ಪೆರ್ಲ : ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಹಲವು ಹೊಣೆಗಾರಿಕೆಗಳನ್ನು ನಿಭಾಯಿಸಿ ಸುದೀರ್ಘ ಸಮಯ ಪ್ರಚಾರಕರಾಗಿದ್ದ ಮತ್ತು ಕುಟುಂಬ ಜೀವನದ ಉಳಿವಿನ ಕುರಿತಂತೆ ಹೊಸ ಪರಿಕಲ್ಪನೆ ಸಂಘಟಿಸಿದ ನ. ಕೃಷ್ಣಪ್ಪನವರ ನಿಧನಕ್ಕೆ ಪೆರ್ಲದ ನಾಲಂದ ಕಾಲೇಜು ಆಡಳಿತ ಸಮಿತಿ ಶ್ರದ್ಧಾಂಜಲಿ ಸಮರ್ಪಿಸಿತು. ಈ ಸಂದರ್ಭದಲ್ಲಿ ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಸಂಯೋಜಕ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ನ. ಕೃಷ್ಣಪ್ಪನವರ ಸಮಾಜ ಸಮರ್ಪಿತ ಜೀವನ ಮತ್ತು ಬದುಕಿನಲ್ಲಿ ಅವರು ಕುಟುಂಬಗಳ ಸಾಮರಸ್ಯದ ಬಗೆಗೆ ಹಾಗು ಕುಟುಂಬದೊಳಗಿನ ಭಾವನಾತ್ಮಕ ಸಂಬಂಧಗಳನ್ನು ಉಳಿಸಿಕೊಳ್ಳಲು ವಹಿಸಿದ ಪಾತ್ರದ ಬಗ್ಗೆ ಮಾತನಾಡಿದರು. ಸುಮಾರು ಇಪ್ಪತ್ತೆಂಟು ವರ್ಷಗಳಷ್ಟು ಕಾಲ ಸ್ವತಃ ಆರೋಗ್ಯ ಸಮಸ್ಯೆಯಿದ್ದರೂ ಇತರರ ಆರೋಗ್ಯದ ಬಗೆಗೆ ಕಾಳಜಿವಹಿಸಿ ಅವರಲ್ಲಿ ಜೀವನಶ್ರದ್ಧೆಯನ್ನು ತುಂಬುತ್ತಿದ್ದ ಅವರ ಸಂಕಲ್ಪ ಶಕ್ತಿಯನ್ನು ನೆನಪಿಸಿಕೊಂಡ ಅವರು ತಪ್ಪುಮಾಡಿದರೆ ಅದನ್ನು ನವಿರಾಗಿ ವಿರೋಧಿಸುತ್ತಿದ್ದ ಮತ್ತು ತಪ್ಪನ್ನು ತಿದ್ದಿಕೊಂಡು ಸರಿಮಾಡಿಕೊಳ್ಳುವಲ್ಲಿವರೆಗೆ ಬಿಡದ ಅವರ ಸ್ವಭಾವ ಹಾಗು ನಡೆದು ತೋರಿಸಿದ ಸಾಧನೆಯ ಹಿರಿಮೆಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ| ಕೆ. ಕಮಲಾಕ್ಷ, ಆಡಳಿತಾಧಿಕಾರಿ ಶ್ರೀ ಶಿವಕುಮಾರ್, ಆಡಳಿತ ಸಮಿತಿಯ ಅಧ್ಯಕ್ಷ ಶ್ರೀ ಆನೆಮಜಲು ವಿಷ್ಣು ಭಟ್, ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ, ಶ್ರೀ ಕೋಳಾರು ಸತೀಶ್ಚಂದ್ರ ಭಂಡಾರಿ, ಶ್ರೀ ರಂಗನಾಥ ಶೆಣೈ, ಶ್ರೀಮತಿ ಪ್ರಭಾವತಿ, ಶ್ರೀಮತಿ ಶ್ಯಾಮಲಾ ಪತ್ತಡ್ಕ, ಶ್ರೀ ಶಂ.ನಾ.ಖಂಡಿಗೆ. ಶ್ರೀ ಶಶಿಭೂಷಣ ಶಾಸ್ತ್ರಿ ಹಾಗು ಶ್ರೀ ರಾಜಶೇಖರ್ ಹಾಜರಿದ್ದರು.