ನಾಲಂದ ಕಾಲೇಜಲ್ಲಿ ’ಶ್ರೀಮಾತಾ’ ಆಡಳಿತ ಕಚೇರಿ ನೂತನ ಕಟ್ಟಡ ಉದ್ಘಾಟನೆ
ಮೌಲ್ಯಾಧಾರಿತ ಶಿಕ್ಷಣ ಯಾವ ಸಂಸ್ಥೆಯಲ್ಲಿ ಸಿಗುತ್ತದೆಯೊ ಅಲ್ಲಿ ಉತ್ತಮ ಸಮಾಜ ನಿರ್ಮಾಣದ ಕನಸು ನನಸಾಗುತ್ತದೆ. ಕೇರಳ ಗಡಿ ಭಾಗದಲ್ಲಿರುವ ಪ್ರಶಾಂತ ವಾತಾವರಣದಲ್ಲಿ ನಾಲಂದ ಸಂಸ್ಥೆಯಿದ್ದು ಮೌಲ್ಯಾಧಾರಿತ ಶಿಕ್ಷಣಕ್ಕೆ ಅಗತ್ಯ ಒತ್ತು ನೀಡುತ್ತಿದೆ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುವುದೆಂದರೆ ಅದೊಂದು ಸುಯೋಗ ಎಂದು ಕಣ್ಣೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ| ಎಂ.ಕೆ. ಅಬ್ದುಲ್ ಖಾದರ್ ಹೇಳಿದರು.
ಅವರು ಪೆರ್ಲದ ನಾಲಂದ ಮಹಾವಿದ್ಯಾಲಯದ ಆಡಳಿತ ಕಚೇರಿಯ ನೂತನ ಕಟ್ಟಡ ’ಶ್ರೀಮಾತಾ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉತ್ತಮ ವ್ಯತಿತ್ವ ನಿರ್ಮಾಣಕ್ಕೆ ಉತ್ತಮ ಶಿಕ್ಷಣ ಅಷ್ಟೆ ಮುಖ್ಯ. ಇಂತಹ ಶ್ರೇಷ್ಠ ಮಟ್ಟದ ಶಿಕ್ಷಣ ಸಿಗುವಲ್ಲಿಗೆ ಸಹಜವಾಗಿ ವಿದ್ಯಾರ್ಥಿಗಳು ಬರುತ್ತಾರೆ. ಅವರಿಂದ ಉತ್ತಮ ರಾಷ್ಟ್ರನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಸರಕಾರ್ಯವಾಹ ಡಾ| ಕೃಷ್ಣಗೋಪಾಲ್‌ಜಿ ಮಾತನಾಡಿ ದೇಶದ ಪ್ರತಿಯೊಬ್ಬನಿಗೆ ಶಿಕ್ಷಣ ದೊರೆಯಬೇಕು. ಅದನ್ನು ಪಡೆಯುವ ಹಕ್ಕು ಪ್ರತಿಯೊಬ್ಬನಿಗೆ ಇದೆ. ಸ್ವತಮ್ತ್ರವಾಗಿ ಬದುಕಲು ಅವಕಾಶಮಾಡಿಕೊಡುವ ಶಿಕ್ಷಣ ದೇಶದ ಪ್ರಗತಿಗೆ ಪೂರಕ. ಉತ್ತಮ ಶಿಕ್ಷಣ ಪಡೆದು ಸ್ವತಂತ್ರವಾಗಿ ಜೀವನ ನಡೆಸಿ ರಾಷ್ಟ್ರದ ಉನ್ನತಿಯಲ್ಲಿ ತಮ್ಮ ಸಹಯೋಗ ಕೊಡಬೇಕೆಂದು ಕರೆಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಭಾರತೀಯ ಸಂಸ್ಕೃತಿಯುಕ್ತ ಶಿಕ್ಷಣ ನೀಡುತ್ತಿರುವ ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರಮುಖವಾದ್ದು. ಅದರ ಮೊದಲ ಅಂತಾರಾಜ್ಯ ಅಂಗ ಸಂಸ್ಥೆಯಾದ ನಾಲಂದ ಶಿಕ್ಷಣ ಸಂಸ್ಥೆ ಜ್ಞಾನಿ ವಿಜ್ಞಾನಿಗಳನ್ನು ಜಗತ್ತಿಗೆ ಕೊಡುವಂತಾಗಲಿ. ಉತ್ತಮ ನಾಗರಿಕರನ್ನು ಸಮಾಜಕ್ಕೆ ನೀಡಲಿ ಎಂದು ಆಶಿಸಿದರು.
ಪುತ್ತೂರು ವಿದ್ಯಾವರ್ಧಕ ಸಂಘದ ನಿರ್ದೇಶಕರಲ್ಲೊಬ್ಬರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ನಾಲಂದವನ್ನು ಅತ್ಯುನ್ನತ ಶಿಕ್ಷಣ ಸಂಸ್ಥೆಯನ್ನಾಗಿ ಬೆಳೆಸುವುದು ನಮ್ಮ ಗುರಿ. ಶಿಶುಮಂದಿರದಿಂದ ಹಿಡಿದು ಸ್ನಾತಕೋತ್ತರ ಅಧ್ಯಯನ ಕೇಂದ್ರದವರೆಗೆ ಮತ್ತು ಐ ಎ ಎಸ್, ಐ ಪಿ ಎಸ್. ಸ್ಪರ್ಧಾತ್ಮಕ ಪರೀಕ್ಷೆಗೂ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವ ಕೇಂದ್ರ ಇದಾಗಲಿದೆ ಎಂದರು.
ಬೆಂಗಳೂರಿನ ಟ್ರೀಟಿಯಂ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಇದರ ಸ್ಥಾಪಕ ಮತ್ತು ಆಡಳಿತ ನಿರ್ದೇಶಕ ವಿಘ್ನರಾಜ್ ಕುಳೂರು ಹಿಂದಿನ ನಾಲಂದ ವಿಶ್ವವಿದ್ಯಾನಿಲಯದಂತೆ ಪೆರ್ಲದ ನಾಲಂದ ಶಿಕ್ಷಣ ಸಂಸ್ಥೆ ವಿಶ್ವದಾತ್ಯಂತ ಹಿರಿಮೆ ಸಾಧಿಸಲಿ. ಸದ್ಗುಣ ಪರಂಪರೆ ಬೆಳೆಯಲಿ. ವಿಜ್ಞಾನ ತಂತ್ರಜ್ಞಾನಕ್ಕೆ ಕೂಡ ಈ ಸಂಸ್ಥೆ ಅತ್ಯುನ್ನತ ಗಮನ ಕೊಡಲಿ ಎಂದು ಹಾರೈಸಿದರು. ಎಣ್ಮಕಜೆ ಗ್ರಾಮಪಂಚಾಯತ್ ಅಧ್ಯಕ್ಷೆ ರೂಪವಾಣಿ ಆರ್. ಭಟ್, ಕಾಲೇಜಿನ ಪ್ರಾಂಶುಪಾಲ ಡಾ| ಕೆ. ಕಮಲಾಕ್ಷ ಶುಭ ಹಾರಸಿದರು. ತ್ವರಿತವಾಗಿ ಕಟ್ಟಡ ಕಾಮಗಾರಿ ಮುಗಿಸಿಕೊಟ್ಟ ಇಂಜಿನಿಯರ್ ರಾಜೇಶ್ ಮಜಕ್ಕಾರು ಅವರನ್ನು ನಾಲಂದ ಕಾಲೇಜು ವತಿಯಿಂದ ಮತ್ತು ’ಶ್ರೀಮಾತಾ’ದ ರೂವಾರಿ ಆನೆಮಜಲು ವಿಷ್ಣು ಭಟ್ ಅವರನ್ನು ವಿವೇಕಾನಂದ ವಿಧ್ಯಾವರ್ಧಕ ಸಂಘದ ವತಿಯಿಂದ ಗೌರವಿಸಲಾಯಿತು.
ಕು| ಭಾಗ್ಯಶ್ರೀ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ನಾಲಂದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ ಸ್ವಾಗತಿಸಿದ್ದು ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ ವಂದಿಸಿದರು. ಕಿಶೋರ್ ಪೆರ್ಲ ವೈಯಕ್ತಿಕ ಗೀತೆ ಹಾಡಿದ್ದು ಆಡಳಿತಾಧಿಕಾರಿ ಶಿವಕುಮಾರ್ ಕೆ. ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಇ. ಶಿವಪ್ರಸಾದ್, ಕಾಲೇಜಿನ ಪ್ರಾಂಶುಪಾಲ ಡಾ| ಕೆ. ಕಮಲಾಕ್ಷ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ನಂತರ ಮುಳ್ಳೇರಿಯಾದ ವಿದ್ಯಾಶ್ರೀ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಆಕರ್ಷಕ ಮನೋರಂಜನ ಕಾರ್ಯಕ್ರಮ ನಡೆಯಿತು. ನಾಲಂದ ಪರವಾಗಿ ವಿದ್ಯಾಶ್ರೀ ಸಂಸ್ಥೆಯ ಆಡಳಿತ ವರ್ಗ ಮತ್ತು ಕಾರ್ಯಕ್ರಮ ನೀಡಿದ ಎಲ್ಲರನ್ನು ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ ಚೆಟ್ಟಿಯಾರ್ ಮತ್ತು ಆಡಳಿತ ಮಂಡಳಿಯ ಸದಸ್ಯ ಮತ್ತು ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ. ಖಂಡಿಗೆ ಗೌರವಿಸಿದರು.