ನಮ್ಮ ದೇಶದಲ್ಲಿ ಪ್ರತಿ ವರ್ಷ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ.ಆದರೆ ಎಲ್ಲರಿಗೂ ಉದ್ಯೋಗ ದೊರೆಯುತ್ತಿಲ್ಲ.ಉದ್ಯೋಗ ಹುಡುಕಿಕೊಂಡು ಕಂಪೆನಿಗಳು ಸಹಿತ ವಿವಿಧೆಡೆ ಅಲೆದಾಡಬೇಕಾಗುತ್ತದೆ. ಉದ್ಯೋಗ ಮೇಳ ಆಯೋಜನೆಯಿಂದ ವಿವಿಧ ಕಂಪನಿಗಳು ಒಂದೆಡೆ ಸೇರುವುದರಿಂದ ಒಂದೇ ಸೂರಿನಲ್ಲಿ ಉದ್ಯೋಗದ ವಿವಿಧ ಅವಕಾಶಗಳು ದೊರೆಯುತ್ತವೆ ಎಂದು ಪುತ್ತೂರು ಸಾಯ ಎಂಟರ್‌ಪ್ರೈಸಸ್ ಮಾಲೀಕ ಗೋವಿಂದ ಪ್ರಕಾಶ್ ಹೇಳಿದರು.
ಕಾಲೇಜು ಕ್ಯಾಂಪಸ್ ನಲ್ಲಿ ಶನಿವಾರ ಕಾಲೇಜು ವಿದ್ಯಾರ್ಥಿಗಳು, ಪದವೀಧರರು, ಸ್ನಾತಕೋತ್ತರ ಪದವೀಧರರು, ಅನುಭವಿಗಳು ಮತ್ತು ಸಾರ್ವಜನಿಕರಿಗೆ ಆಯೋಜಿಸಲಾದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಯುವ ಜನರಿಗೆ ಉದ್ಯೋಗ ಮಾಡುವ ಉತ್ಸಾಹವಿದ್ದರೂ ಸರಿಯಾದ ಮಾರ್ಗದರ್ಶನವಿಲ್ಲದೆ ಹಲವರು ನಿರುದ್ಯೋಗಿಗಳಾಗಿ ಉಳಿಯುತ್ತಿದ್ದಾರೆ. ಉದ್ಯೋಗ ಮೇಳದ ಆಯೋಜನೆ ಮೂಲಕ ಯುವಕರಿಗೆ ಉದ್ಯೋಗದ ಮಾರ್ಗ ತೋರಿಸುವ ಅಗತ್ಯವಿದೆ.ಈ ನಿಟ್ಟಿನಲ್ಲಿ ನಾಲಂದ ಕಾಲೇಜು ಉದ್ಯೋಗ ಮೇಳ ಆಯೋಜಿಸುತ್ತಿದೆ.ಗ್ರಾಮೀಣ ಭಾಗದ ಯುವ ಸಮುದಾಯ ಉದ್ಯೋಗ ಮೇಳವನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಅದೇ ರೀತಿ ಉದ್ಯೋಗ ಎಂಬುದು ಕೇವಲ ಹಣಗಳಿಕೆಗೆ ಸೀಮಿತವಾಗಿರದೆ ತನ್ನ ಕರ್ತವ್ಯವೆಂದು ಪರಿಗಣಿಸಿ ತನ್ನ ಉದ್ಯೋಗ ಮತ್ತು ಸಂಸ್ಥೆಯೊಂದಿಗೆ ಪ್ರೀತಿ ಹಾಗೂ ವಿಧೇಯತೆ ಹೊಂದಿದರೆ ತಾನೂ ಬೆಳೆಯುವುದಲ್ಲದೆ ಸಂಸ್ಥೆಯೂ ಬೆಳವಣಿಗೆ ಹೊಂದುವುದು ಎಂದರು.
ಕಾಲೇಜು ಪ್ರಿನ್ಸಿಪಾಲ್ ಡಾ.ಕಿಶೋರ್ ಕುಮಾರ್ ರೈ ಶೇಣಿ ಅಧ್ಯಕ್ಷತೆ ವಹಿಸಿದ್ದರು.ಕಾಲೇಜು ಆಡಳಿತ ಮಂಡಳಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ ಮಾತನಾಡಿ, ಉದ್ಯೋಗಾರ್ಥಿಗಳಿಗೆ ಹಲವಾರು ಅವಕಾಶಗಳಿವೆ.ಆದರೆ ಉದಾಸೀನತೆ ತೊರೆದು ಅವಕಾಶಗಳನ್ನು ಅರಸಿದಲ್ಲಿ ಯಾರೂ ನಿರುದ್ಯೋಗಿಗಳಾಗಿ ಉಳಿಯರು.ಉದ್ಯೋಗ ಮೇಳಗಳು ಯುವಜನರಿಗೆ ಉದ್ಯೋಗ ಕಲ್ಪಿಸುವ ಉತ್ತಮ ವೇದಿಕೆಯಾಗಿದೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆಯೊಂದಿಗೆ ಉದ್ಯೋಗವನ್ನೂ ಕಲ್ಪಿಸಲು ಉದ್ಯೋಗ ಮೇಳವನ್ನೂ ಆಯೋಜಿಸುತ್ತಿರುವ ನಾಲಂದ ಕಾಲೇಜಿನ ಕಾಳಜಿ ಶ್ಲಾಘನೀಯ.ಮೇಳದಲ್ಲಿ ಭಾಗವಿಸುವ ಎಲ್ಲರಿಗೂ ಇದೊಂದು ದೊಡ್ಡ ಅನುಭವವಾಗಲಿದೆ.ಎಲ್ಲ ಉದ್ಯೋಗಕಾಂಕ್ಷಿಗಳಿಗೂ ಉದ್ಯೋಗ ಲಭಿಸಲಿ ಎಂದು ಹಾರೈಸಿದರು.
ಕಾಲೇಜು ಪ್ಲೇಸ್ ಮೆಂಟ್ ಸೆಲ್ ಅಧಿಕಾರಿ, ಕಾಮರ್ಸ್ ವಿಭಾಗದ ಪ್ರಾಧ್ಯಾಪಕ ಸುರೇಶ್ ಕೆ.ಎಂ.ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ರೂಪಾ ವಂದಿಸಿದರು.ಅನುಷಾ ಸಿ.ಎಚ್.ನಿರೂಪಿಸಿದರು.
ಒಟ್ಟು 19ಕ್ಕೂ ಹೆಚ್ಚು ಕಂಪನಿಗಳ ಪ್ರತಿನಿಧಿಗಳು ಆಗಮಿಸಿದ ಉದ್ಯೋಗ ಮೇಳದಲ್ಲಿ ಕೇರಳ ಕರ್ನಾಟಕ ಕಾಲೇಜು ವಿದ್ಯಾರ್ಥಿಗಳು ಸಹಿತ 300ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೊಂದಣಿ ನಡೆಸಿ ಸಂದರ್ಶನದಲ್ಲಿ ಭಾಗವಹಿಸಿದರು.