ಉನ್ನತ ಮಟ್ಟದ ತಂತ್ರಜ್ಞಾನದ ಬಳಕೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಇನ್ನೂ ಕಲಿಯುವಂತದ್ದು ಸಾಕಷ್ಟಿವೆ. ಅಂತಹಾ ಜ್ಞಾನದ ಅಭಿವೃದ್ದಿಗೆ ಮುಂದಿನ ಪೀಳಿಗೆಯು ಸೂಕ್ತವಾಗಿದೆ. ಗ್ರಾಮೀಣ ಬದುಕಲ್ಲಿ ತಂತ್ರಜ್ಞಾನವನ್ನು ಪಸರಿಸಲು ಇಂದಿನ ವಿದ್ಯಾರ್ಥಿ ಸಮೂಹವು ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸುವತ್ತ ಕಾರ್ಯಪ್ರವೃತ್ತರಾಗಬೇಕು. ಅಂತೆಯೇ ವಿದ್ಯಾರ್ಥಿ ಸಮೂಹವು ಬರುವಂತಹ ಅವಕಾಶಗಳ ಸದ್ವಿನಿಯೋಗ ಮಾಡುವತ್ತ ಗಮನಹರಿಸಬೇಕು. ಹಾಗಾದಲ್ಲಿ ಮಾತ್ರವೇ ಕಲಾಂರ ಗ್ರಾಮೀಣ ವಿಕಾಸದ ಕನಸು ನನಸಾಗಲು ಸಾಧ್ಯ ಎಂದು ಇಸ್ರೋ (ಐ.ಎಸ್.ಆರ್.ಒ)ದ ನಿವೃತ್ತ ಖಗೋಳ ವಿಜ್ಞಾನಿ ಪ್ರೊ. ಯಂ. ಕೃಷ್ಣಸ್ವಾಮಿಯವರು ನುಡಿದರು. ಅವರು ಪೆರ್ಲ ನಾಲಂದಾ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಖಗೋಳ ವಿಜ್ಞಾನದ ಧನಾತ್ಮಕ ಚಿಂತನೆಗಳನ್ನು ವಿಸ್ಮಯಕರ ಬೆಳವಣಿಗೆಗಳನ್ನು ಹಾಗೂ ಉಪಗ್ರಹಗಳ ಉಡಾವಣೆಯ ಕುರಿತಂತೆ ವಿಶೇಷ ಉಪನ್ಯಾಸವನ್ನು ನೀಡಿದರು.
ಸಂಸ್ಥೆಯ ಖಜಾಂಜಿ ಗೋಪಾಲ ಚೆಟ್ಟಿಯಾರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಶಂಕರನಾರಾಯಣ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಆಡಳಿತಾಧಿಕಾರಿ ಕೆ. ಶಿವಕುಮಾರ್ ಸ್ವಾಗತಿಸಿ, ಉಪನ್ಯಾಸಕಿ ಸಾಜಿದಾ ವಂದಿಸಿದರು. ಉಪನ್ಯಾಸಕ ಕಿಶನ್ ಪಳ್ಳತಡ್ಕ ಹಾಗೂ ಉಪನ್ಯಾಸಕಿ ಶ್ರುತಿ ಯು.ಜಿ ಕಾರ್ಯಕ್ರಮ ನಿರೂಪಿಸಿದರು. ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು, ಕೃಷ್ಣಸ್ವಾಮಿಗಳ ಶ್ರೀಮತಿಯವರು, ಕಾಲೇಜಿನ ಆಡಳಿತ ಮಂಡಳಿಯವರು, ಕಾಲೇಜಿನ ವಿದ್ಯಾರ್ಥಿ ನಾಯಕ ಅರ್ಪಿತ್ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ಉಪನ್ಯಾಸಕಿಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.