ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಲ್ಲಿ ವಿಶ್ವ ಮಹಿಳಾದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಎಣ್ಮಕಜೆ ಗ್ರಾಮಪಂಚಾಯತ್ತಿನ ಅಧ್ಯಕ್ಷೆ ಶ್ರೀಮತಿ ರೂಪವಾಣಿ ಆರ್. ಭಟ್ರವರು ಮಾತನಾಡುತ್ತ ಹಿಂದೆ ಸ್ತ್ರೀಯರು ನಾಲ್ಕು ಗೋಡೆಗಳ ಮಧ್ಯೆ ಅಂತರ್ಮುಖಿಗಳಾಗಿ ಬಾಳುವ ಕಾಲ ಬಂದಿತ್ತು, ಇಂದು ಹಾಗಲ್ಲ ಇದ್ದ ಸ್ವಾತಂತ್ರ್ಯವನ್ನು ಬಳಸಿಕೊಂಡು ತಾನೇನು ಎಂಬುದನ್ನು ಸಮಾಜಕ್ಕೆ ತೋರಿಸಿಕೊಡಬೇಕು. ನಾಲ್ಕು ಗೋಡೆಯೊಳಗಿದ್ದು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಸ್ತ್ರೀಯರನ್ನು ಜರೆಯುವ, ಟೀಕಿಸುವ ಜನರಿದ್ದಾರೆಂದು ಅಂಜುತ್ತ ಕೂರದೆ ಬಂದುದನ್ನು ಮೆಟ್ಟಿನಿಂತು ಛಲದಿಂದ ಕಾರ್ಯಸಾಧನೆಯನ್ನು ಮಾಡಬೇಕು. ಸ್ತ್ರೀ ಶಕ್ತಿ ಒಗ್ಗಟ್ಟಾಗಿ ಸಮಾಜ ಕಂಟಕರ ವಿರುದ್ದ ಹೋರಾಡಬೇಕಾಗಿದೆ. ಅದಕ್ಕಾಗಿ ಸ್ತ್ರೀಯರು ಹೋರಾಟ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಸತ್ಯ, ಧರ್ಮ, ನ್ಯಾಯಕ್ಕಾಗಿ ಮುನ್ನುಗ್ಗಬೇಕು. ಹೆಣ್ಣೂಬ್ಬಳು ವಿದ್ಯಾವಂತಳಾದರೆ ಅವಳ ಕುಟುಂಬ, ಸಮಾಜ, ದೇಶ ಅಭಿವೃದ್ಧಿ ಹೊಂದುತ್ತದೆ. ಪುರುಷ ಮತ್ತು ಸ್ತ್ರೀ ಸಮಾಜದ ಕಣ್ಣುಗಳಿದ್ದಂತೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಪುರುಷ ಯಾವುದೇ ಸಾಧನೆಯನ್ನು ಸಾಧಿಸಬೇಕಾದರೆ ಅದರ ಹಿಂದೆ ಸ್ತ್ರೀ ಶಕ್ತಿಯೊಂದಿಗೆ ಎಂದರು. ಕಾಲೇಜಿನ ಆಡಳಿತಾಧಿಕಾರಿ ಕೆ. ಶಿವಕುಮಾರ್, ಭೂಮಿತ್ರ ಸೇನಾ ಸಂಚಾಲಕರು ಉಪನ್ಯಾಸಕ ರಂಜಿತ್ ಕುಮಾರ್. ಎನ್.ಎಸ್.ಎಸ್. ಯೊಜನಾಧಿಕಾರಿ ಶಂಕರ್ ಖಂಡಿಗೆ, ಮಲೆಯಾಳಂ ಉಪನ್ಯಾಸಕಿ ಶ್ರೀಮತಿ ವಿನೀಶಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೃಷ್ಣಪ್ರಿಯ ಸ್ವಾಗತಿ, ನಯನಶ್ರೀ ವಂದಿಸಿದರು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ, ಉಪನ್ಯಾಸಕಿಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.