ಮಾದಕ ವಸ್ತುಗಳ ಸೇವನೆಯ ವಿರುದ್ಧ ಜನಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಮತ್ತು ಅಬಕಾರಿ ಇಲಾಖೆಯ ಸಹಯೋಗದಲ್ಲಿ ಮಾರ್ಚ್ 28 ರಂದು ಯುವ ಜನಾಂಗ ಮತ್ತು ಮಾದಕ ವಸ್ತುಗಳು ಎಂಬ ವಿಷಯದ ಮೇಲೆ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಡಾಕ್ಟರ್ ನಾರಾಯಣ ಪ್ರದೀಪ್‌ರವರು ಕ್ಲಾಸು ನಡೆಸಿಕೊಟ್ಟರು.
ಶ್ರಮ ಜೀವಿಗಳು ದೈಹಿಕ ಶ್ರಮವನ್ನು ಮರೆಯುವುದಕ್ಕಾಗಿ ಗಂಡು ಹೆಣ್ಣು ಭೇದವಿಲ್ಲದೆ ಕ್ಷಣಿಕ ಸುಖಕ್ಕೆ ಬಲಿಯಾಗಿ ಕೊನೆಗೆ ಮಾದಕ ವಸ್ತುಗಳ ದಾಸರಾಗುತ್ತಾರೆ. ಯುವಜನಾಂಗ ಶೋಕಿಜೀವನಕ್ಕೆ ತೊಡಗಿ ಅನಂತರ ಅದುವೇ ದುಶ್ಚಟವಾಗಿ ಪರಿಣಮಿಸುತ್ತದೆ. ಹೊಗೆಸೊಪ್ಪಿನಿಂದ ಮಾಡುವ ಉತ್ಪನ್ನಗಳಿಗೆ ಕೊಕೇನ್ ಮೊದಲಾದ ಕೆಮಿಕಲ್‌ಗಳನ್ನು ಬೆರೆಸುವುದರಿಂದ ಅಂತಹ ವಸ್ತುಗಳ ನಿರಂತರ ಸೇವನೆ ದೇಹದ ನರಮಂಡಲಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾತ್ರವಲ್ಲದೆ ಲಂಗ್ಸ್ ಕ್ಯಾನ್ಸರ್ ಮೊದಲಾದ ಭೀಕರ ರೋಗಗಳಿಗೆ ಬಲಿಯಾಗಿ ಜೀವನ ನರಕಯಾತನೆಯಾಗುವುದಲ್ಲದೆ ಮರಣದಲ್ಲಿ ಪರ್ಯವಸಾನವಾಗುತ್ತದೆ. ಮಧುಮೇಹ, ರಕ್ತದೊತ್ತಡಗಳಿರುವವರು ಎಷ್ಟು ಔಷಧಿ ಸೇವಿಸಿದರೂ ಔಷಧಿ ಪರಿಣಾಮ ಬೀರಲಾರದು. ಇದರ ವಿರುದ್ಧ ’ಕೋಪ್ಟ’ ಕಾನೂನುಗಳಿವೆ, ಆದರೆ ಅದು ಸರಿಯಾಗಿ ಜ್ಯಾರಿಗೊಳ್ಳದಿರುವುದು ವಿಷಾದನೀಯ ಎಂದರು.
ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಕೇಶವ ನಾಯಕ್ ರವರು ಮಾತಾನಾಡುತ್ತ ಹೊಗೆಸೊಪ್ಪಿನ ಉತ್ಪನ್ನಗಳು ಎಷ್ಟು ಅಪಾಯಕಾರಿಯೋ ಅಷ್ಟೆ ಅಪಾಯಕಾರಿ ಮಧ್ಯಪಾನ. ಇದರಿಂದ ಮನುಷ್ಯನ ಗೌರವ, ಮಾರ್ಯಾದೆ ಹೋಗುವುದರ ಜೊತೆಗೆ ಸಂಸಾರವೂ ಬೀದಿಪಾಲಾಗುತ್ತದೆ. ಮಾನವ ಮೊದಲು ಅದರ ರುಚಿನೋಡುತ್ತಾನೆ ಕೊನೆಗೆ ಅವನನ್ನೆ ಬಲಿತೆಗೆದುಕೊಳ್ಳುತ್ತದೆ. ಇದರಂತೆ ಗಾಂಜ, ಬ್ರೌನ್‌ಶುಗರ್ ಮೊದಲಾದವುಗಳು ಅಪಾಯಕಾರಿ. ಇಂದು ಚೂಯಿಂಗಮ್‌ಗಳು ಹಳ್ಳಿ ಅಂಗಡಿಗಳಲ್ಲಿ ದೊರಕುವುದರಿಂದ ಮಕ್ಕಳೂ ಇದಕ್ಕೆ ಬಲಿಯಾಗಿದ್ದಾರೆ. ಆದುದರಿಂದ ಇಂತಹ ವಿಷಯದ ಬಗೆಗೆ ಜನಜಾಗೃತಿ ಮೂಡಿಸುವುದು ಅಗತ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ | ಶಂಕರ ನಾರಾಯಣ ಹೊಳ್ಳರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮದ್ಯಪಾನ, ದೂಮಪಾನದಂತೆ ಮೊಬೈಲ್ ಫೋನು ಕೂಡ ಇಂದು ಚಟವಾಗಿ ಪರಿಣಮಿಸಿದೆ ಎಂದು ನುಡಿದರು. ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ, ಸ್ಟಾಫ್ ಕಾರ್ಯದರ್ಶಿ ಕೇಶವ ಶರ್ಮ ಮತ್ತು ಇತರ ಉಪನ್ಯಾಸಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಭೆಯಲ್ಲಿ ಉಪಸ್ಥಿತರಿದ್ದರು. ಇಂಗ್ಲೀಷ್ ಉಪನ್ಯಾಸಕ ನಾರಾಯಣ ಶೆಟ್ಟಿ ಸ್ವಾಗತಿಸಿ, ಎನ್.ಎಸ್.ಎಸ್ ಕಾರ್ಯದರ್ಶಿ ವಿಕಾಸ್ ವಂದಿಸಿದರು. ಉನ್ಯಾಸಕಿ ವಿನೀಶ ಕಾರ್ಯಕ್ರಮ ನಿರೂಪಿಸಿದರು.