದುದ್ದಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಮತ್ತು ವಿಶ್ವಾಸ ತುಂಬುವ ಕಾರ್ಯಕ್ರಮಗಳನ್ನು ಸಂಘಟಿಸಿತ್ತು. ಕಜಂಪಾಡಿಯಲ್ಲಿ ಒಂದು ವಾರದ ಶಿಬಿರ ನಡೆಸಲಾಗಿದ್ದು ಈ ಶಿಬಿರದಂಗವಾಗಿ ಕಜಂಪಾಡಿಯಲ್ಲಿ ಬಸ್ಸು ತಂಗುದಾಣವನ್ನು ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ. ಈ ಕಾರ್ಯ ಊರ ನಾಗರಿಕರ ಪ್ರಶಂಸೆಗೆ ಒಳಗಾಗಿದೆ.

ಸುಬಂಧು ಮತ್ತು ಭೂಮಿತ್ರ ಸೇನೆ
’ಸುಬಂಧು’ ಹೆಸರಿನ ನಾಲಂದದ ಘಟಕ ಎಂಡೋಸಲ್ಫಾನ್ ಬಾಧಿತ ಹತ್ತು ಬಡ ಕುಟುಂಬಗಳನ್ನು ದತ್ತು ತೆಗೆದುಕೊಂಡು ಪ್ರತಿ ತಿಂಗಳು ಅಕ್ಕಿ, ಸಕ್ಕರೆ, ಔಷಧ ಮತ್ತಿತರ ಜೀವನಾವಶ್ಯಕ ವಸ್ತುಗಳನ್ನು ಸಹಾಯ ರೂಪದಲ್ಲಿ ಕೊಡುತ್ತಿದೆ. ನಾಲಂದ ಸಂಸ್ಥೆ ಕೂಡ ಈ ಘಟಕದಲ್ಲಿ ಸೇರಿಕೊಂಡು ಪ್ರತಿ ತಿಂಗಳು ಒಂದು ಮೊತ್ತವನ್ನು ದೇಣಿಗೆ ನೀಡುತ್ತಿದೆ. ’ಭೂಮಿತ್ರ ಸೇನೆ’ ಪರಿಸರದ ಕಾಳಜಿಯುಳ್ಳ ಘಟಕ. ’ವಿಶ್ವ ಪರಿಸರ ದಿನಾಚರಣೆ’ಯಂದು ಎನ್.ಎಸ್. ಎಸ್. ಘಟಕದೊಡನೆ ಸೇರಿಕೊಂಡು ಹಸಿರು ಬೆಳೆಸುವ ಕೆಲಸ ಮಾಡಿದೆ. ಅಡ್ಯನಡ್ಕದ ’ವಾರಣಾಶಿ ಫಾರ್ಮ್ಸ್’ ಗೆ ಸುಮಾರು ಐವತ್ತು ವಿದ್ಯಾರ್ಥಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಕೃಷಿ ಚಟುವಟಿಕೆಗಳ ಅಧ್ಯಯನ ನಡೆಸಿದೆ.

ವಿದ್ಯಾನಿಧಿ ಹಾಗು ವಿದ್ಯಾಸಿಂಧು
ಆರ್ಥಿಕ ಬಡತನವಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೆರವಾಗುವ ದೃಷ್ಟಿಯಿಂದ ’ವಿದ್ಯಾನಿಧಿ’ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಪ್ರಥಮ ಪದವಿಯಲ್ಲಿ ಉತ್ತಮ ಅಂಕ ಗಳಿಸಿದ ಒಂದು ಕೋರ್ಸಿನ ಒಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಗೆ ಸ್ಕಾಲರ್ ಶಿಪ್ ಕೊಡುವ ಉದ್ದೇಶದಿಂದ ’ವಿದ್ಯಾಸಿಂಧು’ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ತಮ್ಮೆಲ್ಲರ ಸಹಾಯ ನಾಲಂದ ಸಂಸ್ಥೆ ಬಯಸುತ್ತದೆ.

ಸೆಮಿನಾರ್ ಮತ್ತು ಕಾರ್ಯಾಗಾರಗಳು
ಶೈಕ್ಷಣಿಕ ವರ್ಷದುದ್ದಕ್ಕೂ ಒಂದಲ್ಲ ಒಂದು ಕಾರ್ಯಕ್ರಮಗಳನ್ನು ಮಹಾವಿದ್ಯಾಲಯದ ಎಲ್ಲ ವಿಭಾಗಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ’ವಿಶ್ವಯೋಗ ದಿನ’ದಂದು ನಾಲಂದದಲ್ಲೂ ಯೋಗ ಕುರಿತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಯ ಯೋಗಗುರು ಶ್ರೀ ಆನಂದ ಶೆಟ್ಟಿ ಯೋಗದ ಮಹತ್ವ ಮತ್ತು ಅಗತ್ಯ ಮನವರಿಕೆ ಮಾಡಿದರು. ಸ್ವಾತಂತ್ರ್ಯ ದಿನದಂದು ಭಾರತೀಯ ಸೇನೆಯಲ್ಲಿದ್ದು ಐದು ಯುದ್ಧಗಳಲ್ಲಿ ಪಾಲ್ಗೊಂಡ ಆರ್ಟಿಲರಿ ಪ್ಯಾರಾಟ್ರೂಪರ್ಸ್ ವಿಂಗ್‌ನ ನಿವೃತ್ತ ಕ್ಯಾಪ್ಟನ್ ಶ್ರೀಯುತ ನಾರಾಯಣ ಮಣಿಯಾಣಿ ದ್ವಜಾರೋಹಣ ನೆರವೇರಿಸಿದ್ದು ಅರ್ಥಪೂರ್ಣವಾಗಿತ್ತು. ಶಿಕ್ಷಕರ ದಿನಾಚರಣೆಯಂದು ನಾಲಂದದ ಆಡಳಿತಾಧಿಕಾರಿ ಶ್ರೀಯುತ ಶಿವಕುಮಾರ್ ನೇತೃತ್ವದಲ್ಲಿ ಉಪನ್ಯಾಸಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪೆರ್ಲ ಶ್ರೀ ಸತ್ಯನಾರಾಯಣ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸೀತು ಟೀಚರ್ ಮನೆಗೆ ಹೋಗಿ ಗೌರವಾರ್ಪಣೆ ಮಾಡಿದರು. ಇದೊಂದು ಹೃದಯಸ್ಪರ್ಶಿ ನಡೆ. ಓಣಂ ಹಬ್ಬದ ಸಮಯದಲ್ಲಿ ಸಭಾ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು, ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಭಾಕಾರ್ಯಕ್ರಮದಲ್ಲಿ ಅಡ್ವಕೇಟ್ ಶ್ರೀಯುತ ಕರುಣಾಕರ ನಂಬ್ಯಾರ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು. ಕೇರಳ ಶೈಲಿಯ ಭೋಜನ ಈ ದಿನದ ವಿಶೇಷವಾಗಿತ್ತು. ವಿವೇಕಾನಂದ ಜಯಂತಿಯಂದು ಸಂಘಟಿಸಿದ ಸಭಾಕಾರ್ಯಕ್ರಮದಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಯುತ ನರಸಿಂಹ ಭಟ್ ಸೂರ್ಯಂಬೈಲು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ’ಅಂತಾರಾಷ್ಟ್ರೀಯ ತೇವಭರಿತ ಭೂಪ್ರದೇಶ ದಿನ’ , ’ವಿಶ್ವ ಅರ್ಬುದ ದಿನ’, ಕಾಲೇಜ್ ಡೇ ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಮಹಿಳಾ ಸಬಲೀಕರಣ ಕಾರ್ಯಕ್ರಮ ’ಜನಮೈತ್ರಿ ಸುರಕ್ಷಾ ಪದ್ಧತಿ’ ನಾಲಂದದಲ್ಲಿ ಹಮ್ಮಿಕೊಳ್ಳಲಾಗಿತ್ತು. ಎರಡು ದಿವಸಗಳ ಈ ಕಾರ್ಯಕ್ರಮದಲ್ಲಿ ಸುಮಾರು 250 ಯುವತಿಯರು ಪಾಲ್ಗೊಂಡಿದ್ದರು. ಮತದಾನದ ಮಹತ್ವ ತಿಳಿಸುವ ಮತ್ತು ಮತದಾನದ ಜಾಗೃತಿ ಬಗ್ಗೆ ಕಣ್ಣೂರು ವಿಶ್ವವಿದ್ಯಾನಿಲಯದ ಆದೇಶದಂತೆ ಯೋಜಿಸಲಾದ ಕಾರ್ಯಕ್ರಮಗಳು ಗಮನೀಯವಾದವು.

ಅನ್ವೇಷಣೆ – 2015
’ಅನ್ವೇಷಣೆ – 2015’ ಒಂದು ವಿಶಿಷ್ಟ ಪ್ರಯೋಗ. ಕಾಸರಗೋಡು ಪರಿಸರದ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳನ್ನು ನಾಲಂದ ಮಹಾವಿದ್ಯಾಲಯಕ್ಕೆ ಆಕರ್ಷಿಸುವ ದೃಷ್ಟಿಯಿಂದ ಯೋಜಿಸಲಾದ ಕಾರ್ಯಕ್ರಮ. ಬೇರೆ ಬೇರೆ +2 ಶಿಕ್ಷಣ ಸಂಸ್ಥೆಗಳಿಂದ ಸುಮಾರು 100 ರಷ್ಟು ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಇದರಲ್ಲಿ ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಬಹಳ ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂತು..

ಜಿಯೋ ಫಾರಂ – 2016
ಕಳೆದ ಶೈಕ್ಷಣಿಕ ಅವಧಿಯಲ್ಲಿ ಸಂಸ್ಥೆಯೊಳಗೆ ಸಂಯೋಜಿಸಿದ ಸೆಮಿನಾರ್ ಮತ್ತು ಕಾರ್ಯಾಗಾರಗಳು ಅನೇಕ. ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಲ್ಲಿ ಇವುಗಳೆಲ್ಲ ಅತ್ಯಂತ ಉಪಯುಕ್ತವಾದವು. ’ಜಿಯೋ ಫಾರಂ – 2016’ , ’ಜನವರಿ ತಿಂಗಳ ಆಕಾಶ’ ಎಂಬ ಎರಡು ದಿನಗಳ ಸಹವಾಸ ಶಿಬಿರವಂತು ಇವುಗಳಿಗೆಲ್ಲ ಮುಕುಟಪ್ರಾಯವಾದುದು. ಭೂಮಿಶಾಸ್ತ್ರ ವಿಭಾಗಕ್ಕೆ ಸಂಬಂಧಿಸಿದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ ಈ ಕಾರ್ಯಾಗಾರದ ಮುಖ್ಯ ಉದ್ದೇಶ ನಾಲಂದ ಮಹಾವಿದ್ಯಾಲಯ ಮತ್ತು ಭೂಮಿಶಾಸ್ತ್ರದ ಬಗ್ಗೆ ಅರಿವು ಮೂಡಿಸುವುದೆ ಆಗಿತ್ತು. ಪೆರಿಯ ಅಂಬೇಡ್ಕರ್ ಕಾಲೇಜು ಪ್ರಾಂಶುಪಾಲ ಡಾ| ಸಿ. ಬಾಲನ್, ಕಣ್ಣೂರು ವಿಶ್ವವಿದ್ಯಾನಿಲಯದ ಸಹಪ್ರಾಧ್ಯಾಪಕ ಡಾ| ಜಯಪಾಲ್ ಜಿ., ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಭೂಮಿಶಾಸ್ತ್ರ ಉಪನ್ಯಾಸಕ ಡಾ| ಟಿ. ಕೆ. ಪ್ರಸಾದ್, ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರೊ | ಎಂ. ಗೋಪಾಲನ್, ಪಯ್ಯನ್ನೂರು ಆಕಾಶ ನಿರೀಕ್ಷಣಾ ಕೇಂದ್ರದ ನಿರ್ದೇಶಕರಾದ ಶ್ರೀ ವೆಲ್ಲೂರು ಗಂಗಾಧರನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ನಾಲಂದ ಮಹಾವಿದ್ಯಾಲಯ ಮತ್ತು ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಸಂಯುಕ್ತವಾಗಿ ಆಯೋಜಿಸಿದ Modern Banking and Rural Development ಸೆಮಿನಾರ್‌ನಲ್ಲಿ PACS Development Cell  ನ ಅಡ್ವಕೇಟ್ ಶ್ರೀಯುತ ಕೆ. ನಾರಾಯಣ ಮತ್ತು ಶ್ರೀಯುತ ಸೌಜಿತ್ ಆಂಟನಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಮಾನವ ಶಕ್ತಿಯ ಸದ್ಭಳಕೆ ಕುರಿತು ಸೆಮಿನಾರ್ ಒಂದನ್ನು ಸಂಯೋಜಿಸಲಾಗಿದ್ದು ಅದರಲ್ಲಿ Man Power Management  ವಿಷಯದ ಕುರಿತು ನಾಲಂದ ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀಯುತ ರಾಜೇಶ್ ಮಜಕ್ಕರ ತರಗತಿ ನಡೆಸಿಕೊಟ್ಟರು.

ಅಂತರ್ಜಲ ಮತ್ತು ನೀರಿನ ಸಂಪನ್ಮೂಲ ಕುರಿತು ಸೆಮಿನಾರ್ ಸಂಯೋಜಿಸಲಾಗಿತ್ತು. ಇದರಲ್ಲಿ ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಉಪನ್ಯಾಸಕ ಪ್ರೊ | ಪಿ. ಪುರುಷೋತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. Stock Market ಬಗ್ಗೆ ಕಣ್ಣೂರಿನ ICMS  ನ ನಿರ್ದೇಶಕರಾದ ಶ್ರೀಯುತ ಪ್ರಿಜೇಶ್ ಮಾಣಿಯಟ್ ಸೆಮಿನಾರೊಂದನ್ನು ನಡಸಿಕೊಟ್ಟರು.

’ರಸ್ತೆ ಸುರಕ್ಷತೆ’ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ನಾಲಂದದಲ್ಲಿ ಕಾಸರಗೋಡು ಮೋಟಾರು ವಾಹನ ವಿಭಾಗದ ಪರಿಶೋಧಕರಾದ ಶ್ರೀಯುತ ದಿನೇಶ್ ಕುಮಾರ್ ನಡೆಸಿಕೊಟ್ಟರು. ಪಕ್ಷಿ ಪ್ರೇಮಿ ಶ್ರೀ ಸಲಿಂ ಅಲಿ ಅವರ 119ನೆಯ ಹುಟ್ಟುಹಬ್ಬದಂದು ನಾಲಂದ ಅವರನ್ನು ನೆನಪಿಸಿಕೊಂಡಿತು. ಅಂದು ಅವರ ಅಪೂರ್ವ ಪಕ್ಷಿ ಚಿತ್ರಗಳ ಸಾಕ್ಷಿ ಚಿತ್ರವನ್ನು ಪ್ರದರ್ಶಿಸಲಾಯಿತು.

ನಾಲಂದ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ಕಣ್ಣೂರು ವಿ.ವಿ. ಕಲೋತ್ಸವದಲ್ಲಿ ಸುಮಾರು ಒಂದು ನೂರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಐ.ಎ.ಎಸ್. ಮತ್ತು ಐ.ಪಿ.ಎಸ್. ಪರೀಕ್ಷೆಗಳಿಗೆ ತರಬೇತಿ ನೀಡುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಜನೆ ’ಯಶಸ್’ ಗೆ ಆಯ್ಕೆಗಾಗಿ ಈ ಸಲ ಕಾಸರಗೋಡು ಜಿಲ್ಲೆಯವರಿಗೆ ಪರೀಕ್ಷಾ ಕೇಂದ್ರವಾಗಿ ನಾಲಂದವನ್ನು ಆಯ್ಕೆ ಮಾಡಲಾಗಿತ್ತು. ಒಟ್ಟು 164 ವಿದ್ಯಾರ್ಥಿ ವಿದ್ಯಾರ್ಥಿನಿಯರು ’ಯಶಸ್’ ಪರೀಕ್ಷೆಗೆ ಹಾಜರಾಗಿದ್ದರು.

ಸಹಾಯ ಮತ್ತು ಕೊಡುಗೆಗಳು
ನಾಲಂದ ಮಹಾವಿದ್ಯಾಲಯಕ್ಕೆ ಹಲವಾರು ದಾನಿಗಳು, ಸಂಸ್ಥೆಗಳು ವಸ್ತು ರೂಪದಲ್ಲಿ, ಹಣದ ರೂಪದಲ್ಲಿ ಉದಾರ ಕೊಡುಗೆ ನೀಡಿದ್ದಾರೆ. ಕಂಪ್ಯೂಟರ್, ಮೇಜು, ಕಪಾಟು, ಪುಸ್ತಕ ಮುಂತಾದ ಹತ್ತು ಹಲವು ವಸ್ತುಗಳು ಆಡಳಿತ ಮಂಡಳಿಯ ಸದಸ್ಯರಿಂದ ಮತ್ತು ಇತರ ದಾನಿಗಳಿಂದ ಬಂದಿವೆ. ಹಲವರು ನಿಬಡ್ಡಿ ಸಾಲರೂಪದಲ್ಲಿ ಸಂಸ್ಥೆಗೆ ಸಹಕಾರ ನೀಡಿದ್ದು ಅವರೆಲ್ಲರಿಗೂ ಆಡಳಿತ ಮಂಡಳಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದೆ. ನಿಮ್ಮೆಲ್ಲರ ಸಹಾಯ ಮತ್ತು ಸಹಕಾರಗಳನ್ನು ಮುಂದೆಯೂ ಸಂಸ್ಥೆ ನಿರೀಕ್ಷಿಸುತ್ತದೆ. ’ಶ್ರೀಮಾತಾ’ ಕಟ್ಟಡ ಕೊಡುಗೆಯಿತ್ತ ಶ್ರೀಯುತ ಆನೆಮಜಲು ವಿಷ್ಣು ಭಟ್, ಜನರೇಟರ್ ಒದಗಿಸಿದ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕ ಆಧ್ಯಕ್ಷರಾದ ಶ್ರೀಯುತ ಗಣೇಶ್ ರಾವ್, ’ವಿವೇಕಾನಂದ ಶಿಶುಮಂದಿರ’ಕ್ಕೆ ಧನ ಸಹಾಯ ಒದಗಿಸಿದ ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಶ್ರೀಯುತ ಜಯರಾಮ್ ಭಟ್ ಮತ್ತು ಆಡಳಿತ ಮಂಡಳಿ, ಕಂಪ್ಯೂಟರ್‌ಗಳನ್ನು ಒದಗಿಸಿದ ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀಯುತ ಕೃಷ್ಣ ಕುಮಾರ್ ಮತ್ತು ಆಡಳಿತ ಮಂಡಳಿ ಇವರನ್ನು ಪ್ರತ್ಯೇಕವಾಗಿ ನೆನಪಿಸಿಕೊಳ್ಳುತ್ತಿದ್ದೇವೆ.

’ಅನ್ವೇಷಣೆ – 2015’ ಮತ್ತು ’ಶ್ರೀಮಾತಾ’ ಆಡಳಿತ ಕಚೇರಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಗಳಿಗೆ ಕ್ಯಾಂಪ್ಕೊ ಸಂಸ್ಥೆ ದೇಣಿಗೆಯನ್ನು ನೀಡಿದೆ. ಕಜಂಪಾಡಿ ಎನ್.ಎಸ್.ಎಸ್. ಶಿಬಿರಕ್ಕೂ ಕ್ಯಾಂಪ್ಕೊ ಸಹಕಾರ ನೀಡಿದೆ. ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಎಸ್. ಆರ್. ಸತೀಶ್ಚಂದ್ರ, ಹಾಗು ಆಡಳಿತ ಮಂಡಳಿಯವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ. ಇಂತಹ ಹತ್ತಾರು ಸಹಾಯ, ಕೊಡುಗೆ ಕೊಟ್ಟ ಎಲ್ಲ ದಾನಿಗಳನ್ನು ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಾ ನೆನಪಿಸಿಕೊಳ್ಳುತ್ತದೆ.

ಗಣ್ಯರ ಭೇಟಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ್ ಶ್ರೀಯುತ ಮಂಗೇಶ್ ಭೇಂಡೆ, ಹಿಂದೂ ಸೇವಾ ಪ್ರತಿಷ್ಠಾನದ ಶ್ರೀ ಸುರೇಶ್, ಶ್ರೀ ಶ್ರೀಧರ್ ಸಾಗರ, ಪುತ್ತೂರು ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಶ್ರೀಯುತ ಉರಿಮಜಲು ಕೆ. ರಾಮ ಭಟ್, ಆಡಳಿತ ಮಂಡಳಿಯ ಶ್ರೀ ಗುಣಪಾಲ್ ಜೈನ್, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಕೇಂದ್ರ ಸರಕಾರದಲ್ಲಿ ಕಾನೂನು ಮಂತ್ರಿಯಾಗಿರುವ ಶ್ರೀಯುತ ಡಿ.ವಿ. ಸದಾನಂದ ಗೌಡ, ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಕ್ಯಾಪ್ಟನ್ ಶ್ರೀಯುತ ಗಣೇಶ್ ಕಾರ್ಣಿಕ್, ದುಬೈಯಲ್ಲಿರುವ ಯು. ಎ. ಇ. ನ ಆಡಳಿತ ನಿರ್ದೇಶಕ ಶ್ರೀ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ವಿದ್ಯಾಭಾರತಿ ಕರ್ನಾಟಕದ ಶ್ರೀಯುತ ನಾಗೇಂದ್ರ ದೊಡ್ಡಮನಿ, ಶ್ರೀಯುತ ಎನ್. ಜಿ. ಗಲಗಲಿ ಮತ್ತು ಶ್ರೀಯುತ ಅಶೋಕ್ ಪಾಟೀಲ್, ಕ್ಯಾಂಪ್ಕೊ ಅಧ್ಯಕ್ಷರಾದ ಶ್ರೀಯುತ ಎಸ್. ಆರ್. ಸತೀಶ್ಚಂದ್ರ, ಮಾಜಿ ಅಧ್ಯಕ್ಷರಾದ ಶ್ರೀಯುತ ಕೊಂಕೋಡಿ ಪದ್ಮನಾಭ ನಾಲಂದ ಮಹಾವಿದ್ಯಾಲಯಕ್ಕೆ ಬೇರೆ ಬೇರೆ ಸಂದರ್ಭಗಳಲ್ಲಿ ಭೇಟಿ ನೀಡಿದ್ದು ಇಲ್ಲಿಯ ಪರಿಸರ, ಸಂಸ್ಥೆಯ ಆಡಳಿತ ಮಂಡಳಿ ಹಾಗು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರದ್ಧಾಂಜಲಿ ಕಾರ್ಯಕ್ರಮಗಳು
ಭಾರತದ ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಶ್ರೀಯುತ ನ. ಕೃಷ್ಣಪ್ಪ ಮತ್ತು ಪಟಾಣ್ ಕೋಟ್ ವಾಯುನೆಲೆಯಲ್ಲಿ ಉಗ್ರಗಾಮಿಗಳ ಜೊತೆ ಸಂಘರ್ಷದಲ್ಲಿ ವೀರಮರಣವನ್ನಪ್ಪಿದ ಭಾರತೀಯ ಯೋಧರು – ಇವರುಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆದಿವೆ.

ವಿವೇಕಾನಂದ ಶಿಶುಮಂದಿರ
ನಾಲಂದ ಮಹಾವಿದ್ಯಾಲಯದ ನಿವೇಶನದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ 54ನೆಯ ಸಂಸ್ಥೆಯಾಗಿ ’ವಿವೇಕಾನಂದ ಶಿಶುಮಂದಿರ’ ಶುಭಾರಂಭಗೊಳ್ಳಲಿದೆ ಎಂಬುದು ನಮಗೆಲ್ಲ ಸಂತೋಷದ ಸಂಗತಿ. 17  ಫೆಬ್ರವರಿ 2016 ರಂದು ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಆನೆಮಜಲು ವಿಷ್ಣು ಭಟ್ ಮತ್ತು ಸದಸ್ಯರಾದ ಶ್ರೀಯುತ ಕೋಳಾರು ಸತೀಶ್ಚಂದ್ರ ಭಂಡಾರಿ ಇದಕ್ಕೆ ಶಿಲಾನ್ಯಾಸ ಮಾಡಿದ್ದಾರೆ. ಸುಮಾರು ಎಂಟು ಲಕ್ಷ ರೂಪಾಯಿಗಳ ಕಾರ್ಯ ಯೋಜನೆ ಶಿಶುಮಂದಿರಕ್ಕೆ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಎಲ್ಲ ಅಂಶಗಳನ್ನು ಇಲ್ಲಿ ಅಳವಡಿಸಿಕೊಳ್ಳಲು ಯೋಚಿಸಲಾಗಿದೆ.

ಕರ್ನಾಟಕ ಬ್ಯಾಂಕ್ ’ವಿವೇಕಾನಂದ ಶಿಶುಮಂದಿರ’ಕ್ಕೆ 3.5 ಲಕ್ಷರೂಪಾಯಿಗಳನ್ನು ಕೊಡುಗೆಯಾಗಿ ನೀಡಿದೆ. ಕಟ್ಟಡ ಕಾಮಗಾರಿ, ಈಜು ಕೊಳ, ಮಕ್ಕಳ ಆಟ ಮತ್ತು ಇನ್ನಿತರ ಅಗತ್ಯ ಕಲಿಕೆಯ ಸಲಕರಣೆಗಳು, ಶಾಲಾ ವಾಹನ ಮುಂತಾದವುಗಳಿಗೆ ದೊಡ್ಡ ಮೊತ್ತದ ಹಣ ಬೇಕಾಗಿದ್ದು ದಾನಿಗಳಿಂದ ಇದನ್ನು ಸಂಸ್ಥೆ ನಿರೀಕ್ಷಿಸುತ್ತಿದೆ. ದಾನಿಗಳ ಸಹಕಾರದಿಂದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎಂಬುದು ನಮ್ಮ ಮಹತ್ವಾಕಾಂಕ್ಷೆ.

ಭವಿಷ್ಯದ ಯೋಜನೆಗಳು
ನಾಲಂದ ಮಹಾವಿದ್ಯಾಲಯ ಒಂದು ವರ್ಷದ ಅವಧಿಯಲ್ಲಿ ಪರಿಸರದ ಜನತೆಯಲ್ಲಿ ವಿಶ್ವಾಸ ಮೂಡಿಸಿದೆ. ಹಿಂದಿನ ಸಮಸ್ಯೆಗಳ ವಾತಾವರಣ ಕರಗಿ ಶಿಕ್ಷಣದ ವಾತಾವರಣ ಆರಂಭವಾದುದನ್ನು ಸಮಾಜ ಗುರುತಿಸಿದೆ. ಹೊಸದಾಗಿ ಇನ್ನಷ್ಟು ಕೋರ್ಸ್‌ಗಳು ಬೇಕು ಅನ್ನುವ ಬೇಡಿಕೆ ಸಮಾಜದಿಂದ ಬರುತ್ತಿರುವುದು ನಾವಿಟ್ಟ ಹಜ್ಜೆಗಳು ಸರಿಯಾಗಿವೆ ಎಂಬ ವಿಶ್ವಾಸವನ್ನು ನಮ್ಮಲ್ಲಿ ಮೂಡಿಸಿವೆ. ಸಂಸ್ಥೆ ಇನ್ನಷ್ಟು ಬೆಳೆಯಬೇಕಾಗಿದೆ. ನಾಲಂದಕ್ಕಿರುವ ಜಾಗ ಕಡಿಮೆ. ಸಂಸ್ಥೆ ಬೆಳೆದಂತೆ ಇನ್ನಷ್ಟು ಭೂಮಿ ಖರೀದಿ ಅನಿವಾರ್ಯವಾಗುತ್ತದೆ. ಅದಕ್ಕಾಗಿ ದಾನಿಗಳು ಮುಂದೆ ಬರಬಹುದು. ತರಗತಿ ಕೊಠಡಿಗಳು, ಸುಸಜ್ಜಿತ ಗ್ರಂಥಾಲಯ, ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ವಸತಿ ನಿಲಯಗಳು, ವ್ಯವಸ್ಥಿತ ಆಟದ ಮೈದಾನ, ಶಿಶು ಮಂದಿರದಿಂದ ಮುಂದಿನ ಶಿಕ್ಷಣಕ್ಕೆ ಬೇಕಾದ ಕಟ್ಟಡಗಳು, ಕಾಲೇಜು ಬಸ್ ವ್ಯವಸ್ಥೆ ಹೀಗೆ ಅನೇಕ ಅಗತ್ಯ ಯೋಜನೆಗಳು ಆಗಬೇಕಿದೆ. ಇದುವರೆಗೆ ದಾನಿಗಳು ನೀಡಿದಂತಹ ಸಹಕಾರವನ್ನು ಸಂಸ್ಥೆ ಮುಂದೆಯೂ ನಿರೀಕ್ಷಿಸುತ್ತದೆ. ಪರಸ್ಪರ ಸಹಕಾರದಿಂದ ನಾಲಂದ ಸಂಸ್ಥೆಯನ್ನು ಕಾಸರಗೋಡು ಜಿಲ್ಲೆಯ ಒಂದು ಅತ್ಯುನ್ನತ ಶಿಕ್ಷಣ ಸಂಸ್ಥೆಯಾಗಿ ಬೆಳೆಸೋಣ. ಅದಕ್ಕಾಗಿ ನಿಮ್ಮೆಲ್ಲರ ಸಹಾಯ, ಸಹಕಾರ ಮತ್ತು ಹಾರೈಕೆಯನ್ನು ನಾವು ಬಯಸುತ್ತಿದ್ದೇವೆ.

ಕೃತಜ್ಞತೆಗಳು
ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಮತ್ತು ಅಧಿಕಾರಿಗಳಿಗೆ, ನಾಲಂದದ ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ಪದಾಧಿಕಾರಿಗಳಿಗೆ, ವಿವೇಕಾನಂದ ಮಹಾವಿದ್ಯಾಲಯ ಇದರ ಉಪನ್ಯಾಸಕರಿಗೆ ಮತ್ತು ಕಚೇರಿ ಸಿಬ್ಬಂಧಿಗಳಿಗೆ, ಸಮರ್ಥ ರೀತಿಯಲ್ಲಿ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿದ ಪ್ರಾಂಶುಪಾಲರಾದ ಡಾ| ಕೆ. ಕಮಲಾಕ್ಷ ಅವರಿಗೆ, ನಾಲಂದ ಮಹಾವಿದ್ಯಾಲಯದ ಆಗು ಹೋಗುಗಳನ್ನು ಉತ್ತಮವಾಗಿ ನಿಭಾಯಿಸುತ್ತಿರುವ ಕಾರ್ಯನಿರ್ವಹಣಾಧಿಕಾರಿ ಶ್ರೀಯುತ ಕೆ. ಶಿವಕುಮಾರ ಅವರಿಗೆ, ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಸಂಘಗಳಿಗೆ, ಊರಿನ ಮತ್ತು ಪರವೂರಿನ ದಾನಿಗಳಿಗೆ, ಪ್ರತ್ಯಕ್ಷವಾಗ ಮತ್ತು ಪರೋಕ್ಷವಾಗಿ ನಾಲಂದ ಸಂಸ್ಥೆಗೆ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

ವಂದನೆಗಳು.