ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಲ್ಲಿ ’ಮಾನವೀಯ ಸಂಬಂಧಗಳು ಮತ್ತು ನಾಯಕತ್ವ ಗುಣ’ ಎಂಬ ವಿಷಯದ ಬಗೆಗೆ ಕಾಲೇಜಿನಲ್ಲಿ ಒಂದು ದಿನದ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ವಿಟ್ಲ ಜೆ.ಸಿ.ಐ. ಟ್ರೈನರ್ ಹಸನ್ ವಿಟ್ಲ ಭಾಗವಹಿಸಿದ್ದರು. ಮಾನವ ಹುಟ್ಟುವಾಗ ಮನುಷ್ಯ ರೂಪದ ಪ್ರಾಣಿಯಾಗಿರುತ್ತಾನೆ. ಬೆಳೆಯುತ್ತ ಸಂಸ್ಕಾರಗೊಂಡ ಮಾನವನಾಗುತ್ತಾನೆ. ನಮ್ಮಲ್ಲಿರುವ ಕೆಟ್ಟದನ್ನು ಕಳೆದು ಒಳ್ಳೆಯದನ್ನು ಇತರರಿಗಾಗಿ ಸವೆಸಿ ಉತ್ತಮ ಮಾನವರಾಗೋಣ. ನಾವು ಇತರರನ್ನು ತಿದ್ದುವುದಕ್ಕಿಂತ ಮೊದಲು ನಾವು ನಮ್ಮನ್ನು ಸರಿಮಾಡೋಣ ಎಂದು ಅವರು ನುಡಿದರು. ಭಾರತೀಯ ಸಂಸ್ಕೃತಿಯಲ್ಲಿ ಮಾನವೀಯ ಸಂಬಂಧಗಳಿಗೆ ಪವಿತ್ರವಾದ ಸ್ಥಾನವಿದೆ. ಆದರೆ ಇಂದು ಮನುಷ್ಯನಲ್ಲಿ ಮಾನವೀಯ ಸಂಬಂಧಗಳು ಕೆಡುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ನಾವು ಉತ್ತಮವಾದ ಮಾನವೀಯ ಸಂಬಂಧಗಳನ್ನು ಬೆಸೆದು ಅರ್ಥಪೂರ್ಣ ಬದುಕನ್ನು ನಡೆಸೋಣ ಎಂದು ತಿಳಿಸಿದರು.
ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಉಪನ್ಯಾಸಕ ಶಂಕರ ಖಂಡಿಗೆಯವರು ಅಧ್ಯಕ್ಷತೆ ವಹಿಸಿದರು. ವಿಟ್ಲ ಜೆ.ಸಿ.ಐ ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ಯಶಸ್ವಿನಿ, ಎನ್.ಎಸ್.ಎಸ್. ಕಾರ್ಯದರ್ಶಿಗಳಾದ ಪ್ರದೀಪ್, ನಯನ, ಪವಿತ್ರ, ವಿತೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನೀತಶ್ರೀ ಸ್ವಾಗತಿಸಿ ಧನ್ಯಾ ವಂದಿಸಿದರು. ಎನ್.ಎಸ್.ಎಸ್. ಕಾರ್ಯದರ್ಶಿ ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಗಾರದಲ್ಲಿ ಭಾಗವಹಿಸಿದರು.