ಪ್ರಕೃತಿಯಲ್ಲಿ ಚೈತನ್ಯ ತುಂಬಿ ತುಳುಕುವ ಕಾಲ ವಸಂತ ಋತು. ಅದರ ಆರಂಭದ ದಿನವನ್ನು ಹಿಂದುಗಳು ಯುಗಾದಿ ಹಬ್ಬವಾಗಿ ಆಚರಿಸುತ್ತಾರೆ ಎಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಕಾರ್ಯನಿರ್ವಹಣಾಧಿಕಾರಿ ಕೆ.ಶಿವಕುಮಾರ್ರವರು ನುಡಿದರು. ಕಾಲೇಜಿನ ಯುಗಾದಿ ಹಬ್ಬದ ಆಚರಣೆಯಲ್ಲಿ ಶುಭವನ್ನು ಹಾರೈಸುತ್ತಾ ಗಣಿತ ಶಾಸ್ತ್ರವನ್ನು ಅವಲಂಬಿಸಿಕೊಂಡು ಜೋತಿಷ್ಯ ಶಾಸ್ತ್ರ ನಿಂತಿದೆ. ಅದನ್ನು ಹೊಂದಿಕೊಂಡು ಹಿಂದುಗಳ ಆಚರಣೆಗಳು ನಡೆಯುತ್ತವೆ. ಚೈತ್ರ ಮಾಸದ ಬಗೆಗೆ ಹಾಡದ ಕವಿಗಳಿಲ್ಲ. ಪ್ರಕೃತಿಯಲ್ಲಿ ಕೊರಡೂ ಕೊನರುತ್ತದೆ. ಮರಗಿಡಗಳು ಸಂಪದ್ಭರಿತವಾಗುತ್ತದೆ. ಪ್ರಕೃತಿಯ ಒಂದಂಗವಾದ ಮಾನವನಿಗೂ ಸುಖದ ಸಂಪತ್ತಿನ ಕಾಲ ಇದಾಗಿದೆ. ಆದುದರಿಂದ ಉತ್ತರ ಭಾರತದವರು ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ದಕ್ಷಿಣದವರಾದ ನಾವು ಸೌರಮಾನ ಯುಗಾದಿಯನ್ನು ’ವಿಶು’ ಎಂಬ ಹೆಸರಿನಲ್ಲಿ ಆಚರಿಸುತ್ತೇವೆ. ಚಂದ್ರ ಮತ್ತು ಸೂರ್ಯರೆಂಬ ಎರಡು ಆಕಾಶಕಾಯಗಳನ್ನು ಹೊಂದಿಕೊಂಡು ನಮ್ಮ ಬದುಕನ್ನು ನಡೆಸುತ್ತೇವೆ ಎಂದು ಯುಗಾದಿಯ ಮಹತ್ವವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ನಿರ್ವಹಿಸಿ, ಸಮರಸವೇ ಜೀವನ, ಕಷ್ಟ ಬಂದಾಗ ಕುಗ್ಗ ಬಾರದು, ಸುಖ ಬಂದಾಗ ಹಿಗ್ಗ ಬಾರದು ಅವೆರಡು ಜೊತೆ ಜೊತೆಗಿರುತ್ತವೆ ಎಂದು ತಿಳಿಸಿ ಬಂದುದನ್ನು ಎದುರಿಸುವ ಶಕ್ತಿ ನಿಮಗೆ ಬರಲಿ ಎಂದು ಶುಭಹಾರೈಸಿ ಸಹೋದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಬೇವು ಬೆಲ್ಲವನ್ನು ಹಂಚಿದರು. ವಿದ್ಯಾರ್ಥಿ ನಾಯಕ ಅರ್ಪಿತ್ ಶುಭ ಹಾರೈಸಿದರು. ಉಪನ್ಯಾಸಕ ಕೆ.ಕೇಶವ ಶರ್ಮ ಸ್ವಾಗತಿಸಿ, ಶ್ರೀನಿಧಿ ವಂದಿಸಿದರು.