ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಎನ್. ಎಸ್. ಎಸ್ ಘಟಕದ ಸಹಯೋಗದೊಂದಿಗೆ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ನಾಲಂದ ಆಡಳಿತಮಂಡಳಿಯ ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಡಾ| ಉಕ್ಕಿನಡ್ಕ ಮಾತನಾಡುತ್ತ ಯೋಗ ಎಂಬುದು ಒಂದು ಮತೀಯ ಚಿಂತನೆಯಲ್ಲ ಅದೊಂದು ಧರ್ಮ. ಮಾನವ ತನ್ನ ಜೀವನದಲ್ಲಿ ಒಂದು ಗುರಿಯನ್ನು ಸಾಧಿಸಲು ಯೋಗ ಅಗತ್ಯ. ಅದನ್ನು ಅಭ್ಯಾಸ ಮಾಡಿದರೆ ಮನಸ್ಸು ಶುದ್ಧವಾಗುತ್ತದೆ. ಜೀವನ ಸಾರ್ಥಕಗೊಳ್ಳುತ್ತದೆ, ರೋಗ ದೂರವಾಗುತ್ತದೆ ಎಂದು ನುಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ಟ ಅವರು ಮುಖ್ಯ ಅತಿಥಿಗಳಾಗಿ ಜಗತ್ತಿಗೆ ಯೋಗ, ಕಾಲಗಣನೆ ಮತ್ತು ಸೊನ್ನೆಯನ್ನು ತಿಳಿಯಪಡಿಸಿದ ಶ್ರೇಷ್ಠ ಪರಂಪರೆಯನ್ನು ಹೊಂದಿದ ನಾಡು ಭಾರತ. ಜಗತ್ತಿಗೆ ಬೆಳಕನ್ನು ಕೊಟ್ಟವರು ನಮ್ಮವರು. ನಾವು ಯೋಗವನ್ನು ಒಂದು ದಿನಕ್ಕೆ ನಿಲ್ಲಿಸಬಾರದು ನಿತ್ಯ ನಿರಂತರವಾಗಿ ಮಾಡುವುದರ ಮೂಲಕ ಯೋಗ ನಮ್ಮ ಉಸಿರಾಗಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಮಾನಸಿಕ ಸ್ಥಿಮಿತ ಬರಬೇಕಾದರೆ ಯೋಗ ಬೇಕು ಎಂದು ಕಾಲೇಜಿನ ಆಡಳಿತಾಧಿಕಾರಿ ಕೆ. ಶಿವಕುಮಾರ್ ನುಡಿದರು. ಕಾಲೇಜಿನ ಪಾಂಶುಪಾಲ ಪ್ರೋ ಪಿ. ಶಂಕರನಾರಾಯಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಮಲಯಾಳ ಉಪನ್ಯಾಸಕಿ ಶ್ರೀಮತಿ ವಿನೀಶ ಸ್ವಾಗತಿಸಿ, ವಿದ್ಯಾರ್ಥಿನಿ ನಯನ ವಂದಿಸಿದರು. ಹಿಂದಿ ಉಪನ್ಯಾಸಕಿ ಶ್ರೀಮತಿ ಶಾಂಭವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅನಂತರ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡರು.