ಪೆರ್ಲ : ಕೊರೆಯುವ ಚಳಿ, ಸುಡುವ ಬಿಸಿಲು, ಮಳೆ ಗಾಳಿಯನ್ನು ಲೆಕ್ಕಿಸದೆ ಮರುಭೂಮಿ, ಕಡಿದಾದ ಪರ್ವತ, ಹಳ್ಳ, ನದಿ, ಸಮುದ್ರವೆನ್ನದೆ ನಮ್ಮ ದೇಶದ ಗಡಿಯನ್ನು ಕಾಯುವ ಹಾಗೂ ದೇಶದ ರಕ್ಷಣೆ ಮಾಡುವ ಸೈನಿಕರ ತ್ಯಾಗ ಚಿರ ಸ್ಮರಣೀಯ.ಅವರನ್ನು ಗೌರವಾದರದಿಂದ ಕಾಣುವುದು ನಮ್ಮ ಕರ್ತವ್ಯವೂ ಹೌದು ಎಂದು ಪೆರ್ಲ ನಾಲಂದಾ ಕಾಲೇಜು ಉಪನ್ಯಾಸಕಿ ಶಾಂಭವಿ ಹೇಳಿದರು.
ಪೆರ್ಲ ನಾಲಂದ ಮಹಾ ವಿದ್ಯಾಲಯದ ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ಭಾರತೀಯ ಸೇನಾ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಯಾವುದೇ ಆಚರಣೆಗಳು ಒಂದು ದಿನಕ್ಕೆ ಸೀಮಿತವಾಗಬಾರದು. ಸೈನಿಕರ ತ್ಯಾಗದ ಫಲವಾಗಿ ನಾವು ನೆಮ್ಮದಿಯಿಂದ ಜೀವಿಸುತ್ತಿದ್ದೇವೆ. ಪ್ರತಿಯೊಬ್ಬ ಭಾರತೀಯನಲ್ಲೂ ದೇಶ ಪ್ರೇಮ ಹಾಗೂ ದೇಶವನ್ನು ಕಾಯುತ್ತಿರುವ ಸೈನಿಕ ನಮ್ಮವನೇ ಎಂಬ ಭಾವನೆ ಮೂಡಬೇಕು ಎಂದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ.ಎಂ.ಮಾತನಾಡಿ, ಅನ್ನ ಕೊಡುವ ರೈತ ಹಾಗೂ ಗಡಿ ಕಾಯುವ ಸೈನಿಕ ದೇಶದ ಎರಡು ಕಣ್ಣುಗಳಿದ್ದಂತೆ, ಸೈನಿಕರ ನಿಸ್ವಾರ್ಥ ಸೇವೆಯನ್ನು ಎಂದಿಗೂ ಸ್ಮರಿಸಬೇಕು ಎಂದರು.
ಎನ್ನೆಸ್ಸೆಸ್ ಕಾರ್ಯದರ್ಶಿ ರೂಪ, ಧನ್ಯ, ನಿಶ್ಚಿತ, ಸುದೀಶ್, ಭವ್ಯ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಭುವನಾ ಸ್ವಾಗತಿಸಿ, ಅಭಿಲಾಶ್ ಎಂ. ವಂದಿಸಿದರು. ಕವಿತಾ ನಿರೂಪಿಸಿದರು.