ಪೆರ್ಲ: ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಬೃಹತ್ ಕೃಷಿ ಮೇಳದ ಅಂಗವಾಗಿ ’ಸುಭಿಕ್ಷಾ’ ಸಾವಯವ ಕೃಷಿಕರ ಬಹುರಾಜ್ಯ ಸಹಕಾರಿ ಸಂಘ(ನಿ) ತೀರ್ಥಹಳ್ಳಿ ಇದರ ನಿರ್ದೇಶಕಿ ಸವಿತಾ ಬಾಳಿಕೆ ಅಧ್ಯಕ್ಷತೆಯಲ್ಲಿ ಸಾವಯವ ಕೃಷಿ ಪದ್ಧತಿ ಎಂಬ ವಿಷಯದ ಕುರಿತಾದ ವಿಚಾರಗೋಷ್ಠಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ಎ.ಪಿ. ಸದಾಶಿವ ಮರೀಕೆ ಪುತ್ತೂರು ಮಾತನಾಡಿ, ಸಾವಯವ ಕೃಷಿಯು ಇಂದಿನ ಅನಿವಾರ್ಯತೆಯಾಗಿದ್ದು, ಪ್ರತಿಯೊಬ್ಬನ ಆರೋಗ್ಯ ಹಾಗೂ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಪ್ರತಿಯೊಬ್ಬ ರೈತರು ಸಾವಯವ ಕಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆಯಾದಲ್ಲಿ ಮಣ್ಣಿನ ಫಲವತ್ತತೆ ವೃದ್ಧಿಸುತ್ತದೆ ತನ್ಮೂಲಕ ಉತ್ತಮ ಫಸಲು ರೈತನದ್ದಾಗುತ್ತದೆ ಎಂದರು.
ಕೃಷಿಕನಾದವನು ಸ್ವಾವಲಂಬಿಯಾಗಿರಬೇಕು. ತನ್ನೆಲ್ಲಾ ಅಗತ್ಯತೆಗಳನ್ನು ಸ್ವತಃ ತಾನೇ ಪೂರೈಸಿಕೊಳ್ಳಲು ಸಾಧ್ಯವಿರುವವನಾಗಬೇಕು. ಈ ರೀತಿ ಸ್ವಾವಲಂಬಿ ಜೀವನ ನಡೆಸಲು ಸಾವಯವ ಕೃಷಿಯ ಅಳವಡಿಕೆಯಿಂದ ಮಾತ್ರ ಸಾಧ್ಯ ಎಂದರು.
ಸಾವಯವ ಕೃಷಿಯ ಅಳಿವು ಎಂದರೆ ಆರೋಗ್ಯವಂತ ಮಾನವನ ಅಳಿವೇ ಆಗಿದೆ. ಅತಿಯಾದ ರಾಸಾಯನಿಕಗಳ ಬಳಕೆಯಿಂದ ತಕ್ಷಣಕ್ಕೆ ಇಳುವರಿಯಲ್ಲಿ ಹೆಚ್ಚಿದರೂ ಪರೋಕ್ಷವಾಗಿ ಆರೋಗ್ಯವಂತ ಜೀವನದ ಒಂದೊಂದೇ ಕೊಂಡಿಗಳನ್ನು ಕಳೆದುಕೊಳ್ಳುವುದರಲ್ಲಿ ಸಂದೇಹವಿಲ್ಲ ಎಂದರು.
ಪ್ರಗತಿಪರ ಕೃಷಿಕ ದಾಮೋದರ ಉಜಾರ್ಲೆ ಮಾತನಾಡಿ, ಮುಂದಿನ ಜನಾಂಗಕ್ಕೆ ಆರೋಗ್ಯವಂತ ಜೀವನ ಸಾಗಿಸಬೇಕಾದರೆ ಸಾವಯವ ಕೃಷಿಯ ಅಳವಡಿಕೆಯೊಂದೇ ಮಾರ್ಗ ಎಂದರು.
ಅಂಕಿತಾ ಸ್ವಾಗತಿಸಿದರು. ನಿಶಾ ವಂದಿಸಿದರು. ಉಪನ್ಯಾಸಕಿ ಸುಮಾ ವಿ. ಎಸ್. ನಿರೂಪಿಸಿದರು.