ಪೆರ್ಲ ನಾಲಂದ ಮಹಾವಿದ್ಯಾಲಯದ ಸಾಹಿತ್ಯ ಸಂಘದವತಿಯಿಂದ ಇತ್ತೀಚೆಗೆ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಪುತ್ತೂರು ವಿವೇಕಾನಂದ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ| ದುರ್ಗಾರತ್ನ ಸಿ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಹಿಂದಿ ಸಾಹಿತ್ಯ ಸಾಮ್ರಾಟ ಪ್ರೇಮ್ ಚಂದ್ರ ಕಾದಂಬರಿ, ಕಥೆಗಳಲ್ಲಿರುವ ಸಾಮಾಜಿಕತೆಯನ್ನು ಗುರುತಿಸಿದ ಅವರು ಅಸ್ಪೃಶ್ಯತೆ, ಅಸಮಾನತೆ, ಬಾಲ್ಯ ವಿವಾಹ, ವಿಧವಾತನ, ಹಸಿವಿನ ತೀವ್ರತೆಗಳನ್ನು ಸಾಕ್ಷ್ಯಚಿತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಅದಲ್ಲದೆ ಹಿಂದಿ ಭಾಷೆಯ ಮಹತ್ವವನ್ನು ಗುರುತಿಸಿ ಮಕ್ಕಳಲ್ಲಿ ಹಿಂದಿ ಬಗ್ಗೆ ಆಸಕ್ತಿ ಮೂಡಿಸಿದರು. ಹಲವು ಭಾಷೆಗಳನ್ನು ಕಲಿತುಕೊಂಡರೆ ಜ್ಞಾನ ಸಮೃದ್ಧಿಗೆ ಸಹಕಾರಿಯಾಗುವುದು ಎಂಬುದನ್ನು ಅವರು ಮನವರಿಕೆ ಮಾಡಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ|ಕಮಲಾಕ್ಷ. ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಉಪನ್ಯಾಸಕ ಕೆ. ಕೇಶವ ಶರ್ಮ ಮತ್ತು ಉಪನ್ಯಾಸಕಿ ಉಷಾಶ್ರೀ ಶುಭಾಶಂಸನೆಗೈದರು. ವಿದ್ಯಾರ್ಥಿನಿ ವಿಷ್ಣು ಪ್ರಿಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಿ ಶಾಂಭವಿ ಸ್ವಾಗತಿಸಿದರು. ವಿದ್ಯಾರ್ಥಿನಿ ರೂಪಲಕ್ಷ್ಮಿ ವಂದಿಸಿ ಫಾತಿಮತ್ ಇಷಾನಾ ಕಾರ್ಯಕ್ರಮ ನಿರೂಪಿಸಿದರು.