ಸೋತರೆ ಕುಗ್ಗಬೇಡಿ, ಗೆದ್ದರೆ ಹಿಗ್ಗಬೇಡಿ
ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ’ಟೆಲೆಂಟ್ಸ್ ಹಂಟ್ 2ಕೆ20’ ಸಮಾರೋಪ ಕಾರ್ಯಕ್ರಮದಲ್ಲಿ ಶಶಿಭೂಷಣ ಶಾಸ್ತ್ರಿ
ಸೋತವರು ಕುಗ್ಗಬಾರದು, ಗೆದ್ದವರು ಹಿಗ್ಗಬಾರದು. ಸೋತವರು ಮುಂದಿನ ಸ್ಪರ್ಧೆಗಳಿಗೆ ಬೇಕಾದ ತಯಾರಿಯಲ್ಲಿ ತೊಡಗಬೇಕು. ಗೆದ್ದವರು ತಾವು ಬಂದ ದಾರಿಯನ್ನು ಮೆಲುಕು ಹಾಕುತ್ತಾ, ಸೋತವರನ್ನು ಹೀಯಾಳಿಸದೇ ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಪೆರ್ಲ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ, ನಾಲಂದ ಕಾಲೇಜು ಆಡಳಿತ ಮಂಡಳಿಯ ಸದಸ್ಯ ಶಶಿಭೂಷಣ ಶಾಸ್ತ್ರಿ ಹೇಳಿದರು.
ಪೆರ್ಲ ನಾಲಂದ ಕಾಲೇಜಿನಲ್ಲಿ ಹೈಯರ್ ಸೆಕೆಂಡರಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ’ಟೆಲೆಂಟ್ಸ್ ಹಂಟ್ 2ಕೆ20’ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ಪರ್ಧೆಯಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಗೆಲ್ಲುತ್ತೇವೋ ಸೋಲುತ್ತೇವೋ ಎಂಬುದು ಪ್ರಧಾನವಲ್ಲ. ಆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮುಖಾಂತರ ತಮ್ಮಲ್ಲಿನ ಪ್ರತಿಭೆಗಳು ಅನಾವರಣಗೊಳ್ಳುವುದೇ ಮುಖ್ಯ.
ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಲಭಿಸುವ ಸಣ್ಣ ಸಣ್ಣ ಅವಕಾಶಗಳೂ ಕೂಡಾ ಭವಿಷ್ಯದಲ್ಲಿ ಆತನನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಲು ಸಹಕಾರಿ. ಆದುದರಿಂದ ಲಭಿಸಿದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.
ಹೈಯರ್ ಸೆಕೆಂಡರಿ ಹಾಗೂ ನಾಲಂದ ಕಾಲೇಜು ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸ್ಟಾಫ್ ಸೆಕ್ರೆಟರಿ, ಕನ್ನಡ ಉಪನ್ಯಾಸಕ ಕೇಶವ ಶರ್ಮ ಉಪಸ್ಥಿತರಿದ್ದರು. ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಸುರೇಶ್ ಸ್ವಾಗತಿಸಿದರು. ಶ್ರೀನಿಧಿ ವಂದಿಸಿದರು.