×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಪೆರ್ಲದ ಮಣ್ಣಿನಲ್ಲಿ ಚಿಗುರೊಡೆದ ಬೃಹತ್ ಕೃಷಿ ಮೇಳ !

ಕೃಷಿಕರ ಶ್ರಮ ಸರಳಗೊಳಿಸುವ ಯಂತ್ರೋಪಕರಣ ಪ್ರಾತ್ಯಕ್ಷಿಕೆ, ಸಾವಯವ ಕೃಷಿ ಪದ್ಧತಿ ವಿಚಾರಗೋಷ್ಠಿ

ಆಧುನಿಕ ಕೃಷಿ ಪದ್ಧತಿಯಲ್ಲಿ ಯಂತ್ರೋಪಕರಣಗಳ ಬಳಕೆ ಮೂಲಕ ಕೃಷಿಕರ ಶ್ರಮ ಸರಳಗೊಳಿಸುವ, ಕಾರ್ಮಿಕರ ಅಭಾವ ನೀಗಿಸುವ ಮತ್ತು ಸಾವಯವ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೆರ್ಲದ ಇತಿಹಾಸದಲ್ಲೇ ಪ್ರಪ್ರಥಮ ಬಾರಿ ನಡೆದ ಬೃಹತ್ ಕೃಷಿ ಮೇಳ ಹಳ್ಳಿಯ ಕೃಷಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಪೆರ್ಲ ನಾಲಂದ ಮಹಾವಿದ್ಯಾಲಯ, ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು ಹಾಗೂ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆದ ಕೃಷಿ ಮೇಳದಲ್ಲಿ ಆಬಾಲ, ವೃದ್ಧರು ಉಪಯೋಗಿಸ ಬಹುದಾದ ಸರಳ, ಆಧುನಿಕ ಕೃಷಿ ಉಪಕರಣಗಳು, ಕೃಷಿ ಉತ್ಮನ್ನ, ಆಯುರ್ವೇದ ಸಸ್ಯ, ನರ್ಸರಿ ಗಿಡಗಳು, ಗವ್ಯ ವಸ್ತು ಪ್ರದರ್ಶನ ಮಾರಾಟ ಮಳಿಗೆ ಎಲ್ಲರನ್ನು ಆಕರ್ಷಿಸಿತು.

Mela (4)

Mela (1)

Mela (2)

Mela (3)

ಕೃಷಿ ಮೇಳಕ್ಕೆ ಬಂದವರು ಅಡಕೆ ಐಸ್ ಕ್ರೀಂ, ಮೌಲ್ಯಾಧಾರಿತ ಆಹಾರ ಉತ್ಪನ್ನಗಳು, ಕ್ಯಾಂಪ್ಕೋ ಸಂಸ್ಥೆಯ ವಿಭಿನ್ನ ಚಾಕೊಲೇಟ್, ಮುಂಬೈ ಬ್ರೆಡ್ ಸ್ಯಾಂಡ್ ವಿಚ್ ರುಚಿ ಸವಿದರು. ವಿಶಿಷ್ಟ ಗೃಹ ತಯಾರಿ ತಿಂಡಿ ತಿನಸು, ಹಲಸಿನ ಉತ್ಪನ್ನ, ಹಾಲಿನ ಉತ್ಮನ್ನಗಳ ಮಾರಾಟ ನಡೆಯಿತು.

ಅಮೃತ ಧಾರಾ ಗೋಶಾಲೆಯ ಬಿಸಿ ಬಿಸಿ ದೋಸೆ, ಗೋಬಿ ಮಂಚುರಿ, ಇತರ ತಿಂಡಿ ತಿನದು ಖರೀದಿಸಿ ಸೇವಿಸಿದರು.ನಂದಿಕೇಶ್ವರ ಗೋಶಾಲೆ, ಮುಂಚಿಕ್ಕಾನ ವತಿಯ ರುಚಿಯಾದ ಉಚಿತ ಮಜ್ಜಿಗೆ ದಿನ ಪೂರ್ತಿ ಬಾಯಾರಿಕೆ ತಣಿಸಿತು.

ಅಡಕೆ ಸುಲಿಯುವ ಯಂತ್ರ, ಮರ ಏರುವ ಯಂತ್ರ, ಮರ ಏರಿ ಔಷಧಿ ಸಿಂಪಡಿಸುವ ವಿನೂತನ ಶೈಲಿಯ ಯಂತ್ರ, ಹಗುರದ ಕೊಕ್ಕೆ ಮೂಲಕ ಔಷಧಿ ಸಿಂಪಡಿಸುವ ಸರಳ ಮಾದರಿ, ಕಾಳು ಮೆಣಸು ಬೇರ್ಪಡಿಸುವ ಯಂತ್ರಗಳು, ನಾದಂ ಜ್ಯಾಕ್ ಫ್ರುಟ್ ಕಟ್ಟರ್, ಉತ್ತಮ ಗುಣ ಮಟ್ಟ ವಿಭಿನ್ನ ಗ್ರಾತ್ರದ ಮೈಕ್ರೋ ರಬ್ಬರ್ ರೋಲರ್, ಚಿಗುರು ಗ್ರೂಪ್ಸ್ ವಿದ್ಯುತ್ ನಿರೋಧಕ ಫೈಬರ್ ಏಣಿ, ಕೊಕ್ಕೆ, ಇನೋಮೆಕ್ ಅವರ ಫಲ ಕಟಾವಿಗೆ ಹಗುರದ, ೩೦,೫೦, ೮೨ ಫೀಟ್ ಹೈಟೆಕ್ ಧೋಟಿ, ಔಷಧಿ ಸಿಂಪಡಣೆ ಪರಿಕರ, ವಿ.ಎಸ್.ಟಿ.ಅವರ ಕೃಷಿ ಹೊಂಡ ತೆಗೆಯುವ, ಕೃಷಿ ಉತ್ಪನ್ನ, ವಸ್ತುಗಳ ಸಾಗಾಟ ವಾಹನಗಳು ಪ್ರದರ್ಶನ ಮಳಿಗೆಯಲ್ಲಿ ಕೆಲವು ಕೃಷಿಕರು ಆಧುನಿಕ ಆವಿಷ್ಕಾರದ ಯಂತ್ರೋಪಕರಣಗಳನ್ನು ಕೆಲವರು ಖರೀದಿಸಿದರೆ, ಇನ್ನೂ ಕೆಲವರು ಖಾದಿರಿಸಿದರು.ಮತ್ತೆ ಕೆಲವರು ಮೊಬೈಲ್ ಸಂಖ್ಯೆ ಪಡೆದರು.

ವಾರಣಾಶಿ ಆಗ್ರೋ ಸಸ್ಟೈನೇಬಲ್ ಟೆಕ್ನಾಲಜಿಯ ಕೃಷಿ ಮಿತ್ರ ಟ್ರಾಲಿ, ಶುಭೋದಯ ಮೈಕೋರೈಜಾ ಜೈವಿಕ ಗೊಬ್ಬರ, ಕೋ-ಕೋಂಪೋಸ್ಟ್, ಆಗ್ರೋಮಿಕ್ಸ್, ರಬ್ಬರ್ ಮಿಕ್ಸ್ ಸಾವಯವ ಗೊಬ್ಬರ, ಸಸ್ಯ ಸಂರಕ್ಷಣೆ, ಬೆಳವಣಿಗೆ, ಪೋಷಕಾಂಶ ನಿರ್ವಹಣೆ ಜೈವಿಕ ವಸ್ತು ಕೊಳೆಯುವಿಕೆಗೆ ಟ್ರೈಕೋ ಪ್ಲಸ್, ಪೆಪ್ಪರ್ ಬಯೋಮಿಕ್ಸ್,ಇನೋ ಮೆಕ್ ಟೆಕ್ನೋಲಜಿಯ ಅಡಕೆ ಕೃಷಿ ಕೊಳೆ ರೋಗ ನಿಯಂತ್ರಣ, ಸ್ನೇಹ ಟ್ರೇಡರ್ಸ್ ಅವರ ಪ್ರೋ ಅಲೆಕ್ಸ್ ಪ್ಲಸ್ ಪ್ರಾಕೃತಿಕ ಶಿಲೀಂದ್ರ ನಾಶಕ ಪರಿಸರ ಸಂರಕ್ಷಿತ ಸುಸ್ಥಿರ ಕೃಷಿಗೆ ಪೂರಕವಾಗಿತ್ತು.

ಪಾಲಿ ಹೌಸ್, ನರ್ಸರಿ ಪಾಲಿ ಹೌಸ್ ಮಾದರಿ, ಲಿಫ್ಟಿಂಗ್ ಮೆಷೀನ್, ವಿಘ್ನೇಶ್ವರ ಎಂಟರ್ಪ್ರೈಸ್ ಅವರ ಯುನಿವರ್ಸಲ್ ಸೋಲಾರ್ ಸಿಸ್ಟಂ, ಮಂಗಗಳನ್ನು ಓಡಿಸಲು ಪಿವಿಸಿ ಪೈಪ್‌ನಿಂದ ತಯಾರಿಸಿದ ಸರಳ ಸಾಧನ, ಹಂದಿ, ವನ್ಯ ಜೀವಿಗಳ ಉಪಟಳ ತಡೆಯುವ ಲೇಸರ್ ಲೈಟ್, ಶಬ್ದ ಹೊರಡಿಸುವ ಬ್ಯಾಟರಿ ಚಾಲಿತ ಉಪಕರಣ, ಕುಸಿಯುತ್ತಿರುವ ಅಂತರ್ಜಲ ಮಟ್ಟಕ್ಕೆ ಶಾಶ್ವತ ಪರಿಹಾರವಾಗಿ ಸರಕಾರದ ಸಹಾಯಧನದ ಇನ್ಸ್ಪಯರ್ ರೀಚಾರ್ಜಿಂಗ್ ಸಿಸ್ಟಮ್, ಮಳೆ ನೀರು ಕೊಯ್ಲು ಫಿಲ್ಟರ್, ಮಹಿ ಆಟೋಮ್ಯಾಟಿಕ್ ವಾಟರ್ ಲೆವೆಲ್ ಕಂಟ್ರೋಲರ್, ಮಹಾಲಸ ಸ್ಕೇಲ್ ಸೆಂಟರ್ ಅವರ ನ್ಯೂ ಜನರೇಶನ್ ನಾನಾ ಬಗೆಯ ತೂಕ ಮಾಪನ, ಬಿಲ್ ಮೆಷೀನ್, ಥರ್ಮಲ್ ಮೀಟರ್, ಬಾರ್ ಕೋಡ್ ಸ್ಕ್ಯಾನರ್, ಪ್ರಿಂಟರ್, ಕ್ಯಾಶ್ ಡ್ರಾವರ್ ಉಪಕರಣ, ಎಲೆಕ್ಟ್ರೋ ಬಗ್ ಅವರ ಡೋರ್, ಶಟರ್, ಗೇಟ್ ಗಾರ್ಡ್, ಬರ್ಗ್ಲರ್ ಅಲಾರ್ಮ್, ಸ್ಪರ್ಶ ಎಲೆಕ್ಟ್ರಿಕಲ್ಸ್ ಅವರ ಪೋರ್ಟೇಬಲ್ ಜನರೇಟರ್ ಪ್ರಾತ್ಯಕ್ಷಿಕೆ ನೀಡಲಾಯಿತು.

ಪಶುಗಳ ಸಂಪೂರ್ಣ ದೇಹಾರೋಗ್ಯ, ಅತ್ಯುತ್ತಮ ಇಳುವರಿ, ರೋಗ ನಿರೋಧಕ, ಪ್ರತ್ಯುತ್ಪಾದನ ಶಕ್ತಿಗೆ ಪೂರಕವಾದ ಸ್ಥಳೀಯ ಖಂಡಿಗೆ ಫೀಡ್ಸ್, ಗಾದ್ರೇಜ್ ಕಂಪೆನಿಯ ಪಶು ಆಹಾರ, ವೇಂಪಾಶ್ ಜೇನು ಗೂಡು, ಶರವಾ ಅವರ ನಾನಾ ನಮೂನೆಗಳ ಪರಿಸರ ಸ್ನೇಹಿ, ಜೈವಿಕ ಆಕರ್ಷಕ ಅಡಕೆ ಹಾಳೆ ಪಾತ್ರೆ, ಪೇಪರ್ ಕಪ್ ಗಳು, ಖಾದಿ ಹಾಗೂ ಇತರ ಬಟ್ಟೆ ಬರೆ, ಪುಸ್ತಕಗಳು, ಪ್ರದರ್ಶನದಲ್ಲಿ ಒಳಗೊಂಡಿತ್ತು.
ಆರೋಗ್ಯ ನೊಂದಣಿ ಅಭಿಯಾನದಲ್ಲಿ ಅದೃಷ್ಟ ಚೀಟಿ ಮೂಲಕ ಸದ್ದಿಲ್ಲದೆ ಪ್ರದರ್ಶನಕ್ಕೆ ಆಗಮಿಸಿದವರ ಮೊಬೈಲ್ ಸಂಖ್ಯೆ ಪಡೆಯಲಾಯಿತು.ಅಲಂಕಾರಿಕ, ಹೂವಿನಗಿಡ, ಹಣ್ಣು ಹಂಪಲು ಗಿಡ, ಬೀಜ ಸಿರಿ ಅವರ ತರಕಾರಿ, ಹಣ್ಣು ಹಂಪಲು ಬೀಜ, ಗೃಹೋಪಯೋಗಿ ವಸ್ತುಗಳನ್ನು ಕುಟುಂಬ ಸಮೇತ ಬಂದ ಕೃಷಿಕರು ಗುಂಪಾಗಿ ವೀಕ್ಷಿಸಿದರು.

ಕೃಷಿಮೇಳ ಉದ್ಘಾಟನಾ ಸಮಾರಂಭದ ಬಳಿಕ ಸಮಾರೋಪದ ತನಕ ನಡೆದ ’ಅಡಕೆ ಕೃಷಿಯಲ್ಲಿ ಆಧುನಿಕತೆ’, ’ಕೊಕ್ಕೋ ಕೃಷಿ ಸವಾಲುಗಳು’, ’ಕೈತೋಟ ಕೃಷಿಯಲ್ಲಿ ಮಹಿಳೆಯರ ಪಾತ್ರ’, ’ಸಾವಯವ ಕೃಷಿ ಪದ್ಧತಿ’ ಮಾಹಿತಿ, ವಿಚಾರಗೋಷ್ಠಿಗಳು ಕೃಷಿಕರಲ್ಲಿ ಹೊಸ ಅರಿವು ಮೂಡಿಸಿತು.ಕೃಷಿ ಮೇಳವನ್ನು ಉತ್ತಮ ರೀತಿಯಲ್ಲಿ ನಡೆಸಲು ಸಂಘಟಕರು, ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕರು, ಕಾಲೇಜು ಯೂನಿಯನ್, ಎನ್ನೆಸ್ಸೆಸ್ ಘಟಕ ವಹಿಸಿದ ಶ್ರಮ ಸಾರ್ಥಕವಾಯಿತು.

ಆಯುರ್ವೇದ ಗಿಡ ಮೂಲಿಕೆಗಳ ಪ್ರದರ್ಶನ, ಔಷಧಿ ತಯಾರಿ ಪ್ರಾತ್ಯಕ್ಷಿಕೆ:

ಉಕ್ಕಿನಡ್ಕಾಸ್ ಆಯುರ್ವೇದ ವತಿಯಿಂದ ಬಿಳಿ ಚಿತ್ರಮೂಲ, ಇರುವೇರಿ, ಕಪಿತ್ಥ, ಪಂಚಪತ್ರೆ, ಬಜೆ, ಪುರುಷರತ್ನ, ನೆರುಗಲ, ಒಂದೆಲಗ ಭೇದ, ಮೂವಿಲೆ, ಓರಿಲೆ, ಹಿಪ್ಲಿ, ಆಡುಸೋಗೆ ವಿಧ, ಕೆಂಪಿ ಬೇರು, ರಾಸ್ನಾ, ಕರಿ ನೆಕ್ಕಿಗಿಡ ಮತ್ತಿತರ ಬಲು ಅಪರೂಪದ ಔಷಧೀಯ ಸಸ್ಯಗಳು, ದೇವದಾರು ತಿರುಳು ಅಶ್ವಗಂಧ ಬೇರು, ಶಿಲಾಜಿತು ಕಲ್ಲು, ಜಟಮಾಂಸಿ, ಗುಗ್ಗುಳು ಪ್ರದರ್ಶನ, ಫಾರ್ಮಸಿಯಲ್ಲಿ ತಯಾರಿಸಿದ ಆಯುರ್ವೇದ ಉತ್ಪನ್ನಗಳ ಪ್ರದರ್ಶನ, ತಯಾರಿ ರೀತಿಯ ಪ್ರಾತ್ಯಕ್ಷಿಕೆ ನೀಡಲಾಯಿತು.ಮೂಲಿಕಾವನ ಕೈಲಾರ್ ಅವರ ಇನ್ಸುಲಿನ್ ಎ, ಕಿಡ್ನಿ ಸ್ಟೋನ್ ಹರ್ಬಲ್ ಪೌಡರ್, ನೋವಿನ ಎಣ್ಣೆ, ಬಿಲ್ವಾದಿ ತೈಲ, ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಬದಿಯಡ್ಕ ಜೆನರಿಕ್ ಮೆಡಿಸಿನ್ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.

ಸನ್ಮಾನ, ಬಹುಮಾನ ವಿತರಣೆ:

ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು ವತಿಯಿಂದಅಡಿಕೆ ಸುಲಿಯುವ ಉತ್ತಮ ಯಂತ್ರ ಆವಿಷ್ಕಾರ, ಸ್ಥಳೀಯ ಉತ್ತಮ ಕೃಷಿ ಉತ್ಪನ್ನಗಳಿಗೆ ಬಹುಮಾನ ನೀಡಲಾಯಿತು.ಸ್ಥಳೀಯ ಕೃಷಿ ಸಾಧಕರನ್ನು ಸನ್ಮಾನಿಸಲಾಯಿತು.

ಅಡಕೆ ಸುಲಿಯುವ ಯಂತ್ರ ಆವಿಷ್ಕಾರ:

ಅಡಕೆ ಸುಲಿಯುವ ಯಂತ್ರ ಆವಿಷ್ಕಾರಕ್ಕೆ ಪುತ್ತೂರು ಪರ್ಲಡ್ಕದ ದುರ್ಗಾ ಇಂಜಿನಿಯರಿಂಗ್ ವರ್ಕ್ಸ್ ಸಂಸ್ಥೆಯ ನಾರಾಯಣ ನೆಲ್ಲಿತ್ತಾಯ ಅವರಿಗೆ ೧ಲಕ್ಷ ಪ್ರಥಮ ಬಹುಮಾನ, ಸುಳ್ಯದ ಅಪರ್ಣಾ ಇಂಜಿನಿಯರಿಂಗ್ ವರ್ಕ್ಸ್ ಸಂಸ್ಥೆಯ ರಾಮಚಂದ್ರ ಭಟ್ ಅವರಿಗೆ ೫೦ಸಾವಿರ ದ್ವಿತೀಯ ಬಹುಮಾನ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಕ್ಷಯ್ ಹಾಗೂ ಬಳಗಕ್ಕೆ ೧೦ಸಾವಿರದ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಕ್ಯಾಂಪ್ಕೊ ಮಂಗಳೂರು ಉಪಾಧ್ಯಕ್ಷ ಶಂ.ನಾ.ಖಂಡಿಗೆ ಬಹುಮಾನ ವಿತರಿಸಿದರು.

ಉತ್ತಮ ಸ್ಥಳೀಯ ಕೃಷಿ ಉತ್ಪನ್ನ:

ಅಡಕೆ, ತೆಂಗು, ಕೊಕ್ಕೋ, ಬಾಳೆ ಸ್ಥಳೀಯ ಉತ್ತಮ ಕೃಷಿ ಉತ್ಪನ್ನ ಪ್ರದರ್ಶನದಲ್ಲಿ ಉತ್ತಮ ಅಡಕೆ ಫಸಲಿಗೆ ಕೆ.ಎಸ್.ಹೆಗಡೆ ಸರ್ಪಂಗಳ ಪ್ರಥಮ, ಗಣಪತಿ ಭಟ್ ಸಜಂಗದ್ದೆ ದ್ವಿತೀಯ, ಬಾಳೆಗೊನೆ ಪತ್ತಡ್ಕ ಗಣಪತಿ ಭಟ್ ಪ್ರಥಮ, ಗಣಪತಿ ಭಟ್ ಸಜಂಗದ್ದೆ ಹಾಗೂ ವಿಶ್ವೇಶ್ವರ ಭಟ್ ಕಾರ್ಯಾಡು ದ್ವಿತೀಯ, ಕೊಕ್ಕೋ ಡಾ.ವಿಘ್ನೇಶ್ವರ ವರ್ಮುಡಿ ಪ್ರಥಮ, ಜಗದೀಶ್ ಬಿ.ಜಿ.ದ್ವಿತೀಯ ಬಹುಮಾನ ಪಡೆದರು.

ಉತ್ತಮ ಕೃಷಿ ಸಾಧಕರಿಗೆ ಬಹುಮಾನ

ಸ್ಥಳೀಯ ಕೃಷಿ ಸಾಧಕರಾದ ಶಂಕರನಾರಾಯಣ ಭಟ್ ಪೆರುಮುಂಡ, ಯಶೋಧ ಜಿ.ಭಟ್ ಖಂಡಿಗೆ ಕಾರ್ಯಾಡು, ಪದ್ಮನಾಭ ಪೈ ಅಮೆಕ್ಕಳ, ವೈ.ಕೃಷ್ಣ ಬೈರ ಏತಡ್ಕ, ಪುರುಷೋತ್ತಮ ನಾಯಕ್ ಗೋಳಿತ್ತಾಡಿ ಶೇಣಿ, ಉದನೇಶ್ವರ ಇಕ್ಕೇರಿ, ಶೇಷಪ್ಪ ಮೂಲ್ಯ, ತಿಮ್ಮಪ್ಪ ಭಂಡಾರಿ, ಭಾಸ್ಕರ ಮಣಿಯಾಣಿ ಅವರನ್ನು ಶಾಲು ಹೊದೆಸಿ, ಹಣ್ಣುಹಂಪಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.