ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಮದರಾಸು ಪ್ರೆಸಿಡೆನ್ಸಿ ಕಾಲೇಜಿನ ನಿವೃತ್ತ ಸಂಸ್ಕೃತ ಪ್ರಾಚಾರ್ಯ ಡಾ| ಮಹಾಲಿಂಗ ಭಟ್ಟ ಕಾನತ್ತಿಲರವರನ್ನು ಗೌರವಿಸುವುದರ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ತಮ್ಮನ್ನು ಗೌರವಿಸಿದ್ದಕ್ಕೆ ಕೃತಜ್ಙತೆ ಸಲ್ಲಿಸಿ ಮಾತನಾಡಿದ ಡಾ| ಮಹಾಲಿಂಗ ಭಟ್ ಶಿಕ್ಷಣದ ಮೂಲಕ ಉತ್ತಮ ಸಂಸ್ಕಾರ ಮೂಡುತ್ತದೆ. ವೇದಾಂತ, ತತ್ವ ಶಾಸ್ತ್ರಗಳು ಧರ್ಮಸಮನ್ವಯ ಮತ್ತು ಸಹಿಷ್ಣುತೆಯನ್ನು ಬೋಧಿಸುತ್ತವೆ. ಇವೆರಡನ್ನು ಮೈಗೂಡಿಸಿಕೊಂಡರೆ ನಾಡು ಉತ್ತಮಗೊಳ್ಳುವುದರಲ್ಲಿ ಸಂಶಯಬೇಡ ಎಂದರು.
ಡಾ| ಸರ್ವಪಳ್ಳಿ ರಾಧಾಕೃಷ್ಣನ್ರವರ ಆದರ್ಶ ಮತ್ತು ವ್ಯಕ್ತಿತ್ವಗಳು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಕಾಲೇಜಿನ ಆಡಳಿತಾಧಿಕಾರಿ ಕೆ. ಶಿವಕುಮಾರರು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶುಪಾಲ ಡಾ| ಕಮಲಾಕ್ಷರವರು ವಿದ್ಯೆಯಿಂದ ವಿನಯ ಬರುತ್ತದೆ, ವಿನಯವನ್ನು ಕಲಿಸಿ ಕೊಡುವವನೇ ಶ್ರೇಷ್ಠ ಗುರು ಎಂದು ನುಡಿದರು. ಉಪನ್ಯಾಸಕ ಕೆ. ಕೇಶವಶರ್ಮ ಸ್ವಾಗತಿಸಿ ವಿದ್ಯಾರ್ಥಿ ಅಫೀಫ್ ವಂದಿಸಿದರು. ವಿದ್ಯಾರ್ಥಿನಿ ಭಾಗ್ಯಶ್ರೀ ಪ್ರಾರ್ಥಿಸಿದರು. ಉಪನ್ಯಾಸಕ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.