ಕೃಷಿಕನೇ ಭಾರತದ ಬೆನ್ನೆಲುಬು. ಆದರೆ ಇಂದು ಭಾರತದಲ್ಲಿ ಜನಸಂಖ್ಯೆಯ ಕ್ಷಿಪ್ರ ಬೆಳವಣಿಗೆಯಾಗುತ್ತದೆ. ಅದಕ್ಕೆ ಅನುಸರಿಸಿ ಕೃಷಿಯೂ ಬೆಳವಣಿಗೆ ಹೊಂದಬೇಕಾದದ್ದು ಅನಿವಾರ್ಯ. ಕೃಷಿ ಅಭಿವೃದ್ದಿಯಾಗದಿದ್ದರೆ ಮುಂದೆ ದೇಶ ಗಂಡಾಂತರವನ್ನು ಎದುರಿಸಬೇಕಾಗುತ್ತದೆ ಎಂದು ಕಾಸರಗೋಡು ಸಿ.ಪಿ.ಸಿ.ಆರ್.ಐ. ನಿರ್ದೇಶಕ ಡಾ. ಪಿ.ಚೌಡಪ್ಪನವರು ಅಭಿಪ್ರಾಯಪಟ್ಟರು. ಅವರು ಪೆರ್ಲ ನಾಲಂದ ಕಾಲೇಜಿನಲ್ಲಿ (27-08-2016 ರಂದು) ನಡೆದ ’ತೋಟಗಾರಿಕಾ ಬೆಳೆಗಳು ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ಸಾದ್ಯತೆಗಳು’ ಎಂಬ ವಿಷಯದಲ್ಲಿ ನಡೆದ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜನಸಂಖ್ಯೆಯನ್ನು ಆಧರಿಸಿಕೊಂಡು ಆಹಾರ ಉತ್ಪಾದಿಸಲು ಸಾಧ್ಯವಿಲ್ಲ. ಭೂಮಿಯ ಲಭ್ಯತೆಗೆ ಮಿತಿ ಇದೆ. ಅದಲ್ಲದೆ ನೀರಿನ ಕೊರತೆ, ಪ್ರಾಕೃತಿಕ ವಿಕೋಪಗಳೇ ಮೊದಲಾದ ಸಮಸ್ಯೆಗಳಿಂದಾಗಿ ಕೃಷಿ ಉತ್ಪಾದನೆಗಳು ಕುಂಠಿತಗೊಂಡು ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗಬಹುದು. ಕೃಷಿಯುತ್ಪಾದನಾ ವೆಚ್ಚ ಅಧಿಕಗೊಂಡಂತೆ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಸಿಗದಾಗ ಕೃಷಿಕ ಕೃಷಿಯಿಂದ ವಿಮುಖನಾದರೆ ದೇಶಕ್ಕೆ ಆಪತ್ತು. ಆದುದರಿಂದ ಸರಕಾರ ಮತ್ತು ಎಲ್ಲಾ ಸಂಘ ಸಂಸ್ಥೆಗಳು ಕೃಷಿಕನಿಗೆ ಧೈರ್ಯ ತುಂಬುವುದಲ್ಲದೆ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕಾದದ್ದು ಅನಿವಾರ್ಯ. ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಯುವ ಪೀಳಿಗೆಯನ್ನು ಅತ್ತಕಡೆ ಸೆಳೆಯುವ ಪ್ರಯತ್ನಮಾಡುತ್ತಿದೆ-ಎಂದರು.
ವಿವೇಕಾನಂದ ವಿದ್ಯಾವಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಮ್. ಕೃಷ್ಣ ಭಟ್ ರವರು, ’ಕೃಷಿ ಸಂಸ್ಕೃತಿ-ಸಮಕಾಲೀನ ಸವಾಲುಗಳು’ ಎಂಬ ಪುಸ್ತಕ ಬಿಡುಗಡೆಗೊಳಿಸಿದರು. ಈ ಪುಸ್ತಕವನ್ನು ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಅಶೋಕ ಮೊಟ್ಟಕುಂಜ ಮತ್ತು ಶಂಕರ ಖಂಡಿಗೆ ಬರೆದಿದ್ದಾರೆ. ಕೃಷಿಕ ಏಕಬೆಳೆಯನ್ನು ನಂಬಿ ಕುಳಿತರೆ ಅಸ್ಥಿರತೆ ಉಂಟಾಗುತ್ತದೆ. ಸುಸ್ಥಿರತೆಯಾಗಬೇಕಾದರೆ ಕೃಷಿಯಲ್ಲಿ ಸಮಗ್ರತೆಯ ಅಗತ್ಯವಿದೆ. ಮಿಶ್ರ ಬೆಳೆಗಳನ್ನು ಬೆಳೆದರೆ ರೈತನನ್ನು ಭೂಮಿ ಎಂದಿಗೂ ಕೈ ಬಿಡಲಾರದು. ಕೃಷಿಕನಿಗೆ ಕೃಷಿಯ ಸಮಗ್ರ ಅರಿವಿರಬೇಕು ಮಾತ್ರವಲ್ಲದೆ ಸ್ವತಃ ದುಡಿದರೆ ಎರಡು ಎಕರೆ ಭೂಮಿಯಲ್ಲಿ ಒಂದು ಸಾಧಾರಣ ಕುಟುಂಬದ ಆರ್ಥಿಕ ನಿರ್ವಹಣೆ ನಡೆಸಬಹುದು ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ಟರು ವಿಚಾರ ಸಂಕಿರಣಕ್ಕೆ ಶುಭ ಹಾರೈಸಿದರು. ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು(ರಿ) ಇದರ ಅಧ್ಯಕ್ಷರೂ ಕಾರ್ಯಕ್ರಮದ ಅಧ್ಯಕ್ಷರೂ ಆಗಿದ್ದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕೃಷಿಯಿಂದ ಸಿಗುವಷ್ಟು ನೆಮ್ಮದಿ, ಆರೋಗ್ಯ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ. ಜೀವನಕ್ಕೆ ಕೃಷಿ ಅತೀ ಅಗತ್ಯ, ಹಣದಿಂದ ಮಾತ್ರ ಜೀವನ ನಡೆಸಲು ಸಾಧ್ಯವಿಲ್ಲ ಕೃಷಿಯು ಅನ್ನನೀಡುತ್ತದೆ, ಹಸಿದಾಗ ಹಣವನ್ನು ತಿಂದು ಬದುಕಲು ಸಾದ್ಯವೇ? ಇಂದಿನ ಸಮಾಜದ ಚಿಂತನೆಗಳು ಬದಲಾಗಿವೆ, ಭೂಮಿ ನಮಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುತ್ತದೆ. ಆದರೆ ನಾವು ಅದನ್ನು ವಿಷ ಬಳಸಿ ಕೊಲ್ಲುತ್ತಿದ್ದೇವೆ. ಭೂಮಿಯನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ. ಅನ್ನಕೊಟ್ಟ ಭೂಮಿಯನ್ನು ಮತ್ತು ತುತ್ತುಕೊಟ್ಟ ತಾಯಿಯನ್ನು ಸಮಾನವಾಗಿ ಕಾಣಬೇಕು. ರೈತ ತಾಯಿಯನ್ನು ಪ್ರೀತಿಸುವಂತೆ ಭೂಮಿಯನ್ನು ಪ್ರೀತಿಸಿದರೆ ಭೂಮಿ ಕೂಡ ಅದಕ್ಕೆ ಸರಿಯಾದ ಪ್ರತಿಫಲವನ್ನು ನೀಡುತ್ತದೆ ಎಂದರು. ಪುತ್ತೂರು ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಚಾರ್ಯ ಡಾ. ವಿಘ್ನೇಶ್ವರ ವರ್ಮುಡಿ, ಪೆರ್ಲ ನಾಲಂದ ಕಾಲೇಜಿನ ಆಡಳಿತಾಧಿಕಾರಿ ಕೆ. ಶಿವಕುಮಾರ, ಉಪನ್ಯಾಸಕರಾದ ಅಶೋಕ, ಶಂಕರ ಖಂಡಿಗೆ ಮತ್ತು ಕು| ಗೀತಾ.ವಿ ಭಟ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಕೆ. ಕಮಲಾಕ್ಷ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಅಶೋಕ ಮೊಟ್ಟಕುಂಜ ವಂದಿಸಿ, ಉಪನ್ಯಾಸಕಿ ಶಾಂಭವಿ ಕಾರ್ಯಕ್ರಮ ನಿರೂಪಿಸಿದರು.
ಮೊದಲ ಗೋಷ್ಠಿ – ತೆಂಗಿನ ಮೌಲ್ಯವರ್ಧನೆಯ ಮೂಲಕ ಆದಾಯ ಹೆಚ್ಚಳ
’ತೆಂಗಿನ ಮೌಲ್ಯವರ್ಧನೆಯ ಮೂಲಕ ಆದಾಯ ಹೆಚ್ಚಳ’ ಎಂಬ ವಿಷಯದ ಮೇಲೆ ನಡೆದ ಮೊದಲ ವಿಜಾರಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ಐ.ಸಿ.ಎ.ಆರ್-ಸಿ.ಪಿ.ಸಿ.ಆರ್.ಐ ಕಾಸರಗೋಡಿನ ನಿರ್ದೇಶಕರು ಡಾ| ಪಿ. ಚೌಡಪ್ಪನವರು ತೆಂಗಿನ ಕೃಷಿಕರು ಇಂದು ಸಂಕಷ್ಟದಲ್ಲಿದ್ದಾರೆ. ಕಾರಣವೇನೆಂದರೆ ತೆಂಗಿನ ಉತ್ಪಾದನೆ ಹೆಚ್ಚಿದೆ, ಆದರೆ ಅದರ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ. ತೆಂಗಿನಕಾಯಿ ಉತ್ಪಾದಿಸಲು ಒಂದಕ್ಕೆ 8 ರಿಂದ 9 ರೂ ವೆಚ್ಚವಾದರೆ ಮಾರುಕಟ್ಟೆಯಲ್ಲಿ ದೊರಕುವ ಬೆಲೆ ಕೇವಲ 5 ರೂಪಾಯಿ. ಇದರಿಂದ ಪ್ರತಿ ತೆಂಗಿನ ಕಾಯಿಯಲ್ಲಿ ಕೃಷಿಕರು 3 ರಿಂದ 4 ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಅದಲ್ಲದೆ ವನಸ್ಪತಿ ಎಣ್ಣೆಗಳ ಉಪಯೋಗ ಹೆಚ್ಚಾದುದರಿಂದ ತೆಂಗಿನ ಎಣ್ಣೆಯ ಬಳಕೆಯೂ ಕಡಿಮೆಯಾಗಿದೆ. ತೆಂಗಿನ ಉತ್ಪಾದನೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದ್ದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಬರುವಂತಾದರೆ ಮಾತ್ರ ತೆಂಗಿನಕಾಯಿಗೆ ಮೌಲ್ಯ ವರ್ಧನೆಯಾಗಬಹುದು. ತೆಂಗಿನ ಉಪಯೋಗ ಹಲವು ವಿಧದಲ್ಲಾದಾಗ ಬೇಡಿಕೆ ಬರಬಹುದು. ಆ ನಿಟ್ಟಿನಲ್ಲಿ ನಿರಂತರ ಸಂಶೋಧನೆಯ ಅಗತ್ಯವಿದೆ. ಕೊಬ್ಬರಿಯಿಂದ ಎಣ್ಣೆಯನ್ನು ತೆಗೆಯುವಾಗ ಕೊಬ್ಬರಿಯ ಗುಣಮಟ್ಟವನ್ನು ಪರೀಕ್ಷಿಸಿ ಚೆನ್ನಾಗಿ ಒಣಗಿದ ಕೊಬ್ಬರಿಯಿಂದ ಎಣ್ಣೆ ತೆಗೆದರೆ ಎಣ್ಣೆಯಲ್ಲಿ ನೀರಿನ ಅಂಶವಿಲ್ಲದೆ ಗುಣಮಟ್ಟವೂ ಚೆನ್ನಾಗಿರುತ್ತದಲ್ಲದೆ ಎಣ್ಣೆ ದೀರ್ಘ ಬಾಳ್ವಿಕೆಯೂ ಬರುತ್ತದೆ. ತೆಂಗಿನೆಣ್ಣೆಯಲ್ಲಿ ಕೊಬ್ಬಿನ ಅಂಶವಿಲ್ಲ, ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ. ಆದರೆ ಅದನ್ನು ಬಳಸುವ ರೀತಿಯಲ್ಲಿದೆ. ತೆಂಗಿನಿಂದ ಚಿಪ್ಸನ್ನು ಮಾಡಿದರೆ ಉತ್ತಮ ಬೇಡಿಕೆ ಇದೆ. ಅದಲ್ಲದೆ ಕಲ್ಪರಸ, ನೀರಾ, ಸಕ್ಕರೆ ಜೇನು ಮೊದಲಾದವುಗಳನ್ನು ತಯಾರಿಸಿ ಬಳಸಿದರೆ ಬೇಡಿಕೆ ಹೆಚ್ಚುತ್ತದೆ, ಮೌಲ್ಯ ವೃದ್ಧಿಯಾಗುತ್ತದೆ ಎಂದರು.
ಕ್ಯಾಂಪ್ಕೋ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿಯವರು ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕೃಷಿ ಮೂಲದಿಂದ ಬಂದ ನಾವು ಕೃಷಿಯನ್ನು ಚೆನ್ನಾಗಿ ಅರಿತಿರಬೇಕು, ಮಾತ್ರವಲ್ಲದೆ ನಾವು ಉತ್ಪಾದಿಸಿದ ಉತ್ಪನ್ನಗಳನ್ನು ಹಲವು ಬಗೆಗಳಲ್ಲಿ ಬಳಸಿಕೊಳ್ಳುವಂತಾದರೆ ಅದರ ಬೇಡಿಕೆ ಹೆಚ್ಚುವುದರ ಜೊತೆಗೆ ಮೌಲ್ಯವರ್ಧನೆಯೂ ಆಗುತ್ತದೆ ಎಂದರು.
ಪುತ್ತೂರು ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ವಾಸುದೇವ ಅವರು ಮೊದಲ ಗೋಷ್ಠಿಯ ಅವಲೋಕನ ನಡೆಸಿದರು. ಉಪನ್ಯಾಸಕ ಸುರೇಶ್ ವಂದಿಸಿದರು.
ಎರಡನೇ ಗೋಷ್ಠಿ – ಅಡಿಕೆ ಬೆಳೆಯ ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ಸಾಧ್ಯತೆಗಳು
ಅಡಿಕೆ ಬೆಳೆಯ ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ಸಾಧ್ಯತೆಗಳು ಎಂಬ ಎರಡನೆ ಗೋಷ್ಠಿಯನ್ನು ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅರ್ಥಶಾಸ್ತ್ರ ಸಹ ಪ್ರಾಚಾರ್ಯರಾದ ಡಾ. ರವೀಂದ್ರಕುಮಾರ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕರ್ನಾಟಕ ಮತ್ತು ಉತ್ತರ ಕೇರಳದ ಪ್ರಧಾನ ವಾಣಿಜ್ಯ ಬೆಳೆಗಳಲ್ಲಿ ಅಡಿಕೆಯೂ ಒಂದು. ಇಂದು ಅಡಿಕೆಯು ಕೃಷಿಕರ, ಕೂಲಿ ಕಾರ್ಮಿಕರ ಸಮಸ್ಯೆಗಳು ಮತ್ತು ಪ್ರಾಕೃತಿಕ ಸಮಸ್ಯೆಗಳನ್ನು ಎದುರಿಸಿ ಮುನ್ನುಗ್ಗಬೇಕಾಗಿದೆ. ಅದಲ್ಲದೆ ಮಾರುಕಟ್ಟೆಯ ಬೆಲೆಯಲ್ಲಾಗುವ ಏರಿಳಿತಗಳನ್ನು ಲೆಕ್ಕಚಾರ ಹಾಕಿ ಕೃಷಿಯನ್ನು ನಡೆಸಬೇಕಾಗಿದೆಯೆಂದು ಹೇಳಿದರು.
ಭಾರತದಲ್ಲಲ್ಲದೆ ಬಾಂಗ್ಲಾದೇಶ, ಚೀನಾ, ಇಂಡೋನೇಷ್ಯಗಳಲ್ಲೂ ಅಡಿಕೆಯನ್ನು ಬೆಳೆಯುತ್ತಾರೆ, ಆದರೆ ಇಳುವರಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇದರಲ್ಲಿ 62% ಇಳುವರಿ ಕರ್ನಾಟಕದಿಂದ ಬರುತ್ತಿದೆ. ಅಡಿಕೆಯನ್ನು ಗೋಟು ಅಡಿಕೆ, ಕೆಂಪಡಿಕೆ ಮೊದಲಾದ ರೀತಿಗಳಲ್ಲಿ ಬಳಸುತ್ತಾರೆ. ಈ ಭಾಗದಲ್ಲಿ ಗೋಟಡಿಕೆ ಮಾಡಿದರೆ ಉತ್ತರ ಕನ್ನಡ ಭಾಗದಲ್ಲಿ ಕೆಂಪಡಿಕೆಯ ಎಳೆಅಡಿಕೆಯ ತಿರುಳನ್ನು ಕತ್ತರಿಸಿ ಬೇಯಿಸಿ ಒಣಗಿಸಿ ಮಾಡುವ ಉತ್ಪಾದನೆ ಹೆಚ್ಚಿದೆ. ಅಡಿಕೆಯಲ್ಲಿ 78% ಕೆಂಪಡಿಕೆಯನ್ನು ಗುಟ್ಕಾಗಳಿಗೆ ಬಳಕೆಮಾಡಲು ತೊಡಗಿದಾಗ ಅದಕ್ಕೆ ಅಮಲು ಪದಾರ್ಥಗಳನ್ನು ಸೇರಿಸಿ ಅಡಿಕೆಯ ಮೂಲ ಸತ್ವವನ್ನು ಹಾಳು ಮಾಡಿದರು. ಅಡಿಕೆ ಎಂದಿಗೂ ಕಾನ್ಸರ್ ಕಾರಕವಲ್ಲ. ಅದಕ್ಕೆ ಗುಟ್ಕಾ ಕಂಪೆನಿಗಳು ಬೆರೆಸುವ ಇನ್ನಿತರ ಪದಾರ್ಥಗಳೇ ವಿಷಕಾರಕ. ಅಡಿಕೆಯಲ್ಲಿ ಔಷಧೀಯ ಅಂಶಗಳಿವೆ. ಅದನ್ನು ಸಂಶೋಧಿಸುವ ಕೆಲಸ ಆಗಬೇಕಾಗಿದೆ. ಚಾಕಲೇಟ್, ಕಾಫಿ ಮೊದಲಾದ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕಾಗಿದೆ. ಅಡಿಕೆಯನ್ನು ಓಟದ ಕುದುರೆಗಳಿಗೆ ಕೊಟ್ಟರೆ ಗಂಟೆಗೆ ೫೦೦ ದಿಂದ ೭೦೦ ಕಿ.ಮೀ ವೇಗದಲ್ಲಿ ಓಡುವ ಶಕ್ತಿಯನ್ನು ಹೊಂದುತ್ತದೆ.
ಅಡಿಕೆಯನ್ನು ಹಲವು ರೀತಿಗಳಲ್ಲಿ ತುಂಡು ಮಾಡಿ ಮಾರುಕಟ್ಟೆಗೆ ಕಳುಹಿಸುತ್ತಾರೆ. ತುಂಡು ಮಾಡಿದ ಅಡಿಕೆಗೆ ಬೆಲೆ ಮತ್ತು ಬೇಡಿಕೆ ಹೆಚ್ಚು. ಕೃಷಿಕ ತಾನು ಬೆಳೆದ ಅಡಿಕೆಯನ್ನು ಒಂದೇ ರೀತಿಯಲ್ಲಿ ಕತ್ತರಿಸಿ ಕೊಟ್ಟರೆ ಅದರ ಪೂರ್ಣ ಬೆಲೆ ಕೃಷಿಕನಿಗೆ ದೊರಕಬಹುದು. ಹಲವು ದೇಶದ ಜನರು ಅಡಿಕೆಯನ್ನು ಬಳಸುತ್ತಾರೆ. ಭಾರತದ ಅಡಿಕೆ ಚೀನಾಕ್ಕೂ ಪಾಕಿಸ್ತಾನಕ್ಕೂ ರಫ್ತಾಗುತ್ತದೆ. ಸಾರ್ಕ್ ಒಪ್ಪಂದದ ಪ್ರಕಾರ ಭಾರತ 10% ಅಡಿಕೆ ಆಮದು ಮಾಡಿಕೊಳ್ಳುತ್ತಿದೆ. 18% ಅಡಿಕೆ ರಫ್ತು ಮಾಡುತ್ತಿದೆ. ಆಮದು ಮಾಡಿಕೊಳ್ಳುವ ಅಡಿಕೆಯ ಬೆಲೆ ಕೆ.ಜಿ ಗೆ 52 ರಿಂದ 162 ರೂ ವರೆಗೆ ಇರುತ್ತದೆ. ಆದರೆ ಗುಣಮಟ್ಟ ನಮ್ಮ ಅಡಿಕೆಯಂತೆ ಇರುವುದಿಲ್ಲ. ಒಟ್ಟು ಉತ್ಪಾದನೆಯ 34.67% ಅಡಿಕೆಯನ್ನು ಕೃಷಿಕರು ಬಳಸಿದರೆ ಉಳಿದ ಅಡಿಕೆಯನ್ನು ಕೃಷಿಯೇತರರು ಬಳಸುತ್ತಾರೆ .
ಅಡಿಕೆ ಕೃಷಿಯನ್ನು ಬಾಧಿಸುವ ಕೊಳೆರೋಗ, ನುಸಿರೋಗ , ಹಳದಿ ರೋಗ ಇತ್ಯಾದಿ ರೋಗಗಳು, ಕೃಷಿಕಾರ್ಮಿಕರ ಅಭಾವ, ಮಾರುಕಟ್ಟೆಯ ಬೆಲೆಯಲ್ಲಿನ ಏರುಪೇರು, ಕೃಷಿ ಕೂಲಿ ಕಾರ್ಮಿಕರ ವೇತನಗಳಲ್ಲಿ ವ್ಯತ್ಯಾಸ ಇತ್ಯಾದಿಗಳು ಅಡಿಕೆ ಕೃಷಿಗೆ ಹಿನ್ನಡೆಯನ್ನುಂಟುಮಾಡುತ್ತಿದೆ. ಆದರೂ ಅಡಿಕೆಯ ಬಗ್ಗೆ ಮುಂದಿನ ದಿನಗಳಲ್ಲಿ ಸಂಶೋಧನೆ ನಡೆದು ಹಲವು ರೀತಿಗಳಲ್ಲಿ ಬಳಸುವಂತಾದರೆ ಅದಕ್ಕೆ ಉತ್ತಮ ಭವಿಷ್ಯವಿದೆ. ಅದು ಕೇವಲ ಜಗಿದು ಉಗುಳುವ ವಸ್ತು ಆಗಬಾರದು ಎಂದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಪುತ್ತೂರು ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರದ ಸಹ ಪ್ರಾಚಾರ್ಯರಾದ ಡಾ|ವಿಘ್ನೇಶ್ವರ ವರ್ಮುಡಿಯವರು ಇಂದು ಯಾರಿಗೂ ಅಡಿಕೆ ಮಾರುಕಟ್ಟೆಯ ಕುರಿತು, ಬೆಲೆಯ ಕುರಿತು ಸರಿಯಾದ ಜ್ಞಾನವಿಲ್ಲ. ಮಾರುಕಟ್ಟೆಯ ಅಧ್ಯಯನ ನಡೆಯಬೇಕಾಗಿದೆ. ಕೃಷಿಕ ಉತ್ಪಾದಿಸುವುದನ್ನಷ್ಟೆ ಮಾಡುತ್ತಾನೆ, ಅದರ ಉಪಯೋಗದ ಕಡೆಗೂ ಅವನು ಚಿಂತಿಸಬೇಕಾಗಿದೆ. ಅಡಿಕೆಯಲ್ಲಿ ಔಷಧೀಯ ಅಂಶವಿದೆ ಅದನ್ನು ಕೃಷಿಕ ಕಂಡುಕೊಳ್ಳಬೇಕಾಗಿದೆ. ಅಡಿಕೆಯನ್ನು ತಿನ್ನುವುದರಿಂದ ಯಾವುದೇ ದುಷ್ಪರಿಣಾಮಗಳಿಲ್ಲ. ಭಾರತದ ಅಡಿಕೆ 58 ರಾಷ್ಟ್ರಗಳಿಗೆ ರಫ್ತಾಗುತ್ತದೆ ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಸರಕಾರದ ನಿಲುವನ್ನು ವಿರೋಧಿಸಿ ತಾನು ಸುಪ್ರೀಂಕೋರ್ಟಿಗೆ ವರದಿಯನ್ನು ಸಲ್ಲಿಸಿರುವ ವಿಚಾರವನ್ನು ತಿಳಿಸಿದರು. ಅಡಿಕೆಯನ್ನು ಹೊಸತರಲ್ಲಿ ಕೊಡುವುದಕ್ಕಿಂತ ಹಳತು ಮಾಡಿಕೊಡುವುದು ಉತ್ತಮ, ಒಳ್ಳೆಬೆಲೆಯೂ ಸಿಗುತ್ತದೆ ಎಂದರು. ಕೃಷಿಕ ಪ್ರತಿನಿತ್ಯ ಅಡಿಕೆಯ ಬೆಲೆಯನ್ನು ಅಧ್ಯಯನ ಮಾಡಬೇಕು. ನಾವು ಬೆಳೆದ ಅಡಿಕೆಯನ್ನು ದಲ್ಲಾಳಿಗಳಿಗೆ ಕೊಡುವುದಕ್ಕಿಂತ ಕೃಷಿಕರ ಸಂಸ್ಥೆಯಾದ ಕ್ಯಾಂಪ್ಕೋದಂತಹ ಸಂಸ್ಥೆಗಳಿಗೆ ಕೊಟ್ಟರೆ ಕೃಷಿಕನಿಗೆ ಇನ್ನು ಹಲವು ಪ್ರಯೋಜನಗಳು ದೊರಕಬಹುದು. ಅದಲ್ಲದೆ ಬೆಲೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಬರಬಹುದು ಎಂದರು.
ಕೃಷಿಕ ತನ್ನ ಉತ್ಪನ್ನವನ್ನು ಅಗತ್ಯಕ್ಕನುಗುಣವಾಗಿ ಮಾರಾಟ ಮಾಡಿ ತಾಳ್ಮೆಯಿಂದ ಇರಬೇಕು. ಅದು ಬಿಟ್ಟು ಒತ್ತಡಕ್ಕೆ ಒಳಗಾಗಿ ಮಾರಾಟ ಮಾಡಬಾರದು. ಅಡಿಕೆ ಮಾರುಕಟ್ಟೆ ಊಹೆಯ ಆಧಾರದಲ್ಲಿರುವುದು. ವಾಸ್ತವದ ಕುರಿತು ಪರಿಪೂರ್ಣ ಜ್ಞಾನವನ್ನು ಹೊಂದಿಕೊಳ್ಳಬೇಕು. ಕೃಷಿಕರಿಗೆ ಅವರದ್ದೇ ಆದ ನೀತಿ ಸಂಹಿತೆ ಇದೆ, ಅದನ್ನು ಬಿಟ್ಟು ಹೊರಬಂದು ಹೊಸ ಸಂಶೋಧನೆಗಳನ್ನು ಮಾಡುವ ಅಗತ್ಯವಿದೆ ಎಂದರು. ಇಂದಿನ ಯುವಜನಾಂಗ ಅಡಿಕೆ ತಿನ್ನುವುದಿಲ್ಲ. ಅವರು ಅದನ್ನು ತಿನ್ನುವಂತೆ ಮಾಡುವ ಉಪಾಯಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಶ್ನೋತ್ತರದ ವೇಳೆಯಲ್ಲಿ ವರ್ಮುಡಿಯವರು ಕೃಷಿಕರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು.
ವಿವೇಕಾನಂದ ಕಾಲೇಜು ಪುತ್ತೂರು ಡಾ | ವಿಷ್ಣು ಕುಮಾರ್ ಅರ್ಥಶಾಸ್ತ್ರ ಉಪನ್ಯಾಸಕ ಇವರು ಗೋಷ್ಠಿಯ ಅವಲೋಕನವನ್ನು ನಡೆಸುತ್ತ ಕೃಷಿಯು ದೇಶದ ಬೆನ್ನೆಲುಬಾದರೆ ಅಡಿಕೆಕೃಷಿಯು ನಮ್ಮ ಕರಾವಳಿ ಪ್ರದೇಶದ ಬೆನ್ನೆಲುಬು ಎಂದರು. ಉಪನ್ಯಾಸಕ ಶ್ರೀನಿಧಿ ವಂದಿಸಿದರು.
ಮೂರನೇ ಗೋಷ್ಠಿ – ಭವಿಷ್ಯದಲ್ಲಿ ರಬ್ಬರ್ ಬೆಳೆಯ ಸಾಧ್ಯತೆಗಳು
ಶೋಬಿ ಜೋಸೆಫ್, ಕ್ಷೇತ್ರಾಧಿಕಾರಿಗಳು ಕೇರಳ ರಬ್ಬರ್ ಬೋರ್ಡ್ ಅವರು ’ಭವಿಷ್ಯದಲ್ಲಿ ರಬ್ಬರ್ ಬೆಳೆಯ ಸಾಧ್ಯತೆಗಳು’ ಎಂಬ ವಿಷಯದ ಬಗ್ಗೆ ಮಾತಾಡಿದರು. ಭಾರತದಲ್ಲಿ 1902 ರಲ್ಲಿ ರಬ್ಬರ್ ಕೃಷಿ ಪ್ರಾರಂಭವಾಗಿದ್ದರೂ ಕಾಸರಗೋಡಿನ ಪರಸರದಲ್ಲಿ ಈ ಕೃಷಿ ಮಾಡಲು ತೊಡಗಿ ಕೆಲವೇ ವರ್ಷಗಳಾದುವಷ್ಟೆ. ಭಾರತದಲ್ಲಿ ಬಳಸುವ ರಬ್ಬರ್‌ನ 80% ಭಾರತದಲ್ಲೇ ಉತ್ಪಾದನೆಯಾಗುತ್ತದೆ. 2014 ರಲ್ಲಿ ಭಾರತ ರಬ್ಬರ್ ಉತ್ಪಾದನೆಯಲ್ಲಿ 5ನೇ ಸ್ಥಾನದಲ್ಲಿತ್ತು ಆದರೆ 2015ರಲ್ಲಿ 6ನೇ ಸ್ಥಾನಕ್ಕೆ ಇಳಿಯಿತು. ರಬ್ಬರ್ ಉತ್ಪಾದನೆ ಕಡಿಮೆಯಾಗಿರುವುದಕ್ಕೆ ಕಾರಣಗಳು ಹಲವು. ಬೆಲೆಯಲ್ಲಾದ ಬದಲಾವಣೆ. ಕಿಲೋ ಒಂದಕ್ಕೆ 220/- ಇದ್ದ ರಬ್ಬರ್ ಇಂದು 120/-ಕ್ಕೆ ಇಳಿದಿದೆ. ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಕಾಲಕಾಲಕ್ಕೆ ಆಗಬೇಕಾದ ಕೆಲಸ ಆಗದಿರುವುದು, ರಬ್ಬರ್‌ನ ಬಳಕೆ ಸಮರ್ಪಕವಾಗಿ ಆಗದಿರುವುದು ಇತ್ಯಾದಿ ಸಮಸ್ಯೆಗಳಿವೆ ಈಗ ಟಯರ್ ಮತ್ತು ಟಯರೇತರ ಉತ್ಪನ್ನಗಳಿಗಷ್ಟೆ ರಬ್ಬರ್ ಬಳಕೆಯಾಗುವುದು. ಅದನ್ನು ಇನ್ನಷ್ಟು ಹೆಚ್ಚು ಉತ್ಪನ್ನಗಳಿಗಾಗಿ ಮಾಡಿ ಉಪಯೋಗಿಸಿದರೆ ಬೇಡಿಕೆ ಹೆಚ್ಚಬಹುದು.
ರಬ್ಬರ್ ಕೃಷಿಕರಿಗೆ ಮತ್ತು ಕಾರ್ಮಿಕರಿಗೆ ಕೃಷಿಯನ್ನು ಮತ್ತು ಉತ್ಪಾದನೆಯನ್ನು ಹೇಗೆ ಮಾಡಬೇಕು ಎಂಬ ಮಾಹಿತಿಯ ಕೊರತೆ ಇದೆ. ಅದರ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಹೇಗೆ ಎಂದು ತಿಳಿದಿಲ್ಲ. ರಬ್ಬರ್‌ನ ಗುಣಮಟ್ಟಕ್ಕನುಗುಣವಾಗಿ ವಿವಿಧ “ಗ್ರೇಡ್”ಗಳನ್ನು ಮಾಡಲಾಗುತ್ತದೆ, ಅದಕ್ಕನುಸಾರವಾಗಿ ಬೆಲೆಸಿಗುತ್ತದೆ ಎಂದರು. ಜಾಗತೀಕರಣದ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಹೊಂದಿಕೊಂಡು ಇಂದು ಬೆಲೆಯಲ್ಲಿ ಏರಿಳಿತಗಳುಂಟಾಗುತ್ತದೆ. ಆದರೂ ಕಿಲೋ ಒಂದಕ್ಕೆ 130 ರಿಂದ 150 ರ ವರೆಗೆ ದೊರೆತರೆ ನಷ್ಟವಾಗಲಾರದು. ರಬ್ಬರ್ ಟ್ಯಾಪಿಂಗ್‌ನ್ನು 2 ದಿನಕ್ಕೊಮ್ಮೆ ಮಾಡುವುದರ ಬದಲಾಗಿ 4 ದಿನಕ್ಕೊಮ್ಮೆ ಮಾಡಿದರೆ ಇಳುವರಿಯಲ್ಲಿ ಕಡಿಮೆ ಯಾಗುವುದಿಲ್ಲ. ಮಾತ್ರವಲ್ಲದೆ ಕೆಲಸ ಮತ್ತು ಖರ್ಚು ಕಡಿಮೆಯಾಗುತ್ತದೆ, ಅದರಿಂದ ಮರಕ್ಕೂ ತೊಂದರೆ ಇಲ್ಲ . ಕೃಷಿಕನ ಲಾಭಾಂಶವೂ ಹೆಚ್ಚಾಗುತ್ತದೆ. ವಾತಾವರಣಕ್ಕೆ ಹೊಂದಿಕೊಂಡು ಇಳುವರಿಯಲ್ಲಿ ಏರಿಳಿತವಾಗುತ್ತದೆ. ಮಳೆಗಾಲದಲ್ಲಿ ಪ್ಲಾಸ್ಟಿಕ್ ಹಾಕಿ ಟ್ಯಾಪಿಂಗ್ ಮಾಡುವ ಖರ್ಚು ಹೆಚ್ಚಾಗುವ ಕಾರಣ ಮತ್ತು ಮರದ ಬೆಳೆವಣಿಗೆಯ ದೃಷ್ಟಿಯಿಂದ 3 ತಿಂಗಳುಗಳ ಕಾಲ ಟ್ಯಾಪಿಂಗ್ ಮಾಡದಿರುವುದು ಉತ್ತಮ. ಮರದ ಬೆಳವಣಿಗೆಯನ್ನು ನೋಡಿಕೊಂಡು ಟ್ಯಾಪಿಂಗ್ ಮಾಡಬೇಕು. ರಬ್ಬರ್ ಕೃಷಿಯ ಸರಿಯಾದ ವಿಧಾನಗಳನ್ನು ಕೃಷಿಕರು ಅರಿತು ಕೃಷಿ ಮಾಡಿದರೆ ನಷ್ಟ ಬರಲಾರದು.
ರಬ್ಬರ್‌ಗೆ ನೀರಾವರಿಯ ಅವಶ್ಯಕತೆ ಇಲ್ಲದ ಕಾರಣ ಅದನ್ನು ಒಣ ಭೂಮಿಯಲ್ಲಿ ಮಾಡುತ್ತೇವೆ, ನೀರಾವರಿ ಮಾಡಿದರೆ ಇಳುವರಿ ಹೆಚ್ಚುತ್ತದೆ. ಆದುದರಿಂದ ಒಣ ಭೂಮಿ ಉಪಯೋಗವಾದಂತಾಗುತ್ತದೆ. ಮುಂದಿನ ದಿನಗಳಲ್ಲಿ ರಬ್ಬರ್‌ನ ಉಪಯೋಗ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಕೃಷಿಕರು ರಬ್ಬರ್ ಕೃಷಿಯಿಂದ ವಿಮುಖರಾಗಬೇಕಾಗಿಲ್ಲ. ಧೈರ್ಯದಿಂದ ಕೃಷಿ ಮುಂದುವರಿಸಬಹುದು ಎಂದರು.
ಪ್ರಗತಿಪರ ಕೃಷಿಕ ಕೆ. ಗಣಪತಿ ಭಟ್ಟ ಪತ್ತಡ್ಕರವರು ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ನಮ್ಮ ದೇಶ ಋಷಿ ಸಂಸ್ಕೃತಿ ಕೃಷಿ ಸಂಸ್ಕೃತಿಗಳಿಂದ ಬೆಳೆದು ಬಂದದ್ದು ಆ ಸಂಸ್ಕೃತಿ ಉಳಿದರೆ ಮಾತ್ರ ಖುಷಿ ಇರಬಹುದು. ಆದರೆ ಇಂದು ಕೃಷಿ ಕ್ಷೇತ್ರ ನಾನಾ ಕಾರಣಗಳಿಂದ ಕ್ಷೀಣಿಸುತ್ತಾ ಇದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಇಂದಿನ ಯುವಜನಾಂಗ ಸಂಕುಚಿತ ಮನೋಭಾವದಿಂದ ಹಣದ ಆಸೆಗೆ ಬಲಿಬಿದ್ದು ಕೃಷಿಯನ್ನು ಬಿಟ್ಟು ಪೇಟೆಯ ಕಡೆಗೆ ವಿದೇಶಗಳಿಗೆ ಮುಖ ಮಾಡಿರುವುದು ಕಂಡುಬರುತ್ತದೆ. ಇದು ಕೃಷಿ ಕ್ಷೇತ್ರಕ್ಕೆ ದೊಡ್ಡ ಗಂಡಾತರ. ಕೃಷಿ ಇಲ್ಲದೆ ಕೈಗಾರಿಕೆಗಳಿಂದಷ್ಟೆ ಬದುಕಲು ಸಾಧ್ಯವಿಲ್ಲ ಎಲ್ಲದಕ್ಕೂ ಆದಾರ ಕೃಷಿ. ವಿದ್ಯಾವಂತರು ಕೃಷಿಗೆ ಒಲವನ್ನು ತೋರಿಸುವುದಿಲ. ಆ ನಿಟ್ಟಿನಲ್ಲಿ ಕೃಷಿಯೂ ಲಾಭದಾಯಕ ಉದ್ಯಮವೆಂದು ವಿದ್ಯಾವಂತರ ಮನ ಒಲಿಸಿ ಕೃಷಿ ರಂಗಕ್ಕೆ ಇಳಿಯುವಂತಾದರೆ ಅದುವೇ ಕೃಷಿಕ್ರಾಂತಿ. ಕೃಷಿ ತೋ ನಾಸ್ತಿ ದುರ್ಭಿಕ್ಷಂ ಎಂಬ ಮಾತಿದೆ. ಅದು ಸತ್ಯವಾದದ್ದು. ಅದನ್ನು ಸತ್ಯ ವೆಂದು ಅರಿಯುವಾಗ ಕಾಲಕಳೆದು ಹೋಗುತ್ತದೆ. ಆಗ ಚಿಂತಿಸಬೇಕಾದೀತು. ಕೃಷಿಗೆ ನೂರಾರು ಸಮಸ್ಯೆಗಳಿವೆ. ಆದರೆ ಭೂಮಿ ಎಂದೂ ರೈತನ ಕೈ ಬಿಟ್ಟದ್ದಿಲ್ಲ. ನೀರಾವರಿ ಇಲ್ಲದೆಮಾಡಬಹುದಾದ ಕೃಷಿ ರಬ್ಬರ್. ವರ್ಷಗಳುರುಳಿದಂತೆ ಮಳೆ ಕಡಿಮೆಯಾಗುತ್ತಿದೆ ಆಗ ರೈತನನ್ನು ರಕ್ಷಿಸುವುದು ರಬ್ಬರ್. ಕೃಷಿಕ ಒಂದು ಬೆಳೆಯನ್ನು ನಂಬಿ ಕೂರುವುದು ಸರಿಯಲ್ಲ, ಬಹು ಬೆಳೆಗಳನ್ನು ಬೆಳೆಸಿದರೆ ಒಂದಲ್ಲ ಒಂದು ಬೆಳೆ ನಮ್ಮನ್ನು ರಕ್ಷಿಸುತ್ತದೆ. ಹಾಗಾಗಿ ಕೃಷಿಕ ಕೈ ಚೆಲ್ಲಿ ಕೂರ ಬೇಕಾಗಿಲ್ಲ ಎಂದರು.
ವಿವೇಕಾನಂದ ಕಾಲೇಜು ಪುತ್ತೂರು ಇದರ ಅರ್ಥಶಾಸ್ತ್ರ ಉಪನ್ಯಾಸಕ ಗೋವಿಂದರಾಜ್ ಗೋಷ್ಠಿಯ ಅವಲೋಕನವನ್ನು ಮಾಡಿದರು ಮಳಯಾಳಂ ಉಪನ್ಯಾಸಕಿ ವಿನೀಶ ಸ್ವಾಗತಿಸಿ, ಉಪನ್ಯಾಸಕಿ ರಜುಲಾರಾಜು ವಂದಿಸಿದರು.
ಸಮಾರೋಪ ಸಮಾರಂಭ
’ತೋಟಗಾರಿಕಾ ಬೆಳೆಗಳು ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ಸಾಧ್ಯತೆಗಳು’ ಎಂಬ ಒಂದು ದಿನದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ಹಣಕಾಸು ಅಧಿಕಾರಿ ಮತ್ತು ಅರ್ಥಶಾಸ್ತ್ರ ಪ್ರಾಚಾರ್ಯರಾದ ಪ್ರೊ. ಶ್ರೀಪತಿ ಕಲ್ಲೂರಾಯರು ಆಗವಿಸಿದ್ದರು.
ಭಾರತದಲ್ಲಿ ಎಲ್ಲ ಕ್ಷೇತ್ರಗಳು ಅಭಿವೃದ್ಧಿ ಹೊಂದಿವೆಯಾದರೂ ಕೃಷಿಕನ ಆರ್ಥಿಕ ಸ್ಥಿತಿಯಲ್ಲಿ ಮಾತ್ರ ಸುಧಾರಣೆಯಾಗಿಲ್ಲ. ಕೃಷಿಕ ಇಂದಿಗೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾನೆ. 1960-70 ನೇ ದಶಕಗಳಲ್ಲಿ ಆಹಾರ ಲಭಿಸುವುದೇ ಕಷ್ಟವಾಗಿತ್ತು. ಆದರೆ ಇಂದು ಹಾಗಿಲ್ಲ. ಮಾರುಕಟ್ಟೆ ವಿಸ್ತಾರವಾಗಿದೆ, ಬೇಡಿಕೆ ಹೆಚ್ಚಾಗಿದೆ. ಆದರೂ ಕೃಷಿಕ ಅತಂತ್ರನಾಗಿದ್ದಾನೆ. ಭೂಮಿಯ ಮೌಲ್ಯವೃದ್ಧಿಯಾಗುತ್ತಿದೆ. ಅದಕ್ಕೆ ಹೊಂದಿಕೊಂಡು ಉಳಿದ ಕೃಷಿವಸ್ತುಗಳ ಮೌಲ್ಯವರ್ಧನೆಯಾಗಲಿಲ್ಲ. ಕೃಷಿಕ ಭೂಮಿಯನ್ನು ಮಾರಾಟ ಮಾಡಿ ಅದರ ಬಡ್ಡಿಯ ಲೆಕ್ಕಾಚಾರ ಮಾಡುತ್ತಾನೆ. ಅದರಿಂದಾಗಿ ಮತ್ತು ಕೃಷಿಕ ಎದುರಿಸಬೇಕಾದ ನೂರಾರು ಸಮಸ್ಯೆಗಳಿಂದಾಗಿ ಕೃಷಿಕ ಉತ್ಸಾಹ ಕಳೆದುಕೊಂಡಿರುವುದು ದೇಶಕ್ಕೆ ನಷ್ಟ. ಕೃಷಿ ಸರಿಯಾಗಿ ನಡೆದಿಲ್ಲವಾದರೆ ಬೇರೆ ಯಾವುದೂ ನಡೆಯಲಾರದು ಎಂದು ಅಭಿಪ್ರಾಯಪಟ್ಟರು.
ನಾಲಂದ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕರವರು -ನಾನು ಕೃಷಿ ಕುಟುಂಬದಿಂದ ಬಂದವನಲ್ಲ ಆದರೂ ನನಗೆ ಕೃಷಿಕನ ಹತ್ತಿರದ ಬಾಂಧವ್ಯವಿದ್ದುದರಿಂದ ಅವನ ಕಷ್ಟಗಳ ಅರಿವಿದೆ. ಕಷ್ಟಗಳಿಲ್ಲದ ಕ್ಷೇತ್ರಗಳು ಯಾವುದೂ ಇಲ್ಲ ಆದುದರಿಂದ ಧೈರ್ಯ ಕೆಡದೆ ಕೃಷಿಕರು ಕೃಷಿಯನ್ನು ಮಾಡಬೇಕು ಹಾಗಾದರೆ ಮಾತ್ರ ದೇಶ ಸಮೃದ್ಧಿಯಾಗಬಹುದು ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಯಾಂಪ್ಕೋದ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರರು ವಹಿಸಿದ್ದರು. ’ಕ್ಯಾಂಪ್ಕೋ ನಿಮ್ಮದೇ ಸಂಸ್ಥೆ. ನೀವೇ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದೀರಿ. ನಿಮಗೆ ಸಂಸ್ಥೆಯಿಂದ ಸಾಧ್ಯವಾದ ಸವಲತ್ತುಗಳನ್ನು ಕೊಡುವ ಪ್ರಯತ್ನವನ್ನು ಮಾಡುತ್ತೇನೆ. ಇಂತಹ ವಿಚಾರಗೋಷ್ಠಿಗಳು ಹೆಚ್ಚು ಹೆಚ್ಚು ನಡೆದರೆ ಕೃಷಿಕರ ಅರಿವನ್ನು ಬೆಳೆಸಿಕೊಳ್ಳಬಹುದು. ಅದಕ್ಕೆ ಸಂಸ್ಥೆಯಿಂದ ಸಾಕಷ್ಟು ಸಹಾಯ ಸಹಕಾರವನ್ನು ಕೊಡುತ್ತೇವೆ’ ಎಂದರು. ಕ್ಯಾಂಪ್ಕೋ ಉಪಾಧ್ಯಕ್ಷ ಮತ್ತು ನಾಲಂದ ಆಡಳಿತ ಮಂಡಳಿ ಸದಸ್ಯ ಶಂಕರನಾರಾಯಣ ಭಟ್ ಖಂಡಿಗೆ, ಪುತ್ತೂರು ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಪ್ರಾಚಾರ್ಯ ಡಾ| ವಿಘ್ನೇಶ್ವರ ವರ್ಮುಡಿ, ನಾಲಂದ ಕಾಲೇಜಿನ ಪ್ರಾಂಶುಪಾಲ ಡಾ|ಕೆ.ಕಮಲಾಕ್ಷ, ಆಡಳಿತ ಮಂಡಳಿಯ ಖಜಾಂಜಿ ಗೋಪಾಲ ಚೆಟ್ಟಿಯಾರ್, ಉಪನ್ಯಾಸಕರಾದ ಅಶೋಕ, ಶಂಕರ ಖಂಡಿಗೆ ಮುಂತಾದವರು ಉಪಸ್ಥಿತರಿದ್ದರು. ಕಾಲೇಜು ಅರ್ಥಶಾಸ್ತ್ರ ಉಪನ್ಯಾಸಕಿ ಕು| ಗೀತಾ. ವಿ. ಭಟ್ ಸ್ವಾಗತಿಸಿದರು. ಉಷಾಶ್ರೀ ಕಾರ್ಯಕ್ರಮ ನಿರೂಪಿಸಿದರು. ನಾಲಂದ ಕಾಲೇಜಿನ ಆಡಳಿತಾಧಿಕಾರಿ ಶಿವಕುಮಾರ್ ಕೆ ವಂದಿಸಿದರು.