ಆಧುನಿಕ ವಿದ್ಯಾಭ್ಯಾಸ ನಮ್ಮಲ್ಲಿ ಭಾರತೀಯತೆಯನ್ನು ಮರೆಸಿದೆ. ವೇದ ಪುರಾಣಗಳಲ್ಲಿ ಇರುವ ನೈತಿಕ ಪಾಠಗಳು ನಮಗೆ ಆದರ್ಶಗಳಾಗುತ್ತಿಲ್ಲ. ಪ್ರಪಂಚಕ್ಕೆ ಪೂಜ್ಯವನ್ನು ಕೊಟ್ಟದ್ದು ಭಾರತ. ಪೂಜ್ಯವಿಲ್ಲದೆ ಹೋದರೆ ಜಗತ್ತಿನ ವ್ಯಾವಹಾರಿಕ ವ್ಯವಸ್ಥೆಗೆ ಎಂಥ ತೊಡಕುಗಳಾಗುತ್ತಿತ್ತೊ ಊಹಿಸುವಂತಿಲ್ಲ. ಪೂಜ್ಯದೆದುರು ಎಷ್ಟು ದೊಡ್ಡ ಮೊತ್ತಗಳಿದ್ದರೂ ಅದಕ್ಕೆ ಬೆಲೆ ಬರುವುದಿಲ್ಲ. ವೇದಗಣಿತದಂಥಹ ಅಪೂರ್ವ ಗಣಿತವನ್ನು ವಿಶ್ವಕ್ಕೆ ಕೊಟ್ಟ ಹೆಮ್ಮೆ ನಮ್ಮ ಭಾರತದ್ದು. ಅಷ್ಟಾಂಗ ಯೋಗದ ಪರಿಕಲ್ಪನೆಯಂತು ಅಪಾರ. ಅದರೊಳಗೆ ಅಡಗಿದ ಬಾಹ್ಯ ಮತ್ತು ಆಂತರಿಕ ಸ್ಪುಟತ್ವ ಯಾವ ಕಾಲಕ್ಕೂ ಅನುಸರಣೀಯ. ಈಗಂತು ಯೋಗ ಮಹತ್ವವನ್ನು ಜಗತ್ತಿಗೆ ನೆನಪಿಸುವ ಯೋಗ್ಯತೆ ಭಾರತಕ್ಕೆ ಬಂದಿದೆ. ವಿಶ್ವದ ಮುಂದೆ ಭಾರತ ವಿಶ್ವಗುರುವಾಗಲು ಮುಖ್ಯ ಅಡಿಪಾಯ ಯೋಗವೆ. ವಿದ್ಯಾಭ್ಯಾಸದ ಜೊತೆಜೊತೆಗೆ ನಮ್ಮ ಭಾಅತೀಯತೆಯ ಮಹತ್ವ, ಸಂಸ್ಕೃತಿಯ ಹಿರಿಮೆ ಗರಿಮೆಗಳನ್ನು ಮೈಗೂಡಿಸಿಕೊಂಡು ಬೆಳೆದರೆ ಬದುಕು ಸಾರ್ಥಕವಾಗುತ್ತದೆ ಎಂದು ಅಖಿಲ ಭಾರತ ಕುಟುಂಬ ಪ್ರಬೋಧನಾ ಪ್ರಮುಖ್ ಶ್ರೀಯುತ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು. ನಾಲಂದ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮೊದಲ ಪದವಿ ತರಗತಿಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನುದ್ದೇಶಿಸಿ ಅವರು ಹೇಳಿದ ಮಾತುಗಳಿವು.
ನಾಲಂದದ ಆಡಳಿತಾಧಿಕಾರಿ ಶ್ರೀಯುತ ಶಿವಕುಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಟಾಫ್ ಸೆಕ್ರೆಟರಿ ಶ್ರೀಯುತ ಅನೀಶ್ ಶುಭಾಶಂಸನೆ ಮಾಡಿದರು. ಉಪನ್ಯಾಸಕ ಶ್ರೀಯುತ ಕೆ. ಕೇಶವ ಶರ್ಮ ಸ್ವಾಗತಿಸಿದ್ದು ವಿದ್ಯಾರ್ಥಿ ಶ್ರೀ ರಾಜೇಶ್ ವಂದಿಸಿದರು. ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ವಿಘ್ನೇಶ್ವರ ವರ್ಮುಡಿ ವೇದಿಕೆಯಲ್ಲಿದ್ದರು. ನಾಲಂದ ಆಡಳಿತ ಸಮಿತಿಯ ಸದಸ್ಯರು, ಉಪನ್ಯಾಸಕರು ಈ ಸಮಾರಂಭದಲ್ಲಿ ಹಾಜರಿದ್ದರು.