ನಟನೆ ತುಂಬಾ ಸುಲಭ, ಆದರೆ ನಟನೆಯ ಅನುಕರಣೆ ಕಷ್ಟ. ರಂಗಕಲೆಯಲ್ಲಿ ನಟನಾ ಕೌಶಲ್ಯ, ವಾಕ್ ಸ್ಫುಟತೆ, ಉಚ್ಛಾರ ಸ್ಪಷ್ಟತೆಯ ಸಂಭಾಷಣೆ, ಪಾತ್ರಕ್ಕೆ ತಕ್ಕ ಹಾವ ಭಾವ, ಸಂಜ್ಞೆಗಳ ಅಭಿನಯದ ಮೂಲಕ ಪ್ರೇಕ್ಷಕರ ಮನ ತಣಿಸಬೇಕು ಎಂದು ಪ್ರಶಸ್ತಿ ವಿಜೇತ ಸಿನಿಮಾ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅಭಿಪ್ರಾಯಪಟ್ಟರು.
ರಂಗಚಿನ್ನಾರಿ ಕಾಸರಗೋಡು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಪೆರ್ಲ ನಾಲಂದ ಕಾಲೇಜು ಆಡಳಿತ ಮಂಡಳಿಯ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ರಂಗಸಂಸ್ಕೃತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ರಂಗ ಕಲೆ “ನಾನು ಅಲ್ಲ ನಾವು” ಎಂಬುದನ್ನು ಕಲಿಸಿಕೊಡುತ್ತದೆ. ಒಂದು ತಿಂಗಳ ರಂಗತರಬೇತಿಯಲ್ಲಿ ಭಾಗವಹಿಸುವ ಮಕ್ಕಳು ಜಾತಿ ಮತ ಬೇಧ ಭಾವವಿಲ್ಲದೆ ಪರಸ್ಪರ ಬೆರೆಯುತ್ತಾರೆ. ಮನುಷ್ಯರ ನಡುವಿನ ಸಂಬಂಧ ಬಲಗೊಳ್ಳುತ್ತದೆ. ಮಕ್ಕಳಲ್ಲಿನ ಸುಪ್ತ ಪ್ರತಿಭೆ ಅನಾವರಣಗೊಳಿಸಲು ಹೆತ್ತವರು, ಶಿಕ್ಷಕರು ಮತ್ತು ಸಮಾಜದ ಪ್ರೋತ್ಸಾಹ ಬೆಂಬಲ ನೀಡಬೇಕು. ನೈಜ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯ ಎಂದರು.
ಕೇರಳ ರಾಜ್ಯ ಕಿರು ಕೈಗಾರಿಕಾ ಘಟಕ ಕಾಸರಗೋಡು ಜಿಲ್ಲಾ ಅಧ್ಯಕ್ಷ ರಾಜಾರಾಮ ಪೆರ್ಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕಾಸರಗೋಡು ಚಿನ್ನಾ ಎಲೆ ಮರೆಯ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಾರೆ ಎಂದರು.
ಕಾಲೇಜು ಪ್ರಾಂಶುಪಾಲ ಶಂಕರ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿ ಸದಸ್ಯ, ರಂಗಚಿನ್ನಾರಿ ನಿರ್ದೆಶಕ, ಕೋಳಾರು ಸತೀಶ್ಚಂದ್ರ ಭಂಡಾರಿ ಮಾತನಾಡಿ, ಕಾಸರಗೋಡು ಚಿನ್ನಾ ಅವರು ಬೆಂಗಳೂರಿನ ಕಲಾವಿದರ ನೆರವಿನಲ್ಲಿ ಕಳೆದ 18 ವರ್ಷಗಳಲ್ಲಿ 50 ಶಾಲೆಗಳ 5 ಸಾವಿರ ಮಕ್ಕಳಿಗೆ ಕನ್ನಡದ ನಾಡಗೀತೆಗಳನ್ನು ತರಬೇತಿ ನೀಡಿ ಸುಶ್ರಾವ್ಯವಾಗಿ ಹಾಡಲು ಕಲಿಸಿದ್ದಾರೆ. ಇವರಲ್ಲಿ ಆಯ್ದ 600 ಮಕ್ಕಳಿಂದ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನಲ್ಲಿ ಹಾಡಿಸಲಾಗಿದೆ ಎಂದರು.
ಆಡಳಿತ ಮಂಡಳಿ ಸದಸ್ಯ ರಾಜಶೇಖರ್ ಪೆರ್ಲ ಮಾತನಾಡಿ, ಜೀವನ ಅನುಭವವೇ ನೈಜ ಪಾಠ ಎಂದರು. ಡಾ.ಶ್ರೀಪತಿ ಕಜಂಪಾಡಿ ಉಪಸ್ಥಿತರಿದ್ದರು. ಉಪನ್ಯಾಸಕಿ ನವ್ಯಶ್ರೀ ಸ್ವಾಗತಿಸಿದರು. ವಿದ್ಯಾರ್ಥಿನಿ ಹರ್ಷಿತಾ ವಂದಿಸಿದರು. ಉಪನ್ಯಾಸಕಿ ದಿಶಾ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಗೆ ಚಿನ್ನಾ ನಿರ್ದೇಶನದಲ್ಲಿ ರಂಗಸಂಸ್ಕೃತಿ ಕಾರ್ಯಾಗಾರ ಆಯೋಜಿಸಲಾಯಿತು.