ಅದು ಒಂದು ಒಂದು ಚಿಕ್ಕ ಚೊಕ್ಕ ಸಮಾರಂಭ. ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ನಾಲಂದ ಕಾಲೇಜಿಗೆ ಕೊಡುಗೆಯಾಗಿ ಬಂದ ಎರಡು ಕಂಪ್ಯೂಟರ್‌ಗಳನ್ನು ಹಸ್ತಾಂತರಿಸುವ ಶುಭ ಘಳಿಗೆ.
ಬ್ಯಾಂಕ್ ಅಧ್ಯಕ್ಷ ಶ್ರೀ ಎನ್. ಕೃಷ್ಣ ಕುಮಾರ್ ಕಂಪ್ಯೂಟರನ್ನು ಕಾಲೇಜಿನ ಆಡಳಿತಾಧಿಕಾರಿ ಶ್ರೀ ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಿದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೇವಾ ಸಹಕಾರಿ ಬ್ಯಾಂಕ್ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದೆ. ಉತ್ತಮ ಶಿಕ್ಷಣದ ಮೂಲಕ ಸಮಾಜೋನ್ನತಿ ಸಾಧ್ಯವಾಗುವುದರಿಂದ ಇಂಥ ಕೊಡುಗೆಗಳು ಹೆಚ್ಚು ಮೌಲ್ಯಯುತವಾಗುತ್ತವೆ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ಬ್ಯಾಂಕಿನ ಕಾರ್ಯದರ್ಶಿ ಶ್ರೀ ಕೆ. ಶಂಕರನಾರಾಯಣ ಭಟ್ ಹೇಳಿದರು. ಡಾ| ಜಯಗೋವಿಂದ ಉಕ್ಕಿನಡ್ಕ ಅವರು ಬ್ಯಾಂಕಿಗೆ ಕೃತಜ್ಞತಾ ಪತ್ರ ನೀಡಿದರು.
ಆಡಳಿತಾಧಿಕಾರಿ ಶ್ರೀ ಕೆ. ಶಿವಕುಮಾರ್ ಸ್ವಾಗತಿಸಿದ್ದು, ಪ್ರಾಂಶುಪಾಲ ಡಾ| ಕೆ. ಕಮಲಾಕ್ಷ ವಂದಿಸಿದರು. ಉಪನ್ಯಾಸಕ ಶ್ರೀ ಕೆ. ಕೇಶವ ಶರ್ಮ ಕಾರ್ಯಕ್ರಮ ಸಂಯೋಜಿಸಿದರು. ಬ್ಯಾಂಕಿನ ನಿರ್ದೇಶಕರು ಮತ್ತು ಕಾಲೇಜು ಆಡಳಿತ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.