ಜೀವಜಲ ಕಿರುಚಿತ್ರ ಬಿಡುಗಡೆ
ಪೆರ್ಲ: ನಾಲಂದ ಮಹಾವಿದ್ಯಾಲಯದ ಪರಿಸರ ಸಂರಕ್ಷಣೆಯತ್ತ ಜನಜಾಗೃತಿ ಮೂಡಿಸುವ ಕಿರುಚಿತ್ರ ಜೀವಜಲವನ್ನು ಪರಿಸರ ಸಂರಕ್ಷಣೆಯ ವಿಷಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಪಡೆದ ಪತ್ರಕರ್ತ, ಶ್ರೀಪಡ್ರೆ ಬಿಡುಗಡೆಗೊಳಿಸಿದರು. ಜೀವಜಲ ಕಿರುಚಿತ್ರದ ತಂಡವನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಸಸ್ಯ ಸಂಪತ್ತನ್ನು ವೃದ್ಧಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ವಿದ್ಯಾರ್ಥೀಗಳಿಗೆ ಕರೆ ನೀಡಿದರು.
ಅತ್ಯಂತ ಹೆಚ್ಚು ಮಳೆ ಲಭಿಸುವ ನಮ್ಮ ಕರಾವಳಿ ಪ್ರದೇಶವನ್ನೇ ಬರಪೀಡಿತ ಪ್ರದೇಶವಾಗಿ ಗುರುತಿಸಲಾಗಿದೆ ಎಂದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯ ತೀವ್ರತೆ ಎಷ್ಟರಮಟ್ಟಿಗಿರಬಹುದು ಎಂದು ಗಂಭಿರವಾಗಿ ಆಲೋಚಿಸಬೇಕಾಗಿದೆ ! ಮಳೆಯ ಲಭ್ಯತೆಯ ಹೊರತು ಈ ವರ್ಷ ಕರಾವಳಿಯಲ್ಲಿ ನಿರ್ಮಾಣವಾದ ಕೊಳವೆ ಬಾವಿಗಳ ಪರಿಣಾಮ ಭೂಮಿಯ ಅಂತರ್ಜಲ ಮಟ್ಟ ತೀವ್ರ ಕುಸಿತ ಕಾಣಲಿದೆ. ನೀರಿನ ಲಭ್ಯತೆಯನ್ನು ನಿರ್ಧರಿಸುವಲ್ಲಿ ಕಾಡಿನ ಪಾತ್ರ ಮಹತ್ವದ್ದು, ಮಾತ್ರವಲ್ಲ ಭೂಮಿಯ ಮೇಲ್ಮೈ ಮಣ್ಣಿನ ಸಂರಕ್ಷಣೆ ಇದ್ದರೆ ಮಾತ್ರ ನೀರು ಭೂಮಿಗೆ ಇಂಗುತ್ತದೆ. ಈ ನಿಟ್ಟಿನಲ್ಲಿ ಭೂಮಿಯನ್ನು ಹಚ್ಚಹಸುರಿನಿಂದಿಸುವುದು ಅತೀ ಅಗತ್ಯ ಎಂದರು.
ಅಶೋಕ್ ಮೊಟ್ಟಕುಂಜ ಇವರು ಪ್ರಾಸ್ತಾವಿಕವಾಗಿ ಜೀವಜಲ ಕಿರುಚಿತ್ರದ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾ ಚಿತ್ರದಲ್ಲಿ ಭೂಮಿಯ ಮೇಲ್ಮೈ ನೀರಿನ ಸಂರಕ್ಷಣೆ -ನೀರಿನ ಮೂಲ ಹಾಗೂ ಹರಿಯವಿಕೆಯ ಪ್ರಕಾರಗಳಾದ ತೋಡು, ಕೆರೆ, ಹಳ್ಳಗಳ ಸಂರಕ್ಷಣೆಯತ್ತ ಜಾಗೃತಿ ಮೂಡಿಸುವ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ. ಭೂಮಿಯ ಅಂತರ್ಜಲ ಮಟ್ಟ ಕಾಪಾಡುವಲ್ಲಿ ಶೀಘ್ರ ಗತಿಯಲ್ಲಿ ಪ್ರಯತ್ನ ಮಾಡಬೇಕಾಗಿದೆ. ಪರಿಸರ ಸಂರಕ್ಷಣೆಯತ್ತ ದಿಟ್ಟ ಹೆಜ್ಜೆ ಇಡುವಲ್ಲಿ ಯುವಜನತೆಗೆ ಸ್ಫೂರ್ತಿ ನೀಡಬೇಕು , ಜಲಸಾಕ್ಷರತಾ ಅಭಿಯಾನದಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಜನರನ್ನು ಕ್ರೀಯಾಶೀಲರನ್ನಾಗಿ ಮಾಡಿ ನಮ್ಮ ನಾಡಿನ ಸಸ್ಯ ಸಂಪತ್ತು,ಜಲ ಸಂಪತ್ತಿನೊಂದಿಗೆ ನೆಮ್ಮದಿಯ ಬದುಕು ಸೃಷ್ಟಿಸುವಲ್ಲಿ ನೆರವಾಗಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಶಿವಕುಮಾರ್, ಆಡಳಿತಾಧಿಕಾರಿ ನಾಲಂದ ಕಾಲೇಜು ಇವರು ವಹಿಸಿದ್ದರು. ಜಲಸಂರಕ್ಷಣೆಯತ್ತ ವಿದ್ಯಾರ್ಥಿಗಳು ಕಾರ್ಯಪ್ರವರ್ತರಾಗಬೇಕು ಮತ್ತು ಈ ಪ್ರಕ್ರಿಯೆ ನಿರಂತರವಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಉದಯ ಚೆಟ್ಟಿಯಾರ್, ಕ್ಷೇಮ ಸ್ಥಾಯೀಸಮಿತಿ ಅಧ್ಯಕ್ಷರು ಎಣ್ಮಕಜೆ ಗ್ರಾಮ ಪಂಚಾಯತು, ವಿಷ್ಣುಪ್ರಕಾಶ್ ಮುಳ್ಳೇರಿಯ ಉಪಸ್ಥಿತರಿದ್ದರು. ಭೂಮಿತ್ರಾ ಸೇನಾ ಘಟಕದ ಸಂಚಾಲಕ ಶ್ರೀ ರಂಜಿತ್ ಕುಮಾರ್ ಬಿ.ಯಸ್ ಕಾರ್ಯಕ್ರಮಕ್ಕೆ ಸ್ವಾಗತ ಹೇಳಿದರು. ಭೂಮಿತ್ರಾ ಸೇನಾ ಕಾರ್ಯದರ್ಶಿ ನಿಶಾಂತ್ ವಂದಿಸಿ ಮುರ್ಷೀದ್ ನಿರೂಪಿಸಿದರು.
ಜೀವಜಲ ಕಿರುಚಿತ್ರದ ಕುರಿತು-
ಜೀವಜಲ ಕಿರುಚಿತ್ರವನ್ನು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಅಶೋಕ್ ಮೊಟ್ಟಕುಂಜ ನಿರ್ದೇಶಿಸಿ, ಭೂಮಿತ್ರಾ ಸೇನಾ ಘಟಕ ನಿರ್ಮಿಸಿದೆ. ಉಪನ್ಯಾಸಕರಾದ ನಾರಾಯಣ ಶೆಟ್ಟಿ ಶೀರ್ಷಿಕೆ ಬರೆದಿದ್ದಾರೆ . ಕಾಸರಗೋಡಿನ ಇನ್ ಸೈಟ್ ಸ್ಟುಡಿಯೋ ಇದರ ಛಾಯಚಿತ್ರಗ್ರಾಹಕರಾದ ರಾಜು. ಬಿ ಕೆ. ಮತ್ತು ಶಿಬಿನ್ ನಿರ್ವಹಿಸಿ ವಿಜೇಶ್ ಅವರು ಎಡಿಟಿಂಗ್ ಮಾಡಿದ್ದಾರೆ. ಧ್ವನಿ ಸುರುಳಿಯನ್ನು ಕಾಸರಗೋಡಿನ ಮಾಸ್ಟರ್ ಫ್ಯೂಷನ್ ನಿರ್ವಹಿಸಿ ವಿದ್ಯಾರ್ಥಿನಿ ಫಾತಿಮತ್ ಇಷಾನ ಪೆರ್ಲ ಇವರು ಧ್ವನಿ ಸಂಯೋಜನೆ ನೀಡಿದ್ದಾರೆ. ಕಾಲೇಜಿನ ಭೂಮಿತ್ರಾಸೇನಾ ಘಟಕದ ಮಾಜಿ ಸಂಚಾಲಕ ಶ್ರೀ ವಿಷ್ಣುಪ್ರಕಾಶ್ ಮುಳ್ಳೇರಿಯ ಅವರು ತಾಂತ್ರಿಕ ಸಹಾಯ ನೀಡಿದ್ದಾರೆ.
ವಿದ್ಯಾರ್ಥಿಗಳಾದ ಪವಿತ್ರ. ಬಿ ಕೆ, ಮುರ್ಷಿದ್. ಶಫೀಕ್, ನಿಶಾಂತ್, ಡೆಲ್ವಿನ್, ಮುಂತಾದ ವಿದ್ಯಾರ್ಥಿಗಳ ಸಹಿತ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ, ಕಜಂಪಾಡಿಯ ಪ್ರಗತಿಪರ ಕೃಷಿಕರಾದ ಸುಬ್ರಹ್ಮಣ್ಯ ಭಟ್, ಗಿರಿಜಾಂಬ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಕುಮಾರ್ ಯೇತಡ್ಕ ಸಮೀಪದ ನಡುಮನೆಯ ಮಾಧವ ಭಟ್, ಜಯಪ್ರಕಾಶ್, ಉದಯ ಶಂಕರ ಭಟ್, ಸುಬ್ರಹ್ಮಣ್ಯ ಶರ್ಮ ಮುಂತಾದವರು ಚಿತ್ರತಂಡಕ್ಕೆ ಸಹಕರಿಸಿದ್ದಾರೆ.