ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಅಂತಃಸತ್ವವನ್ನು ವಿಶ್ವಕ್ಕೆ ತಿಳಿಸಿಕೊಟ್ಟ ಮಹಾತ್ಮರು ವಿವೇಕಾನಂದರು ಎಂದು ಪೆರ್ಲ ನಾಲಂದ ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಕೆ.ಶಿವಕುಮಾರ್ ರವರು ನುಡಿದರು. ಅವರು ನಾಲಂದ ಕಾಲೇಜಿನಲ್ಲಿ ನಡೆದ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದ 125ನೇ ವರ್ಷಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡುತ್ತ ಭಾರತ ದರಿದ್ರರ ದೇಶ, ಭಿಕ್ಷುಕರ ದೇಶ ಎಂದು ತಾತ್ಸಾರ ಮಾಡುತ್ತಿದ್ದ ವಿಶ್ವದ ಇತರ ದೇಶದ ಜನರಿಗೆ ಪ್ರೀತಿಯ, ವಾತ್ಸಾಲ್ಯದ ಬೀಜವನ್ನು ಬಿತ್ತಿ ವಿಶ್ವದ ಅಂತಃಚಕ್ಷುವನ್ನು ತೆರೆಸಿದ ವಿಶ್ವಗುರು ಎಂದರು. ’ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ಮುನ್ನುಗ್ಗಿ’ ಎಂಬ ವಿಶ್ವವಾಣಿಯನ್ನು ಮೊಳಗಿಸಿ ಯುವಕರನ್ನು ಬಡಿದೆಬ್ಬಿಸಿದ ಕೇಸರಿಯವರು. ’ವಸು ದೈವ ಕುಟುಂಬಕಂ’ ’ ಲೋಕಾಃಸಮಸ್ತಾ ಸುಃಖಿನೋ ಬವಂತು’ ಎಂಬ ಭಾರತೀಯ ಚಿಂತನೆಯನ್ನು ಜಗತ್ತಿಗೆ ಸಾರಿದ ದಾರ್ಶನಿಕರು. ವಿವೇಕಾನಂದರ ಎರಡು ಮಾತುಗಳು ವಿಶ್ವವನ್ನೇ ಪರಿವರ್ತಿಸಿ ಭಾರತೀಯ ಸಂಸ್ಕೃತಿಗೆ ಅತ್ಯುನ್ನತ ಮಹತ್ವವನ್ನು ತಂದುಕೊಟ್ಟ ಆ ದಿನವನ್ನು ಮತ್ತೆ,ಮತ್ತೆ ನೆನಪಿಸುವ ಅಗತ್ಯವಿದೆ. ಅವರ ತತ್ವಾದರ್ಶಗಳು ಯುವಕರಿಗೆ ಪ್ರೇರಣೆಯಾಗಲಿ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ವಿಶ್ವಕ್ಕೆ ಸೋದರತ್ವದ ಕಲ್ಪನೆಯನ್ನು ತಂದುಕೊಟ್ಟ ವಿವೇಕಾನಂದರನ್ನು ಸ್ಮರಿಸಿಕೊಳ್ಳುವುದೆ ನಮ್ಮ ಶಕ್ತಿ. ಅಂದು ದರಿದ್ರರೆನಿಸಿಕೊಂಡ ನಾವು ಇಂದು ಶ್ರೀಮಂತರೆನಿಸಿಕೊಳ್ಳುವಂತಾದದ್ದು ಅವರ ಪ್ರೇರಣ ಶಕ್ತಿಯಿಂದ ಎಂದರು. ಆಂಗ್ಲ ಭಾಷಾ ಉಪನ್ಯಾಸಕಿ ಕು| ಕೃಷ್ಣವೇಣಿ ಸ್ವಾಗತಿಸಿ ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಅಮೃತಾ ವಂದಿಸಿದರು. ಮಲೆಯಾಳಂ ಉಪನ್ಯಾಸಕಿ ಕುಮಾರಿ ರೆಜಿನಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ, ಉಪನ್ಯಾಸಕಿಯರು ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.