ಪೆರ್ಲ: ಕಾಶ್ಮೀರ ಕಣಿವೆಯಲ್ಲಿ ಜೆಇಎಂ ಉಗ್ರರು ಅಟ್ಟಹಾಸ ಮೆರೆದಿರುವುದು ಅತ್ಯಂತ ಹೇಯ ಕೃತ್ಯವಾಗಿದು ಭಯೋತ್ಪಾದನೆಯ ಕರಾಳ ಮುಖವನ್ನು ಭಯೋತ್ಪಾದಕ ಸಂಘಟನೆಗಳು ಮತ್ತೊಮ್ಮೆ ಜಗಜ್ಜಾಹೀರು ಗೊಳಿಸಿದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಎಚ್ಚೆತ್ತು ಜಾತಿ ಮತ, ಪಕ್ಷ ಬೇಧ ಮರೆತು ದೇಶದ ರಕ್ಷಣೆಗೆ ಒಗ್ಗೂಡಲೇ ಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ನಾಲಂದ ಕಾಲೇಜು ಕನ್ನಡ ವಿಭಾಗದ ಉಪನ್ಯಾಸಕ, ಸ್ಟಾಫ್ ಕಾರ್ಯದರ್ಶಿ ಕೇಶವ ಶರ್ಮ ಹೇಳಿದರು.
ಪೆರ್ಲ ನಾಲಂದ ಕಾಲೇಜು ಯೂನಿಯನ್ ನೇತೃತ್ವದಲ್ಲಿ ಶುಕ್ರವಾರ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮರಸ್ಯ ಭೂಮಿಯಾದ ಭಾರತದಲ್ಲಿ ಉಗ್ರರು ದಾಳಿ ನಡೆಸುವ ಮೂಲಕ ಬಲು ದೊಡ್ಡ ತಪ್ಪನ್ನೆಸಗಿದ್ದು ಅದಕ್ಕೆ ಪ್ರತಿಯಾಗಿ ದೊಡ್ಡ ಬೆಲೆ ತೆರಲಿದ್ದಾರೆ.ಈ ರೀತಿಯ ದುಷ್ಕೃತ್ಯ ಮರುಕಳಿಸದಂತೆ ಜಾಗ್ರತೆ ವಹಿಸಬೇಕಾಗಿದೆ ಎಂದರು.
ಕಾಲೇಜು ಆಡಳಿತ ಮಂಡಳಿ ನಿರ್ವಹಣಾಧಿಕಾರಿ ಶಿವಕುಮಾರ್ ಕೆ.ಮಾತನಾಡಿ, ಬಾಹ್ಯ ಶತ್ರುಗಳಿಂದ ಆಂತರಿಕ ಶತ್ರುಗಳು ಅತ್ಯಂತ ಅಪಾಯಕಾರಿ. ಭಾರತೀಯರ ತ್ಯಾಗ ಮನೋಭಾವ ಸುಂದರ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವಪೂರ್ಣ ಪಾತ್ರ ವಹಿಸುವುದು. ರಾಷ್ಟ್ರೀಯ ಸಂಕಲ್ಪದಿಂದ ಜನರು ಒಂದಾದಲ್ಲಿ ಈ ರೀತಿಯ ಪೈಶಾಚಿಕ ಕಾರ್ಯಗಳನ್ನು ಎದುರಿಸಲು ಸಾಧ್ಯ. ರಾಷ್ಟ್ರ ಸಾರ್ವ ಭೌಮತೆ ಸಾಧಿಸಿ ಅಖಂಡತೆಯಿಂದ ಮೆರೆಯಲು ಪ್ರತಿಯೊಬ್ಬ ಭಾರತೀಯನು ರಾಷ್ಟ್ರವನ್ನು ದುಷ್ಟ ಶಕ್ತಿಗಳಿಂದ ಕಾಪಾಡುವ ಸಂಕಲ್ಪದೊಂದಿಗೆ ದೇಶ ಸೇವೆಯಲ್ಲಿ ತೊಡಗ ಬೇಕಾಗಿದೆ ಎಂದರು.
ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೌನ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ಅಗಲಿದ ವೀರ ಯೋಧರ ಚಿರಶಾಂತಿಗೆ ಪ್ರಾರ್ಥಿಸಲಾಯಿತು.
ಕಾಲೇಜು ಯೂನಿಯನ್ ಅಧ್ಯಕ್ಷೆ ನಯನ ಶ್ರೀ, ಯೂನಿಯನ್ ಪದಾಧಿಕಾರಿಗಳು, ಉಪಸ್ಥಿತರಿದ್ದರು.