ಪೆರ್ಲ ನಾಲಂದ ಕಾಲೇಜಿನಲ್ಲಿ ಕೃಷಿ ಮೇಳ ಸಮಾರಂಭ ಉದ್ಘಾಟಿಸಿ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ
ಕೃಷಿ ಸಂಸ್ಕೃತಿ, ಋಷಿ ಸಂಸ್ಕೃತಿಗಳು ಒಟ್ಟಾಗಿ ಖುಷಿ ಸಂಸ್ಕೃತಿ ಇರುವುದು ಭಾರತದಲ್ಲಿ ಮಾತ್ರ.ಆಧುನಿಕ ತಂತ್ರಜ್ಞಾನ ಯುಗದಲ್ಲಿ ಜಗತ್ತು ಎಷ್ಟೇ ಮುಂದುವರಿದಿದ್ದರೂ ಕೃಷಿ ಜನರ ಅಸ್ತಿತ್ವವನ್ನು ನಿರ್ಣಯಿಸುವ ಮೂಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್.ಹೇಳಿದರು.
ಪೆರ್ಲ ನಾಲಂದ ಕಾಲೇಜು, ಕ್ಯಾಂಪ್ಕೋ ಮಂಗಳೂರು ಹಾಗೂ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಸಹಯೋಗದಲ್ಲಿ ನಾಲಂದ ಕಾಲೇಜು ಪರಿಸರದಲ್ಲಿ ನಡೆದ ’ಬೃಹತ್ ಕೃಷಿ ಮೇಳ’ವನ್ನು ತೆಂಗಿನ ಹಿಂಗಾರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇವರ ನಾಡು, ಆಧ್ಯಾತ್ಮಿಕತೆಯ ಬೀಡಾದ ಕೇರಳದಲ್ಲಿ ಅಸಮಾನತೆ ಪರಕಾಷ್ಟೆಗೆ ತಲಪಿದಾಗ ಬ್ರಹ್ಮಶ್ರೀ ನಾರಾಯಣ ಗುರುಗಳು ಜನ್ಮ ತಾಳಿದ್ದು ಸಮಾನತೆಗೆ ಹೋರಾಡಿದರು. ವರ್ಗಿಸ್ ಕುರಿಯನ್ ದೇಶದಲ್ಲಿ ಕೃಷಿ ಕ್ರಾಂತಿಯನ್ನೇ ಮಾಡಿದರು.ಭಾರತವನ್ನು ವಿದೇಶಿಯರು ಬಡವರ, ಭಿಕ್ಷುಕರ ದೇಶ ಎಂದು ಕರೆಯುತ್ತಿದ್ದರು.ಆದರೆ ಇಂದು ಭಾರತ ಜಗತ್ತಿನ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ದೇಶವಾಗಿದೆ.ಆಹಾರ ಉತ್ಪಾದನೆಯಲ್ಲಿ ಭಾರತ ೫ನೇ ಸ್ಥಾನದಲ್ಲಿದೆ.ಗ್ರೀನ್ ರೆವೆಲ್ಯೂಶನ್, ವೈಟ್ ರೆವೆಲ್ಯೂಶನ್ ಮೊದಲಾದ ಬೃಹತ್ ಕ್ರಾಂತಿಗಳಾದ ಭಾರತದಲ್ಲಿ ಪ್ರಸ್ತುತ ಜ್ಞಾನ ಅಭಿವೃದ್ಧಿ ಆಗುತ್ತಿದ್ದು ಸುಪರ್ ಪವರ್ ರಾಷ್ಟ್ರವಾಗಿ ಜಗತ್ತಿಗೆ ಮಾದರಿಯಾಗುತ್ತಿದೆ.
ಕೃಷಿ ಕ್ಷೇತ್ರದತ್ತ ಹೆಚ್ಚಿನ ಒಲವು ತೋರಬೇಕಾದುದು ಇಂದಿನ ಅಗತ್ಯ.ಕೃಷಿಯೇ ಇಲ್ಲದ ಜೀವನ ರೀತಿ ಊಹೆಗೂ ನಿಲುಕದು.ಕೃಷಿಯನ್ನು ನಿರ್ಲಕ್ಷಿಸಿದರೆ ಇತರ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದು.ಇಂದು ಹೊಟ್ಟೆಗೆ,ಬಟ್ಟೆಗೆ ಕೊರತೆಯಿಲ್ಲ ಆದರೆ ತಿಳುವಳಿಕೆಯ ಕೊರತೆ ಎದ್ದು ಕಾಣುತ್ತಿದೆ.ಕೃಷಿಕನ ಮಗನ ಕೃಷಿಕನಾಗಲು ಇಚ್ಚಿಸುವುದಿಲ್ಲ.
ಸಹಕಾರಿ ಸಂಘಗಳು ಪ್ರಜಾಪ್ರಭುತ್ವದ ತೊಟ್ಟಿಲು.ಭಾರತವು ೩೦ಕೋಟಿ ಸಹಕಾರಿ ಸದಸ್ಯರನ್ನು ಹೊಂದಿದೆ.ಯುವಕರು ಕೃಷಿ ಕ್ಷೇತ್ರದತ್ತ ಆಕರ್ಷಿತರಾಗಲು ಹೆಚ್ಚಿನ ಪ್ರೋತ್ಸಾಹ ನೀಡುವಂತಾಬೇಕು.ಈ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿದೆ. ಶೈಕ್ಷಣಿಕ, ಕೃಷಿ ಕ್ಷೇತ್ರ, ಸಹಕಾರಿ ಕ್ಷೇತ್ರಗಳು ಒಗ್ಗಟ್ಟಾಗಿ ಕೆಲಸ ಮಾಡಿದರೆ ನಾಡಿನ ಅಭಿವೃದ್ದಿ ಸಾಧ್ಯ.ಶೈಕ್ಷಣಿಕ ಸಂಸ್ಥೆಯಲ್ಲಿಕೃಷಿ ಮೇಳ ಆಯೋಜಿಸಿ ಕಾಲೇಜು ಮಾದರಿಯಾಗಿದೆ ಎಂದರು.
ಸಹಕಾರಿ ಇಲಾಖೆಯ ಎ.ಆರ್.ಜನರಲ್ ಜಯಚಂದ್ರನ್ ಮಾತನಾಡಿ, ಕೃಷಿಕರು ಭಾರತದ ಬೆನ್ನೆಲುಬು.ಕೃಷಿಕರು ಇಲ್ಲದಿದ್ದರೆ ಭಾರತವೇ ಇಲ್ಲ.ಯುವಕರು ಕೃಷಿ ಕ್ಷೇತ್ರದ ಶಿಕ್ಷಣ ಪಡೆಯುವ ಆಸಕ್ತಿ ಹೊಂದಿಲ್ಲ.ಭಾರತದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜು ಸ್ಥಾಪನೆಯಾಗುವಂತೆ ಕೃಷಿ ಕಾಲೇಜುಗಳು ಸ್ಥಾಪನೆಯಾಗುತ್ತಿಲ್ಲ .ಕೃಷಿ ಸಂಶೋಧನೆ ,ಆಧುನಿಕತೆ ಕೃಷಿ, ಸೌಲಭ್ಯಗಳ ಅರಿವು ಜನ ಸಾಮಾನ್ಯರಿಗೆ ತಲುಪುತ್ತಿಲ್ಲ.ಇವೆಲ್ಲವೂ ಕೃಷಿ ಕ್ಷೇತ್ರದ ಹಿನ್ನಡೆಗೆ ಕಾರಣವಾಗುತ್ತಿದೆ.
ಸಹಕಾರಿ ಕ್ಷೇತ್ರವು ಕೃಷಿ ಅಭಿವೃದ್ದಿ ಗೆ ಮುತುವರ್ಜಿವಹಿಸುತ್ತಿರುವುದು ಆಶಾದಾಯಕ.ಎಲ್ಲಾ ತಂತ್ರಜ್ಞಾನಗಳು ಹಳ್ಳಿಯ ಕೃಷಿಕನಿಗೆ ತಲುಪಬೇಕು, ಪ್ರತಿಯೊಬ್ಬರು ತಮ್ಮ ಆಹಾರಕ್ಕೆ ಬೇಕಾದ ಉತ್ಪನ್ನಗಳನ್ನು ತಾವೇ ಬೆಳೆದರೆ ವಿಷ ರಹಿತ, ಉತ್ತಮ ಆಹಾರ ನಮಗೆ ಸಿಗುವುದು.ನಾವು ಬೆಳೆದ ಬೆಳೆಯನ್ನು ಆಹಾರವಾಗಿ ಸೇವಿಸುವಾಗ ಅದರಲ್ಲಿ ಸಿಗುವ ಸಂತೃಪ್ತಿ ಬಣ್ಣಿಸಲಾಗದು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ,ಕೃಷಿ ನಮ್ಮ ಜೀವನ ಸಂಸ್ಕೃತಿಯನ್ನು ಉನ್ನತಿಗೇರಿಸುವುದು.ಆಧುನಿಕತೆ ಹಾಗೂ ರಂಗಿನ ಬದುಕಿಗೆ ಮಾರುಹೋದಂತೆ ನಿಧಾನವಾಗಿ ಕೃಷಿ ಪದ್ಧತಿ ದೂರವಾಗುತ್ತಿದೆ.ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ,ಸಾವಯವ ಕೃಷಿ ಪದ್ಧತಿ, ಸರಳ ಜೀವನ ನಮ್ಮದಾಗಬೇಕು.ಉಸಿರಾಡಲು ಒಳ್ಳೆಯ ಗಾಳಿ, ಕುಡಿಯಕು ಶುದ್ಧ ನೀರು, ಸಂತೋಷ, ಸಂತೃಪ್ತಿಯ ಜೀವನ ನಡೆಸಲು ಹಳ್ಳಿಯಲ್ಲಿ ಮಾತ್ರ ಸಾಧ್ಯ ಎಂದರು.
ನಾಲಂದ ಕಾಲೇಜು ಪ್ರಿನ್ಸಿಪಾಲ್ ಡಾ.ವಿಘ್ನೇಶ್ವರ ವರ್ಮುಡಿ ಸ್ವಾಗತಿಸಿದರು.ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಶಿಭೂಷಣ ಶಾಸ್ತ್ರಿ ವಂದಿಸಿದರು. ಉಪನ್ಯಾಸಕಿ ಅಮೃತ ಮತ್ತು ವಿನೀಷಾ ನಿರೂಪಿಸಿದರು.