ಮಾನವನಂತೆ ಪ್ರಾಣಿಗಳೂ ಪ್ರಕೃತಿಯ ಒಂದಂಗ ಅವನಿಗಿರುವಷ್ಟೇ ಸ್ವಾತಂತ್ರ್ಯ ಪ್ರಾಣಿಗಳಿಗೂ ಇವೆ ಎಂದು ಕೇರಳ ಪಶು ಸಂಗೋಪನಾ ಇಲಾಖೆಯ ಮಿಥುನ್ರವರು ನುಡಿದರು. ಅವರು ಪೆರ್ಲ ನಾಲಂದ ಕಾಲೇಜಿನ ಎನ್.ಎಸ್.ಎಸ್. ವತಿಯಲ್ಲಿ ನಡೆದ ವಿಶ್ವ ಪ್ರಾಣಿ ದಿನದ ಸಭೆಯಲ್ಲಿ ಅತಿಥಿಗಳಾಗಿ ಮಾತನಾಡುತ್ತ ಪ್ರಾಣಿಗಳಲ್ಲೂ ಮಾನವನಂತೆ ಸ್ನೇಹ ಭಾವ ಮತ್ತು ಸ್ವಾಮಿ ನಿಷ್ಠೆಯನ್ನು ಕಾಣಬಹುದು. ಕೇರಳದಲ್ಲಿ ಹಸು, ಆಡು, ನಾಯಿ ಮುಂತಾದ ಸಾಕುಪ್ರಾಣಿಗಳ ಪೋಷಣೆ ಕಡಿಮೆಯಾಗುತ್ತಿದೆ. ಅಂತಹ ಪ್ರಾಣಿಗಳನ್ನು ಸಂರಕ್ಷಿಸಿಕೊಂಡು ಬಂದರೆ ಮಾನವನ ಬದುಕಿಗೆ ಸಹಕಾರಿಯಾಗುತ್ತದೆ. ಎಂದು ತಿಳಿಸಿ ಪ್ರಾಣಿ ರಕ್ಷಣೆಯ ಪ್ರತಿಜ್ಞೆಯನ್ನು ಬೋಧಿಸಿದರು.
ಚೈಲ್ಡ್ ಲೈನ್ನ ಇನ್ಸ್ಪೆಕ್ಟರ್ ಅನೀಶ್ ಜೋಸ್ರವರು ಮಾತನಾಡುತ್ತ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ, ಮನೆಗಳಲ್ಲಿ, ಊರಿನಲ್ಲಿ ಹಿಂಸೆಗಳು ನಡೆಯುತ್ತಿದ್ದರೆ ಚೈಲ್ಡ್ ಲೈನ್ ಕೇರ್ ನಿಮ್ಮ ಸಹಾಯಕ್ಕಿದೆ ಎಂಬ ವಿಚಾರವನ್ನು ಮತ್ತು ಅದಕ್ಕೆ ಸಂಬಂಧಿಸಿದ ನಿಯಮ ನಿಬಂಧನೆಗಳನ್ನು ತಿಳಿಸಿದರು. ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಕೆ.ಶಿವಕುಮಾರ್ ರವರು ಭಾರತೀಯ ಸಂಸ್ಕೃತಿಯಲ್ಲಿ ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿ ಸಾಕುಪ್ರಾಣಿಗಳು ಬರುತ್ತವೆ. ಆದರೆ ಇಂದು ನಾವು ಪ್ರತಿಜ್ಞೆ ಸ್ವೀಕರಿಸುವ ದುರವಸ್ಥೆಗೆ ಬರುವಂತಾಯಿತು ಎಂದು ವಿಷಾದ ವ್ಯಕ್ತ ಪಡಿಸಿದರು. ಹಿಂದಿನ ಕಾಲದಲ್ಲಿ ಪಶುಗಳು ಮಾನವನ ಸಂಪತ್ತಾಗಿತ್ತು. ನಮ್ಮ ಪೂರ್ವಜರು ಪ್ರಾಣಿಪಕ್ಷಿಗಳಲ್ಲಿ ದೇವರನ್ನು ಕಂಡವರು. ನಾವು ಹಾಗೆ ಕಂಡರೆ ಮಾತ್ರ ನಮಗೆ ನೆಮ್ಮದಿಯ ಬದುಕು ಬದುಕಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ಅಧ್ಯಕ್ಷತೆ ವಹಿಸಿ ನುಡಿಯುತ್ತ ಪ್ರಾಣಿಗಳ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ, ಸಂಬೋಧನೆಗಳು ನಡೆದರೆ ಮಾತ್ರ ಹಳ್ಳಿಗಳು ಅಭಿವೃದ್ಧಿ ಯಾಗಲು ಸಾಧ್ಯ. ಇಲ್ಲವಾದರೆ. ಮುಂದಿನ ಮಕ್ಕಳಿಗೆ ಪ್ರಾಣಿಗಳ ಚಿತ್ರವನ್ನು ತೋರಿಸಿ ಅವುಗಳ ಪರಿಚಯಮಾಡುವ ದುರವಸ್ಥೆ ಬರಬಹುದು. ಪ್ರಾಣಿಗಳ ಕಡೆಗೆ ಯುವಜನಾಂಗ ಮನಹರಿಸಿದರೆ ಮಾತ್ರ ಅದು ಉಳಿಯುವುದು ನಾವು ಬೆಳೆಯುವುದು ಎಂದರು.
ಚೈಲ್ಡ್ ಲೈನ್ ಕೇರ್ನ ಕೋ ಓರ್ಡಿನೇಟರ್ ಉದಯ ಕುಮಾರ್ ಮತ್ತು ಎನ್. ಎಸ್ ಎಸ್ ಯೋಜನಾಧಿಕಾರಿ ಉಪನ್ಯಾಸಕ ಸುರೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರದೀಪ್ ಸ್ವಾಗತಿಸಿ, ಚೈತ್ರ ವಂದಿಸಿದರು. ವಿದ್ಯಾರ್ಥಿನಿ ಕವಿತಾ ನಿರೂಪಿಸಿದರು. ಎನ್. ಎಸ್.ಎಸ್. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.