×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

One Day National Level Seminar

 

ಶಿಕ್ಷಣದಿಂದ ಬದಲಾವಣೆ ಹೇಗೆ ಸಾಧ್ಯವೋ ಹಾಗೆಯೇ ಬದಲಾವಣೆಗಾಗಿ ಶಿಕ್ಷಣದ ಸ್ಪಂದನೆಯೂ ಅತ್ಯಗತ್ಯ

ನಾಲಂದ ಕಾಲೇಜಿನಲ್ಲಿ ಸ್ಟಾರ್ಟ್-ಅಪ್ ಸಂದರ್ಭದಲ್ಲಿ ಉದ್ಯಮಶೀಲತೆ ಮತ್ತು ಆರ್ಥಿಕ ಅಭಿವೃದ್ಧಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ

ಹಿಂದಿನದ್ದನ್ನು ಅಧ್ಯಯನ ಮಾಡಿ, ವರ್ತಮಾನವನ್ನು ಅರ್ಥಮಾಡಿಕೊಂಡಲ್ಲಿ‌ ಖಂಡಿತವಾಗಿಯೂ ನಾವು ನಮ್ಮ ಭವಿಷ್ಯವನ್ನು ಕಂಡುಕೊಳ್ಳಬಹುದು.ಶಿಕ್ಷಣ ಎಂಬುದು ನಿರಂತರವಾದ ಪ್ರಕ್ರಿಯೆಯಾಗಿದೆ.ಬದಲಾವಣೆಗಾಗಿ ನಾವು ಕಲಿಯಬೇಕು.ಕಲಿಯಲು ನಾವು ಬದಲಾಗಬೇಕು. ಕಲಿಯುವಿಕೆಯನ್ನು ನಾವು ಕಲಿಯಬೇಕು ಎಂದು ಮಂಗಳೂರು ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.

ಕಾಲೇಜು ಸಭಾಂಗಣದಲ್ಲಿ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ನೇತೃತ್ವದಲ್ಲಿ ಶನಿವಾರ ನಡೆದ “ಸ್ಟಾರ್ಟ್-ಅಪ್ ಸಂದರ್ಭದಲ್ಲಿ ಉದ್ಯಮಶೀಲತೆ ಮತ್ತು ಆರ್ಥಿಕ ಅಭಿವೃದ್ಧಿ” ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಬಹು ಕ್ರಿಯಾತ್ಮಕತೆ, ಕಲ್ಪನೆ, ಸೃಜನಶೀಲತೆ, ನಾವಿನ್ಯತೆ, ಕುತೂಹಲ, ಸೀಮೆಗಳೇ ಇಲ್ಲದ ಆಲೋಚನೆ, ಆತ್ಮಾವಲೋಕನ, ಧೈರ್ಯ ಇದ್ದಲ್ಲಿ ಉಜ್ವಲ ಭವಿಷ್ಯ ನಮ್ಮದಾಗುವುದು.ಶಿಕ್ಷಣದಿಂದ ಬದಲಾವಣೆ ಹೇಗೆ ಸಾಧ್ಯವೋ ಹಾಗೆಯೇ ಬದಲಾವಣೆಗಾಗಿ ಶಿಕ್ಷಣದ ಸ್ಪಂದನೆಯೂ ಅತ್ಯಗತ್ಯ.ನಾವಿನ್ಯಯುತ ವಿಧಾನಗಳ ಮೂಲಕ ಮನೋ ದೈಹಿಕ ಭಾವನಾತ್ಮಕ ಜ್ಞಾನಾತ್ಮಕ ವಿಕಾಸಕ್ಕೆ ಶ್ರಮಿಸಬೇಕು ಎಂದರು.

ಯುಎಇ ವಿನಿಮಯ ಕೇಂದ್ರದ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ವೈ.ಸುಧೀರ್ ಕುಮಾರ್ ಶೆಟ್ಟಿ ಮುಖ್ಯ ಭಾಷಣದಲ್ಲಿ‌ ಮಾತನಾಡಿ, ಮೊದಲು ಭಾರತವು ಇತರ ದೇಶಗಳ‌‌ ನೆರವು ಯಾಚಿಸುತ್ತಿದ್ದರೆ ಈಗ ಇತರ ದೇಶಗಳಿಗೆ ನೆರವು ನೀಡುವ ಮಟ್ಟಕ್ಕೆ ಬೆಳೆದಿದೆ.ಗಾಂಧೀಜಿಯವರ ತತ್ವದಂತೆ ಸಪ್ತ ಪಾತಕಗಳಿಂದ ನಾವು ದೂರವಿರಬೇಕು.ತತ್ವ ರಹಿತ ರಾಜಕಾರಣ, ದುಡಿಮೆ ಇಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ಚಾರಿತ್ರ್ಯವಿಲ್ಲದ ಶಿಕ್ಷಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ಜ್ಞಾನ, ತ್ಯಾಗವಿಲ್ಲದ ಪೂಜೆ ಇದ್ಯಾವುದೂ ಶಾಶ್ವತವಲ್ಲ.ತಪ್ಪುಗಳಿಂದಲೇ ಕಲಿತು ಹಾಗೂ ಅದರ ಮೇಲೆಯೇ ಪ್ರಯೋಗಗಳನ್ನು ಮಾಡಿಕೊಂಡು ಸಾಧನೆಗೆ ಯತ್ನಿಸಬೇಕು ಎಂದರು.

ನಾಲಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಿದ್ದರು. ನಾಲಂದ ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ಡಾ.ವಿಘ್ನೇಶ್ವರ ವರ್ಮುಡಿ ಮಾತನಾಡಿದರು.ಕಾಲೇಜು ಆಡಳಿತ ಮಂಡಳಿ ಪದಾಧಿಕಾರಿಗಳು, ಸಂಘಟನಾ ಸಮಿತಿ ಸದಸ್ಯರು, ಸಹಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಸೆಮಿನಾರ್ ಸಂಚಾಲಕ, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ವಿಭಾಗದ ಸಹ ಪ್ರಾಧ್ಯಾಪಕ ಸುರೇಶ್ ಕೆ.ಎಂ.ಸ್ವಾಗತಿಸಿದರು.ಪ್ರಿನ್ಸಿಪಾಲ್‌ ಡಾ.ಕಿಶೋರ್ ಕುಮಾರ್ ರೈ ಶೇಣಿ ವಂದಿಸಿದರು.ಸಹ ಪ್ರಾಧ್ಯಾಪಕಿ ಅನುಷಾ ಸಿ.ಎಚ್.ನಿರೂಪಿಸಿದರು.

ಪ್ರದೀಪ್ ಎಂಟರ್ಪ್ರೈಸಸ್,‌ ಕೊಬ್ಬರಿ ಸಂಸ್ಕರಣಾ ಘಟಕ ಮತ್ತು ದೀಪಾ ಆಯಿಲ್ ಮತ್ತು ಫ್ಲೋರ್ ಮಿಲ್, ಖಂಡೇರಿ ಮಾಲೀಕ ಪದ್ಮನಾಭ ಭಟ್ ಅಧ್ಯಕ್ಷತೆಯಲ್ಲಿ ನಡೆದ “ಮಹಿಳಾ ಸಬಲೀಕರಣಕ್ಕೆ ಮಹಿಳಾ ಉದ್ಯಮಶೀಲತೆ ಒಂದು ಸಾಧನ ವಿಷಯದ ವಿಚಾರಣ ಸಂಕಿರಣದಲ್ಲಿ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಪ್ರಾಧ್ಯಾಪಕರು ಡಾ.ಹರೀಶ್ ಜೋಶಿ, ಇಕೋ-ಬ್ಲಿಸ್ ತಯಾರಕ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಮತ್ತು ಅರೆಕಾ ಲೀಫ್ ಬಯೋ ಪ್ಲೇಟ್ ರಫ್ತುದಾರ ರಾಜಾರಾಮ ಸಿ.ಜಿ.ಬಲಿಪಗುಳಿ ಅಧ್ಯಕ್ಷತೆಯಲ್ಲಿ ನಡೆದ “ಗ್ರಾಮೀಣ ಉದ್ಯಮಶೀಲತೆಯಲ್ಲಿ ಅಭಿವೃದ್ಧಿಯ ಮಾದರಿಗಳು” ವಿಷಯದ ವಿಚಾರ ಸಂಕಿರಣದಲ್ಲಿ‌ ತುಮಕೂರು ವಿಶ್ವವಿದ್ಯಾಲಯದ ಅಧ್ಯಯನ ವಿಭಾಗ ಮತ್ತು ಅರ್ಥಶಾಸ್ತ್ರದಲ್ಲಿ ಸಂಶೋಧನೆ ವಿಭಾಗದ ಪ್ರಾಧ್ಯಾಪಕ ಡಾ.ರವೀಂದ್ರ ಕುಮಾರ್ ಬಿ.ಸಂಪನ್ಮೂಲ‌ ವ್ಯಕ್ತಿಗಳಾಗಿ ಭಾಗವಹಿಸಿ ತರಗತಿ ನೀಡಿದರು.

ಕಾಗದದ ಪ್ರಸ್ತುತಿ ಮತ್ತು ಚರ್ಚೆಯಲ್ಲಿ ಕಣ್ಣೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರದ ಸಂಶೋಧನಾ ಮಾರ್ಗದರ್ಶಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ವಾಣಿಜ್ಯ ಸ್ನಾತಕೋತ್ತರ ವಿಭಾಗ ಮುಖ್ಯಸ್ಥ ಮತ್ತು ಸಹ ಪ್ರಾಧ್ಯಾಪಕ ಡಾ. ಶಚೀಂದ್ರನ್ ವಿ. ಮತ್ತು ಪುತ್ತೂರು ವಿವೇಕಾನಂದ ಕಾಲೇಜು ಕಲೆ, ವಿಜ್ಞಾನ ಮತ್ತು ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಪಿಜಿ(ಎಂ.ಕಾಂ) ಕೋ-ಆರ್ಡಿನೇಟರ್ ಡಾ.ವಿಜಯ ಸರಸ್ವತಿ ಬಿ. ಭಾಗವಹಿಸಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಂ.ಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಣ್ಣೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಮಾಜಿ ರಿಜಿಸ್ಟ್ರಾರ್, ಕಾಞಂಗಾಡ್ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ, ಅಸೋಸಿಯೇಟ್ ಪ್ರೊಫೆಸರ್ ಡಾ.ಎ.ಅಶೋಕನ್ ಸಮಾರೋಪ ಭಾಷಣ ಮಾಡಿದರು‌.

 

 

————————–

 

 

“ಕಾಲಕ್ಕೆ ತಕ್ಕಂತೆ ಬುದ್ಧಿಶಕ್ತಿ ಬಳಸಿ‌ ನಾಗರೀಕತೆಯ ಅವಶ್ಯಕತೆಗಳಿಗೆ ತಕ್ಕಂತೆ ಕಲಿಯಬೇಕು. ಕಲಿಯುವಿಕೆಯಿಂದ ಸಮಾಜ ಮತ್ತು ನಾಗರೀಕತೆಯ ಪ್ರಗತಿಯುತ ಬದಲಾವಣೆ ಸಾಧ್ಯವಾಗುವುದು.ಎಲ್ಲ ಕ್ಷೇತ್ರಗಳಲ್ಲಿ ಹರಡಿಕೊಂಡಿರುವ ವ್ಯಾವಹಾರಿಕತೆಯನ್ನೂ ಗಮನಿಸಬೇಕು.ಜನ್ಮ ನೀಡಿದ ತಾಯಿ, ಹೊತ್ತ ಭೂಮಿ, ನಡೆದು ಬಂದ ದಾರಿಯನ್ನು ನಾವು ಎಂದಿಗೂ ಮರೆಯಬಾರದು”

ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ
ಮಂಗಳೂರು ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ ಉಪಕುಲಪತಿಗಳು
————————–
“ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಯಂತೆ ಉದ್ಯೋಗಾಕಾಂಕ್ಷಿಗಳನ್ನು ರೂಪಿಸುವುದಕ್ಕಿಂತ ಉದ್ಯೋಗದಾತರನ್ನು ರೂಪಿಸುವುದರ ಮೇಲೆ ಗಮನ ಕೊಡಬೇಕು.ಲಭ್ಯತೆಯ ವಿಷಯವನ್ನು ಆರಿಸಿ ಚಿಂತನೆಯ ದೃಷ್ಟಿಕೋನದೊಂದಿಗೆ ಬುದ್ಧಿವಂತಿಕೆಯ ಸಂಸ್ಕೃತಿಯನ್ನು ಬೆಳೆಸಿ ಹೊಸ ಹೊಸ ಆವಿಷ್ಕಾರಗಳ ಮೂಲಕ ಯಶಸ್ಸು ಗಳಿಸಬಹುದು”

ವೈ.ಸುಧೀರ್ ಕುಮಾರ್ ಶೆಟ್ಟಿ
ಯುಎಇ ವಿನಿಮಯ ಕೇಂದ್ರದ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕ ಮತ್ತು ಮಾಜಿ ಅಧ್ಯಕ್ಷರು