×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಸಾಹಿತ್ಯ ಸಂಘ ಉದ್ಘಾಟನೆ

ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರೂ ಸಾಹಿತಿಯೂ ಆದ ಡಾ| ಹರಿಕೃಷ್ಣ ಭರಣ್ಯ ನೆರವೇರಿಸಿದರು. ಕಾಸರಗೋಡಿನ ಪ್ರಕೃತಿ ಸೌಂದರ್ಯ, ಸಾಹಿತ್ಯ, ಸಂಗೀತ, ಭಾಷಾ ವೈವಿಧ್ಯಗಳು ಜಗತ್ತಿನಲ್ಲಿ ಎಲ್ಲೂ ಕಾಣಲು ಸಾಧ್ಯವಿಲ್ಲ. ಇಡೀ ಜಗತ್ತು ಇಲ್ಲಿದೆ. ಇಂತಹ ಶ್ರೀಮಂತ ನಾಡಿನಲ್ಲಿ ಹುಟ್ಟಿ ಬೆಳೆದ ನಾವು ಧನ್ಯರು. ಯಾರೂ ಒಮ್ಮೆಲೇ ದೊಡ್ಡ ಕವಿಯೋ ಸಾಹಿತಿಯೋ ಆಗಲಾರರು. ಶಾಲಾ ಮಟ್ಟದಲ್ಲಿ ಇದನ್ನು ರೂಢಿಸಿಕೊಂಡು ಬೆಳೆಯ ಬೇಕಾಗಿದೆ. ಅದಕ್ಕೆ ಇಂತಹ ವೇದಿಕೆಗಳು ಅಗತ್ಯ. ಊಟ, ನಿದ್ದೆ, ಮೈಥುನಗಳನ್ನು ಪ್ರತಿಯೊಂದು ಜೀವಿಯೂ ಮಾಡುತ್ತದೆ. ಆದರೆ ಬುದ್ಧಿವಂತ ಪ್ರಾಣಿಯಾದ ಮಾನವ ಮಾತ್ರ ಮಾಡಲು ಸಾಧ್ಯವಾದುದು ಸಾಹಿತ್ಯ ಸೃಷ್ಟಿ. ಇದು ನಿರಂತರ ಓದಿನಿಂದ ಮಾತ್ರ ಸಾಧ್ಯ. ಉತ್ತಮ ಸಾಹಿತ್ಯ ರಚಿಸಿದ ಒಬ್ಬ ಸಾಹಿತಿ ಮರಣಾನಂತರವೂ ಉಳಿಯುತ್ತಾನೆ. ಅಂತಹ ಸಾಹಿತಿಗಳ ಹುಟ್ಟಿಗೆ ಈ ಸಂಘ ಅಡಿಗಲ್ಲಾಗಲಿ ಎಂದರು.

DSC02987a

DSC02804

DSC02970

DSC02811-(1)

ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀ ಶಶಿಧರನ್‌ರವರು ಕಾಲೇಜಿನ ಭಿತ್ತಿ ಪತ್ರಿಕೆ ’ಪಂಚಾಮೃತ’ವನ್ನು ಉದ್ಘಾಟಿಸಿ, ಮಾನವನಲ್ಲಿ ಉತ್ತಮ ಸಂಸ್ಕಾರ ಬೆಳೆಯ ಬೇಕಾದರೆ ಸಾಹಿತ್ಯ ಆಗತ್ಯ. ಸಾಹಿತ್ಯದ ಮೂಲಕ ಧರ್ಮ ತತ್ವಗಳನ್ನು, ದೇವರು ಒಬ್ಬನೇ ಎಂಬ ಆಧ್ಯಾತ್ಮ ಮಹತ್ವವನ್ನು ಅರಿತುಕೊಳ್ಳಬಹುದು. ಅಂತಹ ಸೃಷ್ಟಿ ಭಿತ್ತಿಪತ್ರಿಕೆಯ ಮೂಲಕವಾಗಲಿ ಎಂದು ಹಾರೈಸಿದರು.

ಖ್ಯಾತ ರಂಗಕರ್ಮಿ ಶ್ರೀ ಅಜಿತ್.ಸಿ ಅವರು ಕಾಲೇಜು ಹಸ್ತಪತ್ರಿಕೆ ಪ್ರತಿಭಾವಲ್ಲರಿಯನ್ನು ಬಿಡುಗಡೆಗೊಳಿಸಿ, ಜೀವನದಲ್ಲಿ ತಾಯಿ, ತಂದೆ, ಗುರುಗಳನ್ನು ದೇವರಂತೆ ಕಾಣಬೇಕು ಮಾತ್ರವಲ್ಲದೆ ಜೀವನದಲ್ಲಿ ಭಯ, ಸಣ್ಣತಗಳನ್ನು ಬಿಟ್ಟು ನಿರಂತರ ಪರಿಶ್ರಮ ಪಟ್ಟರೆ ಯಾರೂ ವ್ಯರ್ಥರಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ| ಕೆ.ಕಮಲಾಕ್ಷ ವಹಿಸಿದ್ದರು. ’ನಾವು ಗಾಳಿಗೆ ತೂರಿಹೋಗುವ ಜಳ್ಳು ಭತ್ತಗಳಾಗದೆ ಗಟ್ಟಿ ಕಾಳಾಗಬೇಕು ಎಂದರು. ಉಪನ್ಯಾಸಕ ಕೆ.ಕೇಶವ ಶರ್ಮ, ಉಪನ್ಯಾಸಕಿಯರಾದ ವಿನೀಶ ಮತ್ತು ಶಾಂಭವಿ ಶುಭ ಹಾರೈಸಿದರು. ಉಪನ್ಯಾಸಕ ನಾರಾಯಣ ಶೆಟ್ಟಿ ಸ್ವಾಗತಿಸಿ ಉಪನ್ಯಾಸಕಿ ಉಷಾಶ್ರೀ ವಂದಿಸಿದರು. ಭವ್ಯಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಿಯರಾದ ರೇಖಾ ಮತ್ತು ರೆಜುಲಾ ನಿರೂಪಿಸಿದರು. ಸಭಾ ಕಾರ್ಯಕ್ರಮದ ಅನಂತರ ಅಜಿತ್.ಸಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಗತಿಯನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಗೋಪಾಲ ಚೆಟ್ಟಿಯಾರ್, ಆಡಳಿತಾಧಿಕಾರಿ ಶಿವಕುಮಾರ್ ಮತ್ತು ಕಾಲೇಜಿನ ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.