ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರದ ಅಂಗವಾಗಿ ನಾರಂಪಾಡಿ ಪೇಟೆಯಲ್ಲಿ ಹಮ್ಮಿಕೊಂಡ ಸ್ವಚ್ಛತಾ ಆಂದೋಲನಕ್ಕೆ ನಾರಂಪಾಡಿ ಶಿವಗಿರಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ನ ಸದಸ್ಯರು ಸಾಥ್ ನೀಡಿದರು.
ನಾರಂಪಾಡಿ ಶಿವಗಿರಿ ಆರ್ಟ್ಸ್ ಅಂಡ್ ಸೋರ್ಟ್ಸ್ ಕ್ಲಬ್ನ ಅಧ್ಯಕ್ಷ ಸತ್ಯ ಗೋಪಾಲ್ ಮಾತನಾಡಿ, ಊರ ನಾಗರಿಕರು ಮಾಡಬೇಕಾದ ಸ್ವಚ್ಛತಾ ಆಂದೋಲನ, ಎನ್ನೆಸ್ಸೆಸ್ ಶಿಬಿರಾರ್ಥಿಗಳಿಂದ ನಡೆಯುತ್ತಿದ್ದು, ಅವರ ಆ ಸಾಮಾಜಿಕ ಕಳಕಳಿಯೊಂದಿಗೆ ಕೈ ಜೋಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವೆ, ಪ್ಲಾಸ್ಟಿಕ್ ಅಲ್ಲಿ ಇಲ್ಲಿ ಬಿಸಾಡಲಾರೆ, ಪ್ಲಾಸ್ಟಿಕ್ ಉರಿಸಲಾರೆ, ಪ್ಲಾಸ್ಟಿಕ್ ಮರು ಬಳಕೆ ಮಾಡುವೆ, ಪ್ಲಾಸ್ಟಿಕ್ ತ್ಯಾಜ್ಯ ರಹಿತ ಪರಿಸರಕ್ಕೆ ರೂಪು ನೀಡುವೆ ಎಂಬ ಪ್ರತಿಜ್ಞೆ ಪ್ರತಿಯೊಬ್ಬ ಯುವಕ ಸ್ವೀಕರಿಸಿ ಕಾರ್ಯಪ್ರವೃತ್ತನಾದಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗದಿದ್ದರೂ ಪ್ಲಾಸ್ಟಿಕ್ ತ್ಯಾಜ್ಯ ರಹಿತ ಭೂಮಿ ನಮ್ಮದಾಗಬಹುದು ಎಂದರು.
ಕೇರಳ ರಾಜ್ಯ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನಾರಂಪಾಡಿ ಘಟಕದ ಕಾರ್ಯದರ್ಶಿ ಶ್ರೀಧರ ಪದ್ಮಾರ್ ಮಾತನಾಡಿ, ನಮ್ಮ ನಾಡು, ನಮ್ಮ ಸುತ್ತುಮುತ್ತಲಿನ ಪರಿಸರವನ್ನು ಶುಚಿಯಾಗಿಡುವುದು ನಮ್ಮ ಕರ್ತವ್ಯ. ಆದುದರಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ನಾಡನ್ನು ನಿರ್ಮಿಸಲು ಯಾವುದೇ ಭೇಧ ಭಾವಗಳಿಲ್ಲದೆ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕು ಎಂದು ಕರೆನೀಡಿದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಮಾತನಾಡಿ, ಅತೀ ಹೆಚ್ಚು ಯುವ ಸಂಪನ್ಮೂಲ ಹೊಂದಿದ ನಮ್ಮ ರಾಷ್ಟ್ರದಲ್ಲಿ ಬದಲಾವಣೆಯ ಬೀಜ ಬಿತ್ತಲು ಯುವಕರಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಯುವಜನಾಂಗ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಸ್ವಚ್ಛ ಪರಿಸರ, ನಗರ, ಜಿಲ್ಲೆ, ರಾಜ್ಯ ರೂಪುಗೊಳ್ಳಲಿ ತನ್ಮೂಲಕ ಸ್ವಚ್ಛ ರಾಷ್ಟ್ರದ ಗಾಂಧೀಜಿಯವರ ಕನಸು ಈಡೇರಲಿ ಎಂದರು.
ಶಿವಗಿರಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಬೆಳಗ್ಗಿನ ಉಪಹಾರ ಹಾಗೂ ತಂಪು ಪಾನೀಯ ವಿತರಿಸಿದರು ಹಾಗೂ ಶುಚಿತ್ವ ಅಭಿಯಾನಕ್ಕೆ ಕೈ ಜೋಡಿಸಿದರು. ನಾರಂಪಾಡಿ ಶ್ರೀ ಉಮಾಮಹೇಶ್ವರಿ ಕ್ಷೇತ್ರ ಸೇವಾಸಮಿತಿ ಮಧ್ಯಾಹ್ನ ಪ್ರಸಾದ ಭೋಜನ ವಿತರಿಸಿದರು. ಬದ್ರಿಯಾ ಜನರಲ್ ಸ್ಟೋರ್, ಅಪ್ಪಕುಂಞ ನಾರಂಪಾಡಿ ಮತ್ತಿತರರು ತಂಪು ಪಾನೀಯ ವಿತರಿಸಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ್ ಖಂಡಿಗೆ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಅಮೃತ, ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಅಜಿತ್ ಎಸ್., ಸ್ಟೆಟಿಸ್ಟಿಕ್ಸ್ ವಿಭಾಗದ ಉಪನ್ಯಾಸಕಿ ಸುಮ, ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಕಾವ್ಯ, ಅಂಜನಾ, ಜಗತ್, ಅಜಿತ್ ಮತ್ತಿತರರು ಸಹಕರಿಸಿದರು.