ವಿದ್ಯಾರ್ಥಿಗಳಲ್ಲಿ ವ್ಯಕ್ತಿ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ ಮತ್ತು ದೇಶ ಪ್ರಜ್ಞೆ ಬೆಳೆಯಲು ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಪ್ರಮುಖವಾದದ್ದು ಎಂದು ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಅರುಣ ಪ್ರಕಾಶ್ ನುಡಿದರು.
ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮನುಷ್ಯನಲ್ಲಿ ಮಾನವಿಯತೆಯನ್ನು, ಪರಿಸರ ಪ್ರೇಮವನ್ನು ಬೆಳೆಸುವಂತೆ ಎನ್.ಎಸ್.ಎಸ್ ಮಾಡುತ್ತದೆ.
ಎನ್.ಎಸ್.ಎಸ್ ನಲ್ಲಿ ವಿದ್ಯಾರ್ಥಿ ದೆಸೆಯಿಂದ ತೊಡಗಿಸಿಕೊಂಡರೆ ಬೌದ್ಧಿಕ, ದೈಹಿಕ ದೃಢತೆಯೊಂದಿಗೆ ಜನಮನ್ನಣೆಯೂ ದೊರಕುತ್ತದೆ. ಬದುಕಿನಲ್ಲಿ ಎಂತಹ ಸಮಸ್ಯೆಗಳೆದುರಾದರೂ ಅವುಗಳನ್ನು ಮೆಟ್ಟಿ ನಿಲ್ಲುವ ಮತ್ತು ಮುನ್ನುಗ್ಗಿ ಗುರಿ ಸಾಧಿಸುವ ಆತ್ಮ ಸ್ಥೈರ್ಯ ತುಂಬಿಕೊಳ್ಳುತ್ತದೆ. ಮಾನವನಲ್ಲಿರುವ ಕ್ರೌರ್ಯತೆಯು ನೀಗಿ ಜಾತಿ, ಮತ ಧರ್ಮ ಭೇದವನ್ನು ಮರೆತು ಸಮಾನತೆ ಸೋದರತ್ವದ ಭಾವ ನಮ್ಮಲ್ಲಿ ಬೆಳೆಯುವಂತೆ ಮಾಡುತ್ತದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ|ವಿಘ್ನೇಶ್ವರ ವರ್ಮುಡಿಯವರು ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಲ್ಲಿ ಸಮರ್ಪಣಾ ಮನೋಭಾವ ಮತ್ತು ಬದ್ಧತೆಯನ್ನು ಎನ್.ಎಸ್.ಎಸ್ ತಂದುಕೊಡುತ್ತದೆ ಎಂದರು.
ಕಾಲೇಜಿನ ಕಾರ್ಯ ನಿರ್ವಹಣಾಧಿಕಾರಿ ಯೋಜನಾಧಿಕಾರಿ ಉಪನ್ಯಾಸಕ ಸುರೇಶ್ರವರು ಸ್ವಾಗತಿಸಿ ವಿದ್ಯಾರ್ಥಿನಿ ಭವ್ಯಶ್ರೀ ವಂದಿಸಿದರು. ವಿದ್ಯಾರ್ಥಿನಿ ಮಹಿಮಾ ಕಾರ್ಯಕ್ರಮ ನಿರೂಪಿಸಿದರು.