ನಾಲಂದ ಕಾಲೇಜಿನಲ್ಲಿ ರಸ್ತೆ ಸುರಕ್ಷತೆ ತರಗತಿ
ದೇಶಾದ್ಯಂತ ರಸ್ತೆ ಸುರಕ್ಷತೆ ಸಪ್ತಾಹ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಅಪಘಾತ ಪ್ರಕರಣಗಳು ದಿನೇ ದಿನೇ ಗಣನೀಯವಾಗಿ ವರ್ಧಿಸುತ್ತಿದೆ. ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿ ವಾಹನ ಚಾಲಾಯಿಸಿದಲ್ಲಿ ಶೇಕಡಾ ೫೦ರಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದು ಕಾಸರಗೋಡು ಪ್ರಾದೇಶಿಕ ಸಾರಿಗೆ ಇಲಾಖೆ ಸಹಾಯಕ ವಾಹನ ತಪಾಸಣಾಧಿಕಾರಿ ಟಿ. ವೈಕುಂಠನ್ ಹೇಳಿದರು.
ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ಮಂಗಳವಾರ ನಡೆದ ರಸ್ತೆ ಸುರಕ್ಷತೆ ತರಗತಿ ನೀಡಿ ಮಾತನಾಡಿದರು.
ಅತಿ ವೇಗದ ಚಾಲನೆ, ಹೆಲ್ಮೆಟ್ ರಹಿತ ದ್ವಿಚಕ್ರ ಸವಾರಿ, ವಾಹನ ಚಾಲನೆಯ ವೇಳೆ ಮದ್ಯ ಇನ್ನಿತರ ಅಮಲು ಪದಾರ್ಥ ಸೇವನೆಯೇ ಮೊದಲಾಗಿ ರಸ್ತೆ ಸುರಕ್ಷತೆ ನಿಯಮ ಉಲ್ಲಂಘನೆ ಅಪಘಾತದ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ಅಪ್ರಾಪ್ತರಿಗೆ ವಾಹನ ನೀಡುವುದು, ಚಾಲನಾ ಪರವಾನಗಿ, ವಿಮೆ ರಹಿತ ಚಾಲನೆ ಅಪರಾಧವಾಗಿದ್ದು ಅಕಸ್ಮಾತ್ ಅಪಘಾತ ಸಂಭವಿಸಿದಲ್ಲಿ ಭವಿಷ್ಯತ್ತಿನಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗಿ ಬರುವುದು. ರಸ್ತೆ ನಿಯಮಗಳನ್ನು ಪಾಲಿಸುವುದಲ್ಲದೆ ಇತರರಲ್ಲಿ ಜಾಗೃತಿ ಮೂಡಿಸುವುದು ಇಂದಿನ ಕಾಲಘಟ್ಟದ ಅನಿವಾರ್ಯತೆ ಯಾಗಿದೆ.ಯುವ ಜನಾಂಗ ಅದರಲ್ಲೂ ವಿದ್ಯಾರ್ಥಿಗಳು ಎಚ್ಚೆತ್ತು ಮುಂದೆ ಬಂದಲ್ಲಿ ಅಪಘಾತ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಸಾಧ್ಯ ಎಂದರು.
ಕಾಲೇಜು ಆಡಳಿತ ಮಂಡಳಿ ಸದಸ್ಯ ರಾಜಶೇಖರ್ ಮಾತನಾಡಿ, ಸರಕಾರಗಳು ರಸ್ತೆ ಸುರಕ್ಷತೆ ನಿಯಮಗಳನ್ನು ಜಾರಿಗೆ ತಂದಿರುವುದು ಜನರ ಸುರಕ್ಷತೆಗಾಗಿಯೇ ಹೊರತು ಸರಕಾರಿ ಖಜಾನೆ ವೃಧ್ಹಿಗೆ ಅಲ್ಲ ಎಂಬುದನ್ನು ಪ್ರತಿಯೋರ್ವರೂ ತಿಳಿದು ಸುರಕ್ಷಾ ನಿಯಮಗಳನ್ನು ಪಾಲಿಸಬೇಕು ಎಂದರು.
ಕಾಲೇಜು ಪ್ರಿನ್ಸಿಪಾಲ್ ಡಾ. ವಿಘ್ನೇಶ್ವರ ವರ್ಮುಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಸ್ತೆ ಸುರಕ್ಷಾ ನಿಯಮ ಕೇವಲ ವಾಹನ ಸವಾರರಿಗೆ ಮಾತ್ರವಾಗಿಲ್ಲ.ಪಾದಚಾರಿಗಳೂ ನಿಯಮ ಅನುಸರಿಸಬೇಕು. ರಸ್ತೆಯಲ್ಲಿ ನಡೆದಾಡುವ, ರಸ್ತೆ ದಾಟುವ ಸಂದರ್ಭ ಮೊಬೈಲ್ ಉಪಯೋಗ ಸಲ್ಲದು ಎಂದರು.
ಸಹಾಯಕ ವಾಹನ ತಪಾಸಣಾಧಿಕಾರಿ ಗಣೇಶನ್, ಎನ್ನೆಸ್ಸೆಸ್ ಕಾರ್ಯದರ್ಶಿ ರೂಪ, ನಿಶ್ಚಿತ, ಸುದೀಶ್, ಭವ್ಯ ಉಪಸ್ಥಿತರಿದ್ದರು.