ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಆರ್ಟ್ಸ್ ಡೇ ಉದ್ಘಾಟಿಸಿ ಡಾ. ವಿಘ್ನೇಶ್ವರ ವರ್ಮುಡಿ
ವಿದ್ಯಾರ್ಥಿಗಳಲ್ಲಿ ಅಗಾಧ ಪ್ರತಿಭೆಗಳು ಅಡಕವಾಗಿರುತ್ತದೆ. ಆದರೆ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹದ ಕೊರತೆಯಿಂದಲೋ ತಮ್ಮಲ್ಲಿ ಅಡಕವಾಗಿರುವ ಪ್ರತಿಭೆಗಳ ಅರಿವು ಅವರಿಗೆ ಇರುವುದಿಲ್ಲ. ವಿದ್ಯಾರ್ಥಿಗಳಲ್ಲಿನ ಅಂತಹ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಆರ್ಟ್ಸ್ ಡೇ ಸಹಕಾರಿ ಎಂದು ನಾಲಂದ ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಹೇಳಿದರು.
ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಆರ್ಟ್ಸ್ ಡೇ ಉದ್ಘಾಟಿಸಿ ಅವರು ಮಾತನಾಡಿದರು.
ಎಳೆ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಗುರುತಿಸಲು, ಪ್ರೋತ್ಸಾಹಿಸಲು ಪೋಷಕರು ಶ್ರಮಿಸಬೇಕು. ಅದರೊಂದಿಗೆ ಸಂಘ ಸಂಸ್ಥೆಗಳು ಮಕ್ಕಳಲ್ಲಿನ ಪ್ರತಿಭೆಗಳ ಪ್ರದರ್ಶನ ವೇದಿಕೆಗಳನ್ನು ಸೃಷ್ಟಿಸಿಕೊಡಬೇಕು ಎಂದರು.
ಸ್ಟಾಫ್ ಸೆಕ್ರೆಟರಿ, ಕನ್ನಡ ವಿಭಾಗದ ಉಪನ್ಯಾಸಕ ಕೇಶವ ಶರ್ಮಾ ಮಾತನಾಡಿ, ಪ್ರತಿಭೆಗಳ ಪ್ರದರ್ಶನಕ್ಕೆ ಕಾಲವೂ ಅವಕಾಶವೂ ಒದಗಿ ಬರಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶ ಯಾರನ್ನು ಕಾದು ಕೂರುವುದಿಲ್ಲ. ಆದುದರಿಂದ ಲಭಿಸಿದ ಅವಕಾಶಗಳನ್ನು ಕೈಬಿಡದೇ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಫೈನ್ ಆರ್ಟ್ಸ್ ಸಲಹೆಗಾರ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ್ ಖಂಡಿಗೆ ಉಪಸ್ಥಿತರಿದ್ದರು. ಕಾಲೇಜು ಯೂನಿಯನ್ ಅಧ್ಯಕ್ಷೆ ರಶ್ಮಿ ಸ್ವಾಗತಿಸಿದರು. ಫೈನ್ ಆರ್ಟ್ಸ್ ಕಾರ್ಯದರ್ಶಿ ಪ್ರೀತಂ ವಂದಿಸಿದರು.