ಪೆರ್ಲ: ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಬೃಹತ್ ಕೃಷಿ ಮೇಳದ ಅಂಗವಾಗಿ ಲೇಖಕಿ ಕೃಷ್ಣವೇಣಿ ಕಿದೂರು ಅಧ್ಯಕ್ಷತೆಯಲ್ಲಿ ಕೈತೋಟ ಕೃಷಿಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತಾಗಿ ವಿಚಾರಗೋಷ್ಠಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ಖ್ಯಾತ ಲೇಖಕಿ ಸವಿತಾ ಭಟ್ ಅಡ್ವಾಯಿ ಮಾತನಾಡಿ, ಭಾರತ ಕೃಷಿ ಫ್ರಧಾನ ರಾಷ್ಟ್ರವಾಗಿದ್ದು ಕೃಷಿಯ ಅಭಿವೃದ್ಧಿಗೆ ಮಹಿಳೆಯರ ಪಾತ್ರವೂ ಗಣನೀಯವಾಗಿದೆ. ಮಹಿಳೆಯರು ಕೃಷಿಯಲ್ಲಿ ತನ್ನನ್ನು ತಾನು ತೊಡಗಿಕೊಂಡು ಏಕಬೆಳೆ, ಅಂತರಬೆಳೆ, ಮಿಶ್ರಬೆಳೆ, ಏಕದಳ, ದ್ವಿದಳ ಬೆಳೆಗಳನ್ನು ಬೆಳೆದರೆ ಪ್ರಕೃತಿ ಸಮತೋಲನ ಕಾಪಾಡಿಕೊಳ್ಳಲು ಹಾಗೂ ಸ್ವಾವಲಂಬೀ ಕೃಷಿಕರಾಗಿ ಸಂತೃಪ್ತ ಜೀವನ ನಡೆಸಲು ಸಹಕಾರಿ ಎಂದರು.
ಮಹಿಳೆಯರು ಸಾಮಾನ್ಯವಾಗಿ ಸಸ್ಯಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿರುವುದರಿಂದ ತರಕಾರಿ ಬೆಳೆಗಳನ್ನು ಬೆಳೆಯುವಲ್ಲಿ ಮುತುವರ್ಜಿ ವಹಿಸಿದರೆ ಉತ್ತಮ. ತರಕಾರಿ ಬೆಳೆದರೆ ತಮ್ಮ ಆಹಾರವನ್ನು ತಾವೇ ಬೆಳೆದಂತೆಯೂ, ಇನ್ನೊಂದೆಡೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಂತೆಯೂ ಆಗುತ್ತದೆ ಎಂದರು.
ಪ್ರಗತಿಪರ ಕೃಷಿಕರಾದ ಪುಷ್ಪಾ ಕೊಮ್ಮಂಗಳ ಮಾತನಾಡಿ, ತನ್ನ ಜೀವನವನ್ನು ಸಂಪೂರ್ಣವಾಗಿ ಕೃಷಿಗಾಗಿ ಮೀಸಲಿಟ್ಟಿದ್ದೇನೆ. ಸಂಸ್ಕೃತಿಯ ಪ್ರತೀಕವಾದ ಗೋಮಾತೆಯನ್ನು ಸಾಕಿ ಇಂದು ಅದೇ ಲಾಭವೆಂದು ಹೈನುಗಾರಿಕೆಯನ್ನು ಪ್ರವೃತ್ತಿಯಾಗಿಸಿಕೊಂಡು ತರಕಾರಿ ಕೃಷಿಯನ್ನು ವೃತ್ತಿಯಾಗಿ ರೂಢಿಸಿ ಸಂಪನ್ನವಾದ ಯಶಸ್ವೀ ಜೀವನವನ್ನು ನಡೆಸುತ್ತಿದ್ದೇನೆ ಎಂದರು.
ಕೃಷ್ಣವೇಣಿ ಕಿದೂರು ಮಾತನಾಡಿ, ಮನೆ ಊಟ, ಮನೆಯಲ್ಲಿ ಬೆಳೆದ ತರಕಾರಿ ಆರೋಗ್ಯಕ್ಕೆ ಪೂರಕ. ಯಾರೋ ಬೆಳೆದ ತರಕಾರಿ ನಾವು ಸೇವಿಸಿದರೆ ಅದು ವಿಷಕಾರಿಯೋ ಅಥವಾ ಇನ್ಯಾವುದೋ ರಾಸಾಯನಿಕ ಕೀಟನಾಶಕ, ಗೊಬ್ಬರಗಳನ್ನು ಬಳಸಿಕೊಂಡಿದ್ದಾಗಿರುತ್ತೆ. ಮನೆಯಲ್ಲಿಯೇ ಕೈತೋಟ ಮಾಡಿದರೆ ವಿಷ ಸೇವಿಸಿ ಬದುಕುವ ಅನಿವಾರ್ಯತೆ ಬರುವುದಿಲ್ಲ ಎಂದರು.
ಉಪನ್ಯಾಸಕಿ ಗೀತಾ ವಿ ಭಟ್ ನಿರೂಪಿಸಿದರು. ರಶ್ಮಿ ಕೆ ಸ್ವಾಗತಿಸಿದರು. ಸುದೀಶ್ ಎಂ. ವಂದಿಸಿದರು.