ಪೆರ್ಲ : ನಾವು ನಮ್ಮ ಶಾಲೆ ಮತ್ತು ಗುರುಗಳನ್ನು ಗೌರವಿಸಿದಂತೆ ದೇಶವನ್ನು ಗೌರವಿಸಬೇಕು. ಗುರುವನ್ನು ನಿಂದಿಸಿದವನು ಮತ್ತು ದೇಶದ ಉನ್ನತ ಮೌಲ್ಯಗಳನ್ನು ಗೌರವಿಸದವನು ಯಾವ ಕಾಲಕ್ಕೂ ಉದ್ಧಾರವಾಗಲು ಸಾಧ್ಯವಿಲ್ಲ. ನಮ್ಮ ದೇಶಕ್ಕಾಗಿ ಯುವಜನಾಂಗ ಯಾವ ತ್ಯಾಗಕ್ಕೂ ಸಿದ್ಧವಾಗಬೇಕು ಮತ್ತು ದೇಶದ ಉಜ್ವಲ ಭವಿತವ್ಯಕ್ಕೆ ಎಲ್ಲ ಭೇದ ಭಾವಗಳನ್ನು ಮರೆತು ಒಗ್ಗೂಡಬೇಕಿದೆಯೆಂದು ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಸಿಪಾಯಿಯಾಗಿ ಸೇರಿ 1991 ರಿಂದ 1971 ರ ವರೆಗೆ ಸುಮಾರು ಐದು ಯುದ್ಧಗಳಲ್ಲಿ ಭಾರತ ಸೇನೆಯನ್ನು ಪ್ರತಿನಿಧಿಸಿದ ಆರ್ಟಿಲರಿ ಪ್ಯಾರಾಟ್ರೂಫರ್ಸ್‌ವಿಂಗ್‌ನ ನಿವೃತ್ತ ಕ್ಯಾಪ್ಟನ್ ನಾರಾಯಣ ಮಣಿಯಾಣಿ ಕರೆನೀಡಿದರು. ಅವರು ಇಲ್ಲಿನ ನಾಲಂದ ಮಹಾವಿದ್ಯಾಲಯದಲ್ಲಿ 69 ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣಗೈದು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಇಂದಿನ ಯುವಶಕ್ತಿಯ ಮುಂದೆ ಅಪಾರ ಅವಕಾಶಗಳಿವೆ. ಸೇನೆಗೆ ಸೇರ್ಪಡೆಗೊಂಡು ದೇಶ ಸೇವೆಯನ್ನು ಮಾಡುವುದರ ಜೊತೆಗೆ ಬದುಕಿನ ಉನ್ನತ ಕನಸುಗಳನ್ನು ನನಸಾಗಿಸಬಹುದು. ಆಧಿನಿಕ ತಂತ್ರಜ್ಞಾನದ ಕೆಡುಕುಗಳನ್ನು ದೂರಮಾಡಿ ಒಳಿತುಗಳನ್ನು ಸದುಪಯೋಗಪಡಿಸಿಕೊಂಡರೆ ಜೀವನ ಹಸನಾದೀತು. ಯಾವುದೇ ಕ್ಷೇತ್ರವಾದರೂ ಸಂಬಳ ತಗೊಂಡು ದುಡಿಯುವವನು ಆತ್ಮಾಭಿಮಾನದಿಂದ ಮತ್ತು ಶಿಸ್ತಿನಿಂದ ದುಡಿಯಬೇಕು. ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡವನನ್ನು ಮರ್ಯಾದೆ ಮತ್ತು ಗೆಲುವು ಅರಸಿಕೊಂಡು ಬರುತ್ತದೆ ಎಂದು ಶ್ರೀ ನಾರಾಯಣ ಮಣಿಯಾಣಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತಾಧಿಕಾರಿ ಶ್ರೀ ಶಿವಕುಮಾರ್ ಸ್ವಾತಂತ್ರ್ಯವೆಂದರೆ ಅದು ಸ್ವೇಚ್ಛಾಚಾರವಾಗಬಾರದು. ಇದನ್ನು ಯುವಜನತೆ ಅರ್ಥೈಸಿಕೊಳ್ಳಬೇಕು. ನಮಗೆ ಇರುವ ಸ್ವಾತಂತ್ರ್ಯ ಇನ್ನೊಬ್ಬರ ಸ್ವಾತಂತ್ರ್ಯವನ್ನು ಕಸಿಯಲು ಬಳಕೆಯಾಗುತ್ತಿರುವುದು ದುರದೃಷ್ಟಕರ. ಬದುಕಿನಲ್ಲಿ ಸ್ವಯಂಶಿಸ್ತು ಆತ್ಮೋನ್ನತಿಯ ಜೊತೆಗೆ ರಾಷ್ಟ್ರದ ಪರಮವೈಭವಕ್ಕೆ ಪೂರಕ. ರಾಷ್ಟ್ರದ ಉನ್ನತಿಯ ಸಂಕಲ್ಪಶಕ್ತಿ ನಮ್ಮಲ್ಲಿ ವೃದ್ಧಿಸಬೇಕಾಗಿದೆಯೆಂದು ಕರೆನೀಡಿದರು.
ಆಡಳಿತ ಮಂಡಳಿಯ ಶ್ರೀಮತಿ ಪ್ರಭಾವತಿ, ಉಪಾನ್ಯಾಸಕ ಶ್ರೀ ಅನೀಶ್ ಕುಮಾರ್, ರಾಸ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಶ್ರೀ ಶಂಕರ್ ಸ್ವಾತಂತ್ರ್ಯದಿನದ ಬಗ್ಗೆ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು. ಉಪಾನ್ಯಾಸಕ ಶ್ರೀ ಕೇಶವ ಶರ್ಮ ಸ್ವಾಗತಿಸಿದ್ದು ವಿದ್ಯಾರ್ಥಿ ಶ್ರೀ ಅಬ್ದುಲ್ ಮುರ್ಷಿದ್ ವಂದಿಸಿದರು.