×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ವಿದ್ಯಾರ್ಥಿಗಳು ರಾಷ್ಟ್ರವನ್ನು ರೂಪಿಸುವ ಇಂದಿನ ಶಕ್ತಿಗಳು

ಪೆರ್ಲ ನಾಲಂದ ಕಾಲೇಜು ಯೂನಿಯನ್ ಹಾಗೂ ಫೈನ್ ಆರ್ಟ್ಸ್ ಉದ್ಘಾಟನಾ ಸಮಾರಂಭ “ಉದ್ಭವ್ ೨ಕೆ೨೦” ಉದ್ಘಾಟಿಸಿ ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ

ವಿದ್ಯಾರ್ಥಿಗಳು ರಾಷ್ಟ್ರವನ್ನು ರೂಪಿಸುವ ಮಹತ್ವದ ಜವಾಬ್ದಾರಿ ಹೊತ್ತ ಇಂದಿನ ಶಕ್ತಿಗಳು. ಎಲ್ಲಾ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ಗೈಯುತ್ತಿರುವ ಭಾರತವನ್ನು ಜಗತ್ತೇ ಎದುರು ನೋಡುತ್ತಿದ್ದು, ರಾಷ್ಟ್ರವನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸಲು ವಿದ್ಯಾರ್ಥಿಗಳು ಇಂದೇ ಕಾರ್ಯಪ್ರವೃತ್ತರಾಗಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಹೇಳಿದರು.

ಪೆರ್ಲ ನಾಲಂದ ಕಾಲೇಜು ಯೂನಿಯನ್ ಹಾಗೂ ಫೈನ್ ಆರ್ಟ್ಸ್ ಉದ್ಘಾಟನಾ ಸಮಾರಂಭ ’ಉದ್ಭವ್ 2ಕೆ20’ ಉದ್ಘಾಟಿಸಿ ಅವರು ಮಾತನಾಡಿದರು.

Union Inauguration

ಬಡವರ, ಹಾವಾಡಿಗರ, ಭಿಕ್ಷುಕರ ದೇಶ ಎಂದು ಹೀಯಾಳಿಸುತ್ತಿದ್ದ ಭಾರತ, ಉಳಿದ ದೇಶಗಳಿಗಿಂತ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಾ, ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ರಾಷ್ಟ್ರವನ್ನು ಈ ನೆಲೆಗೆ ತಲುಪಿಸಲು ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ತ್ಯಾಗ ಮಾಡಿದ ಅಸಂಖ್ಯಾತ ದೇಶ ಭಕ್ತರ ಸೇವೆ ನಿಜಕ್ಕೂ ಸ್ಮರಣೀಯ.

ದೇಶವನ್ನು ತಾಯಿಗಿಂತಲೂ ಮಿಗಿಲಾಗಿ ಪ್ರೀತಿಸುವ ಪುಣ್ಯ ಭೂಮಿಯಲ್ಲಿ ಜನಿಸಿ, ವಿದ್ಯಾಭ್ಯಾಸ ಪಡೆಯಲು ಪಡೆಯಲು ಅವಕಾಶ ದೊರೆತಂತಹ ವಿದ್ಯಾರ್ಥಿಗಳೆಲ್ಲರೂ ರಾಷ್ಟ್ರ ಭಕ್ತ ವಿದ್ಯಾರ್ಥಿಗಳಾಗಿ, ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಲು, ರಾಷ್ಟ್ರೀಯತೆಯ ವಿಚಾರವನ್ನು ಪಸರಿಸಲು ಮುಂದಾಗಿ ಎಂದು ಕರೆ ನೀಡಿದರು.

ಹಿಂದೆ ವಿದ್ಯಾರ್ಥಿಗಳು ಹೊಟ್ಟೆ ಬಟ್ಟೆಗಾಗಿ ಅಲೆದಾಡುತ್ತಿದ್ದರು ಆದರೆ ಅಂತಹ ಪರಿಸ್ಥಿತಿ ಇಂದಿನ ವಿದ್ಯಾರ್ಥಿಗಳಿಗೆ ಇಲ್ಲ. ಕ್ರಾಂತಿಕಾರಿ ಬದಲಾವಣೆಯತ್ತ ರಾಷ್ಟ್ರ ಸಾಗುತ್ತಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯಕವಾದಂತಹ ಎಲ್ಲಾ ಸವಲತ್ತುಗಳು, ವ್ಯವಸ್ಥೆಗಳು ಲಭಿಸುತ್ತಿದ್ದು, ಅವುಗಳನ್ನೆಲ್ಲವನ್ನೂ ಉತ್ತಮ ರೀತಿಯಲ್ಲಿ ಬಳಸಿಕೊಂಡು ತಮ್ಮ ಅಭಿವೃದ್ಧಿಯೊಂದಿಗೆ, ಸಮಾಜದ ರಾಷ್ಟ್ರದ ಅಭಿವೃದ್ಧಿಗೂ ಶ್ರಮಿಸಿ ಎಂದರು.

ವಿದ್ಯಾರ್ಥಿಗಳು ಪಠ್ಯಕ್ಕೆ ಮಾತ್ರ ಸೀಮಿತವಾಗದೇ, ಪಠ್ಯದೊಂದಿಗೆ ಇನ್ನಿತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ ಸಮಾಜದ ಅಗ್ರಗಣ್ಯ ನಾಯಕರಾಗಿ ಗುರಿತಿಸಲ್ಪಡುತ್ತಾರೆ ಎಂಬುವುದರಲ್ಲಿ ಸಂಶಯವಿಲ್ಲ ಎಂದರು.

ಕಾಸರಗೋಡಿನ ಖ್ಯಾತ ಜಾದೂಗಾರ, ಮೋಟಿವೇಶಲ್ ಸ್ಪೀಕರ್ ಬಾಲಚಂದ್ರ ಕೊಟ್ಟೋಡಿ ಫೈನ್ ಆರ್ಟ್ಸ್ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲಾ ಒಂದು ರೀತಿಯ ಪ್ರತಿಭೆ ಅಡಕವಾಗಿದೆ. ವಿದ್ಯಾರ್ಥಿಗಳ ಒಕ್ಕೂಟ, ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸುವ ಕಾರ್ಯದಲ್ಲಿ ತೊಡಗಬೇಕು. ವಿದ್ಯಾರ್ಥಿಗಳಲ್ಲಿನ ಕಲೆ ಸಾಹಿತ್ಯದ ಬಗೆಗಿನ ಆಸಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯ ಯುನಿಯನ್ ಮುಖಾಂತರ ನಡೆಯಬೇಕಿದೆ ಎಂದರು.

ಸಂಘರ್ಷಗಳನ್ನು ಇಲ್ಲದಾಗಿಸುವ ಶಕ್ತಿ ಕಲೆಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಪ್ರಕೃತಿಯ ತಾಳವನ್ನು ಅರಿತು ಮುನ್ನಡೆಯಬೇಕು. ಇಲ್ಲವಾದಲ್ಲಿ ಪ್ರಾಣಿಗಳಿಂದ ವ್ಯತ್ಯಸ್ತನಾದ ಮಾನವ ಮೃಗವಾಗಿ ಮಾರ್ಪಾಡಾಗುತ್ತಾನೆ. ಆದುದರಿಂದ ಮಾನವನಾದವನು ಪ್ರಕೃತಿಯ ತಾಳವನ್ನು ಅರಿತು, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ನಾಲಂದ ಕಾಲೇಜು ಯಕ್ಷಗಾನ ತಂಡದ ತರಬೇತುದಾರ ಬಾಲಕೃಷ್ಣ ಉಡ್ಡಂಗಳ ಮಾತನಾಡಿ, ಯಕ್ಷಗಾನ ಕೇವಲ ಮನೋರಂಜನೆಯ ಮಾಧ್ಯಮ ಮಾತ್ರವಲ್ಲ. ಭಾಷಾ ಜ್ಞಾನ ಹೆಚ್ಚಿಸುವ, ಇತಿಹಾಸದ ಕುರಿತು ತಿಳಿವಳಿಕೆ ಮೂಡಿಸುವ ಒಂದು ಮಾಧ್ಯಮ. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕಾರ್ಯ ಯುವಜನಾಂಗದಿಂದ ನಡೆಯಬೇಕಿದೆ ಎಂದರು.

ಮುಖ್ಯ ಅತಿಥಿ ನ್ಯಾಯವಾದಿ ಕೇಶವನ್ ಕಣ್ಣೂರು ಮಾತನಾಡಿ, ಶಾಲಾ ಕಾಲೇಜುಗಳು ವಿದ್ಯೆಯೊಂದಿಗೆ ಸಂಸ್ಕೃತಿಯನ್ನು ನೀಡದುದರ ಫಲವಾಗಿ ವಿದ್ಯಾಲಯಗಳು ಸಂಘರ್ಷದ ಕೇಂದ್ರ ಬಿಂದುಗಳಾಗಿ ಮಾರ್ಪಾಡಾಗುತ್ತಿದೆ. ವಿದ್ಯಾಲಯಗಳು ಜ್ಞಾನದೊಂದಿಗೆ ಸಂಸ್ಕೃತಿಯನ್ನು ಧಾರೆ ಎರೆಯುವ ಮಾಧ್ಯಮಗಳಾದಲ್ಲಿ ಸಂಘರ್ಷ ಮುಕ್ತ ವಿದ್ಯಾಲಯಗಳು ನಿರ್ಮಾಣವಾಗಲಿದೆ. ವಿದ್ಯೆಯೊಂದಿಗೆ ಸಂಸ್ಕೃತಿಯನ್ನು ಧಾರೆ ಎರೆಯುತ್ತಿರುವ ನಾಲಂದ ದಂತಹ ಕಾಲೇಜುಗಳು ಇತರ ಶಾಲಾ ಕಾಲೇಜುಗಳಿಗೆ ಮಾದರಿ ಎಂದರು.

ವಿದ್ಯಾರ್ಥಿ ನಿರಂತರವಾಗಿ ಧನಾತ್ಮಕ ಚಿಂತನೆಗಳನ್ನು ಹುಡುಕುವ ಗುಣ ಉಳ್ಳವನಾಗಿರಬೇಕು. ಕಂಡುಕೊಂಡ ಚಿಂತನೆಗಳನ್ನು ಅರ್ಥ ಮಾಡಿಕೊಂಡು, ಅವುಗಳನ್ನು ಇತರರಿಗೂ ಮನದಟ್ಟು ಮಾಡಿ ತಮ್ಮ ಬೆಳವಣಿಗೆಯೊಂದಿಗೆ ಇತರರ ಬೆಳವಣಿಗೆಗೂ ಶ್ರಮಿಸಬೇಕು ಎಂದರು.

ವಿದ್ಯಾರ್ಥಿ ಸಲಹೆಗಾರ, ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಸುರೇಶ್ ಕೆ. ಎಂ. ಮಾತನಾಡಿ, ಶಾಲಾ ಕಾಲೇಜುಗಳಲ್ಲಿನ ಶಾಂತಿಯುತ ವಾತಾವರಣವನ್ನು ಉಳಿಸಬೇಕೋ ಅಥವಾ ಕೆಡಿಸಬೇಕೋ ಎಂಬುದು ವಿದ್ಯಾರ್ಥಿಗಳ ಕೈಯಲ್ಲಿದೆ ಎಂದರು.

ಕಣ್ಣೂರು ವಿಶ್ವವಿದ್ಯಾಲಯದಲ್ಲೇ ಅತ್ಯಂತ ಶಾಂತಿಯುತವಾಗಿ ಕಾಲೇಜು ಯೂನಿಯನ್ ಚುನಾವಣೆಯನ್ನು ನಡೆಸಲು ಸಹಕರಿಸದ ಕಾಲೇಜು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ, ಉದ್ಭವವಾದದ್ದು ಶಾಶ್ವತವಾಗಿರುತ್ತದೆ. ಅದರಂತೆಯೇ ಉದ್ಭವವಾದ ಯೂನಿಯನ್ ಜ್ಞಾನ, ಶೀಲ, ಏಕತೆಯನ್ನು ಮೈಗೂಡಿಸಿಕೊಂಡು, ಸಂಸ್ಕಾರ ಸಂಸ್ಕೃತಿಗಳನ್ನು ಬಿಂಬಿಸುತ್ತಾ, ವಿದ್ಯಾರ್ಥಿಗಳ ಸಾರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಾ, ವಿದ್ಯಾರ್ಥಿಗಳ ಕಷ್ಟ ದುಃಖದಲ್ಲಿ ಭಾಗಿಯಾಗುತ್ತಾ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಮುನ್ನಡೆದಲ್ಲಿ ವಿದ್ಯಾರ್ಥಿಗಳ ಮನದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆಯುತ್ತದೆ ಎಂದರು.

ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ್ ಚೆಟ್ಟಿಯಾರ್, ಯೂನಿಯನ್ ಅಧ್ಯಕ್ಷೆ ರಶ್ಮಿ, ಉಪಾಧ್ಯಕ್ಷೆ ಪೂಜ, ಸಹ ಕಾರ್ಯದರ್ಶಿ ಮಹಿಮ, ಯೂನಿವರ್ಸಿಟಿ ಯೂನಿಯನ್ ಕೌನ್ಸಿಲರ್ ಕವಿತಾ, ಸ್ಟೂಡೆಂಟ್ ಎಡಿಟರ್ ಅಕ್ಷಿತಾ, ಫೈನ್ ಆರ್ಟ್ಸ್ ಕಾರ್ಯದರ್ಶಿ ಪ್ರೀತಮ್, ಜನರಲ್ ಕೇಪ್ಟನ್ ಜಿತೇಶ್ ಮತ್ತಿತರರು ಉಪಸ್ಥಿತರಿದ್ದರು.

ಕಾಮರ್ಸ್ ವಿಭಾಗದ ಕಾರ್ಯದರ್ಶಿ ರಶ್ಮಿ ಸ್ವಾಗತಿಸಿದರು. ಕಾರ್ಯದರ್ಶಿ ಸುದೀಶ್ ವಂದಿಸಿದರು. ದಿವಾಕರ್ ಉಪ್ಪಳ ನಿರೂಪಿಸಿದರು.