ಪೆರ್ಲ ನಾಲಂದ ಕಾಲೇಜು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಗೋಪಾಲ ಚೆಟ್ಟಿಯಾರ್
ಪೆರ್ಲ: ಆತ್ಮ ಸಂತೃಪ್ತಿಗಿಂದ ಮಿಗಿಲಾದ ಸುಖ ಬೇರೊಂದಿಲ್ಲ. ಕಷ್ಟ ಕಾರ್ಪಣ್ಯದಿಂದ ಬಳಲುತ್ತಿರುವ ಜನರ ಸಂಕಷ್ಟ ಬಗೆ ಹರಿಸಿದಾಗ ಸಿಗುವ ಪರಮಾನಂದ ಹಾಗೂ ಆತ್ಮ ಸಂತೃಪ್ತಿ ಸ್ವರ್ಗ ಸುಖಕ್ಕೆ ಸಮನಾದುದು ಎಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ ಚೆಟ್ಟಿಯಾರ್ ಹೇಳಿದರು.
ಪೆರ್ಲ ನಾಲಂದ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಧರ್ಮ ಹಾಗೂ ಸಂಸ್ಕೃತಿಯಲ್ಲಿ ವ್ಯಕ್ತಿಯ ಉನ್ನತಿಯ ಮಾನದಂಡ ಆರ್ಥಿಕ ಶ್ರೀಮಂತಿಕೆಯಲ್ಲ. ಹಣದ ಅತಿ ಮೋಹದಿಂದ ಮನುಷ್ಯತ್ವ ನಶಿಸುತ್ತಿದೆ.ತಾನು, ತನ್ನದೆಂಬ ಸಂಕುಚಿತ ಭಾವ ಸಲ್ಲದು.ಕೇವಲ ಹಣ ಸಂಪಾದನೆಯೊಂದೇ ಜೀವನದ ಉದ್ದೇಶವಾಗಬಾರದು. ಆರ್ಜಿಸಿದ ಜ್ಞಾನ, ಮೈಗೂಡಿಸಿದ ಸಂಸ್ಕಾರ ನೈಜ ಸಂಪತ್ತು. ಶೂನ್ಯತೆಯೊಂದಿಗೆ ಜನಿಸಿದ ನಮಗೆ ಸಮಾಜ ಎಲ್ಲವನ್ನೂ ನೀಡಿದೆ. ಸಮಾಜದ ಋಣ ತೀರಿಸಲು ಸಮಾಜ ಮುಖಿಗಳಾಗಿ ಬದುಕುವುದನ್ನು ನಾವು ಕಲಿಯಬೇಕು. ಸಮಾಜಮುಖಿ ಚಿಂತನೆಯೊಂದಿಗೆ ಜೀವಿಸಿದಲ್ಲಿ ಸಮಾಜ ಹಾಗೂ ದೇಶ ಅಭಿವೃದ್ಧಿಯತ್ತ ಸಾಗುವುದು.
ಬದಲಾದ ಶಿಕ್ಷಣ ಪದ್ಧತಿಯಿಂದ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾದರೂ ವಿದ್ಯಾರ್ಥಿಗಳ ಮನ ಶಕ್ತಿ ಕುಸಿಯುತ್ತಿದ್ದು ಜೀವನವನ್ನು ಆನಂದಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಶಿಕ್ಷಣದ ಜತೆ ಸಂಸ್ಕಾರ ಬೋಧಿಸಿದರೆ ವ್ಯಕ್ತಿ ದೇಶದ ಆಸ್ತಿಯಾಗಬಲ್ಲ. ಸ್ವಾರ್ಥಿ ಹಾಗೂ ಸಂಸ್ಕಾರ ಶೂನ್ಯ ವ್ಯಕ್ತಿ ಸಮಾಜಕ್ಕೆ ಕಂಟಕ ಪ್ರಾಯನಾಗುವನು. ವಿದ್ಯಾ ಸಂಸ್ಥೆಗಳು ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಲು ಒತ್ತು ನೀಡಬೇಕು ಎಂದರು.
ಕಾಲೇಜು ಆಡಳಿತ ಮಂಡಳಿ ಸದಸ್ಯ ರಾಜಶೇಖರ್ ಮಾತನಾಡಿ, ಅಶಕ್ತರಿಗೆ ಸಹಾಯ ಮಾಡುವುದರೊಂದಿಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ತಮ್ಮಿಂದಾಗುವ ಕೊಡುಗೆ ನೀಡಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದರು.
ಕನ್ನಡ ವಿಭಾಗ ಪ್ರಾಧ್ಯಾಪಕ, ಸಿಬ್ಬಂದಿ ಕಾರ್ಯದರ್ಶಿ ಕೇಶವ ಶರ್ಮ ಮಾತನಾಡಿ, ತಂದೆ ತಾಯಿ, ಗುರು ಹಿರಿಯರು, ಅತಿಥಿಗಳನ್ನು ಗೌರವಿಸುವ ಶ್ರೇಷ್ಠ ಸಂಸ್ಕೃತಿ ಭಾರತೀಯ ಸಂಸ್ಕೃತಿಯಾಗಿದೆ. ಧರ್ಮ ಹಾಗೂ ಸಂಸ್ಕೃತಿಯ ತಿರುಳುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಸಾರ್ಥಕವಾಗುವುದು ಎಂದರು.
ಕಾಲೇಜು ಪ್ರಿನ್ಸಿಪಾಲ್ ಡಾ. ವಿಘ್ನೇಶ್ವರ ವರ್ಮುಡಿ ಅಧ್ಯಕ್ಷತೆ ವಹಿಸಿದರು. ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗ ಮುಖ್ಯಸ್ಥೆ ಮಧುರವಾಣಿ, ಜಿಯೋಗ್ರಫಿ ವಿಭಾಗ ಮುಖ್ಯಸ್ಥೆ ಸಜಿದ, ಅರ್ಥಶಾಸ್ತ್ರ ಪ್ರಾಧ್ಯಾಪಕಿ ಗೀತಾ ವಿ.ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ರಶ್ಮಿ ಸ್ವಾಗತಿಸಿ, ರಶ್ಮಿ ಕೆ. ವಂದಿಸಿದರು. ನಿಶ ನಿರೂಪಿಸಿದರು.