×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಸಾಮಾಜಿಕ ನ್ಯಾಯ ವ್ಯವಸ್ಥೆಯಿಂದ ಸಾಮರಸ್ಯ

ಪೆರ್ಲ: ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಧರ್ಮ ನಿರಪೇಕ್ಷತೆ, ಸಾಮಾಜಿಕ ನ್ಯಾಯ, ಸಾರ್ವಭೌಮತ್ವ ಮೊದಲಾದ ಉದಾತ್ತ ಮೌಲ್ಯಗಳು ನಮ್ಮ ಸಂವಿಧಾನದ ಆಶಯಗಳಾಗಿವೆ. ಸಾಮಾಜಿಕ ನ್ಯಾಯ ವ್ಯವಸ್ಥೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಾಮರಸ್ಯ ನೆಲೆ ನಿಂತು ನವ ಭಾರತದ ಕನಸು ಈಡೇರುವುದು ಎಂದು ನಾಲಂದಾ ಕಾಲೇಜು ಅರ್ಥಶಾಸ್ತ್ರ ವಿಭಾಗ ಉಪನ್ಯಾಸಕಿ ಗೀತಾ ವಿ.ಭಟ್ ಹೇಳಿದರು.

ಪೆರ್ಲ ನಾಲಂದ ಮಹಾ ವಿದ್ಯಾಲಯದ ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ಗುರುವಾರ ನಡೆದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

Geetha-V-Bhat

ಸಾಮಾಜಿಕ ಕಟ್ಟುಪಾಡು, ಜಾತಿ ಪದ್ಧತಿ, ಆರ್ಥಿಕ ಅಸಮಾನತೆಗಳು ಭಾರತದ ಅಭಿವೃದ್ಧಿಯನ್ನು ಕುಂಠಿತ ಗೊಳಿಸುತ್ತಿದೆ. ಸಾಮಾಜಿಕ ನ್ಯಾಯ ವ್ಯವಸ್ಥೆಯಿಂದ ಸಾಮಾಜಿಕ ನ್ಯೂನತೆಗಳನ್ನು ತಕ್ಕ ಮಟ್ಟಿಗೆ ಪರಿಹರಿಸಬಹುದು. ರಾಷ್ಟ್ರದ ಅಂತರಿಕ ಶಾಂತಿಗೆ ಪೂರಕವಾದ ಅಮೂಲ್ಯ ವಿಚಾರಗಳು, ಜನ ಮನಕ್ಕೆ ಇನ್ನೂ ಪರಿಣಾಮಕಾರಿಯಾಗಿ ತಲುಪದಿರುವುದು ದುರದೃಷ್ಟಕರ. ಸಾಮಾಜಿಕ ಆಲೋಚನೆಗಳು, ಚಿಂತನೆಗಳು ಈ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗಿದ್ದು ಅವುಗಳನ್ನು ಕಾರ್ಯರೂಪಕ್ಕೆ ತರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವಕಾಶ ಸಿಗಲಿಲ್ಲ ಎಂದು ಕೈಕಟ್ಟಿ ಕೂರದೆ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸಲು ಶ್ರಮಿಸಬೇಕು. ವೈಯಕ್ತಿಕ ಸುಖ, ಜೀವನದ ಸಾಧನೆಯೊಂದಿಗೆ ಎಲ್ಲಾ ಸಮುದಾಯ ಬಾಂಧವರನ್ನೂ ಮುನ್ನಡೆಸಿಕೊಂಡು ಹೋಗುವಲ್ಲಿ ನಮ್ಮಿಂದಾಗುವ ಕೊಡುಗೆ ನೀಡಬೇಕು. ಜ್ಞಾನವಂತರಾಗಿ ಒಗ್ಗಟ್ಟಿನಿಂದ ಮುನ್ನಡಿ ಇರಿಸಿದರೆ ಮಾತ್ರ ನಮ್ಮ ಹಕ್ಕುಗಳನ್ನು ಸಂಪೂರ್ಣವಾಗಿ ಗಳಿಸಬಹುದು. ಸಮಾಜದಲ್ಲಿ ಶೋಷಣೆ, ಅನ್ಯಾಯ ಇರುವಲ್ಲಿಯವರೆಗೆ ಸ್ವಾತಂತ್ರ್ಯ ಅರ್ಥ ಪೂರ್ಣವಾಗದು. ಶಿಕ್ಷಣವು ಅರಿವಿನ ಜತೆಗೆ ಆತ್ಮವಿಶ್ವಾಸ ಒದಗಿಸುವ ಅಸ್ತ್ರವಾಗಿದೆ. ಪ್ರತಿಯೊಬ್ಬರು  ತಮ್ಮ ಜವಾಬ್ದಾರಿ ಅರಿತು ಪ್ರವೃತ್ತರಾದಲ್ಲಿ ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಬಹುದು ಎಂದರು.

Suresh-KM

ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ.ಎಂ. ಮಾತನಾಡಿ, ಭಾರತವು ಸರ್ವ ಧರ್ಮಗಳ ದೇಶವಾಗಿದ್ದು ಸಮಾನ ನ್ಯಾಯ, ಸಮಬಾಳು ಅಳವಡಿಸಿಕೊಂಡಿರುವ ಏಕೈಕ ರಾಷ್ಟ್ರವಾಗಿದೆ. ಹಲವು ಧರ್ಮ, ವೈವಿಧ್ಯ ಸಂಸ್ಕೃತಿಗಳಿಂದ ಕೂಡಿದ್ದರೂ ಧಾರ್ಮಿಕ ಅಸ್ಪೃಶ್ಯತೆ ಸಾಮಾಜಿಕ ಅಸಮಾನತೆ ಉಳಿದಿರುವುದು ಸಾಮಾಜಿಕ ನ್ಯಾಯದಿಂದ ವಂಚಿತರಾಗುವ ಉದಾಹರಣೆಗಳೂ ಬಹಳಷ್ಟಿವೆ. ಯುವ ಜನತೆ ಸಂಘಟಿತರಾಗಿ ಸೆಟೆದು ನಿಂತು ಸಾಮಾಜಿಕ ಪಿಡುಗುಗಳ ನಿವಾರಣೆಗೆ ಪ್ರಯತ್ನಿಸಬೇಕು ಎಂದರು.

ಎನ್ನೆಸ್ಸೆಸ್ ಕಾರ್ಯದರ್ಶಿ ರೂಪ, ಧನ್ಯ, ನಿಶ್ಚಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚೈತ್ರ ಸ್ವಾಗತಿಸಿ, ರಕ್ಷಿತ್ ವಂದಿಸಿದರು. ಜಗತ್ ನಿರೂಪಿಸಿದರು.