ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿಶೇಷ ಶಿಬಿರದಲ್ಲಿ ’ಇಂಧನ ಸಂರಕ್ಷಣೆ’ ಎಂಬ ವಿಷಯದ ಬಗೆಗೆ ಸಂಪನ್ಮೂಲ ವ್ಯಕ್ತಿಯಾಗಿ ಕೇರಳ ವಿದ್ಯುಚ್ಚಕ್ತಿ ಇಲಾಖೆಯ ಇಂಜಿನಿಯರ್ ನಾಗರಾಜ ಭಟ್ಟರವರು ಮಾತನಾಡುತ್ತ ಇಂದಿನ ಯಾಂತ್ರಿಕ ಯುಗದಲ್ಲಿ ಇಂಧನಗಳಿಲ್ಲದೆ ದೈನಂದಿನ ಬದುಕು ನಡೆಯಲಾರದು ಎಂಬ ಪರಿಸ್ಥಿತಿ ಬಂದಿದೆ. ಅದು ತಿಳಿದಿದ್ದರೂ ಜನರು ಇಂಧನವನ್ನು ವ್ಯರ್ಥವಾಗಿ ಹಾಳು ಮಾಡುತ್ತಿದ್ದಾರೆ. ಒಮ್ಮೆ ನಷ್ಟವಾದುದು ಮತ್ತೆ ದೊರಕಲಾರದು. ಆದುದರಿಂದ ಪ್ರತಿಯೊಬ್ಬ ವ್ಯಕ್ತಿ ಇಂಧನದ ಮಹತ್ವವನ್ನು ಅರಿತು ಮಿತವಾಗಿ ಬಳಸಿದರೆ ಕೊರತೆ ಕಂಡುಬರಲಾರದು. ಬೆಳವಣಿಗೆಯ ವೇಗ ಹೆಚ್ಚಿದಂತೆ ಇಂಧನದ ಬಳಕೆ ಹೆಚ್ಚುತ್ತದೆ, ಅದಕ್ಕೆ ಹೊಂದಿಕೊಂಡು ಉತ್ಪಾದನೆಯಾಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಎಚ್ಚರವಹಿಸಬೇಕು ಎಂದರು.
ನಲ್ಕ ಬನಾರಿ ಎಸ್. ಸಿ. ಕಾಲೊನಿಯಲ್ಲಿ ನಡೆದ ಈ ಸಭೆಯ ಅಧ್ಯಕ್ಷತೆಯನ್ನು ಚುಕ್ರ ಬನಾರಿಯವರು ನಿರ್ವಹಿಸಿದರು. ಎನ್. ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಸುರೇಶ್, ಉಪನ್ಯಾಸಕಿ ಮಾಲಿನಿ ಮತ್ತು ಸಿಬ್ಬಂದಿ ವರ್ಗದ ವಿಶಾಲ, ಜಯರಾಮ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಶಿಬಿರಾರ್ಥಿಗಳು ಎಸ್.ಸಿ. ಕಾಲನಿಯ ಮನೆಗಳನ್ನು ಸಂದರ್ಶಿಸಿ ಕ್ಷೇಮ ಸಮಾಚಾರವನ್ನು ವಿಚಾರಿಸಿದರು. ಎನ್.ಎಸ್.ಎಸ್. ಕಾರ್ಯದರ್ಶಿಗಳಾದ ಪ್ರದೀಪ್, ನಯನ, ಪವಿತ್ರ ಮೊದಲಾದವರು ಮುಂದಾಳತ್ವವನ್ನು ವಹಿಸಿದರು.