ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಜಿಲ್ಲಾ ಪಂ. ಸದಸ್ಯ ಅಡ್ವ. ಕೆ. ಶ್ರೀಕಾಂತ್
ಇದ್ದುದರಲ್ಲಿ ತೃಪ್ತಿ ಪಡುತ್ತಾ, ಇದ್ದುದನ್ನು ಹಂಚಿ ತಿನ್ನುವ, ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ಪರಿಶ್ರಮದ ಜೀವನದ ಮಹತ್ವ ತಿಳಿಯಪಡಿಸುವ, ಹೊಸ ಹೊಸ ಅರಿವನ್ನು ಪಡೆಯುತ್ತಾ, ಸೇವಾ ಮನೋಭಾವ ಬೆಳೆಸುತ್ತಾ, ಜಾತಿ ಮತ ಭೇಧವಿಲ್ಲದೆ ಒಂದೇ ಕುಟುಂಬದ ಸದಸ್ಯರಂತೆ ಬಾಳಿ ಬದುಕಲು ಕಲಿಸುವ ಎನ್ನೆಸ್ಸೆಸ್ ಶಿಬಿರಗಳಿಂದ ಜೀವನದ ನೈಜ ಪಾಠ ಲಭ್ಯವಾಗುತ್ತದೆ ಎಂದು ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಅಡ್ವ. ಕೆ. ಶ್ರೀಕಾಂತ್ ಹೇಳಿದರು.
ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನನಗಲ್ಲ ನಿನಗೆ ಎಂಬ ಎನ್ನೆಸ್ಸೆಸ್ ನ ಧ್ಯೇಯ ವಾಕ್ಯ, ತಾನು ತನ್ನದೆಂಬುದನ್ನು ಮರೆತು ಸಮಾಜಕ್ಕಾಗಿ ರಾಷ್ಟ್ರಕ್ಕಾಗಿ ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಡಲು, ಸಮಾಜಕ್ಕೆ ಏನನ್ನಾದರೂ ಹಿಂದುರುಗಿಸಿ ಕೊಡಲು, ಮನಸ್ಸು ನಂದವಟ್ಟೆ ಎಂಬ ಪ್ರಾರ್ಥನೆ ವಿದ್ಯಾರ್ಥಿಗಳ ಮನಸ್ಸಿನಲ್ಲಿರುವ ಕಲ್ಮಶಗಳನ್ನು ದೂರಗೊಳಿಸಿ ಜಾತಿ ಮತ, ಭೇಧ ಭಾವ ಮರೆತು ಒಗ್ಗೂಡಿ ಬಾಳಲು ಎನ್ನೆಸ್ಸೆಸ್ ಸ್ವಯಂ ಸೇವಕರನ್ನು ಪ್ರೇರೇಪಿಸಿತ್ತಿದೆ. ಪ್ರತಿಯೊಬ್ಬನ ಮನಸ್ಸು ಕಲ್ಮಶ ಮುಕ್ತವಾದಲ್ಲಿ ರಾಷ್ಟ್ರ ಪರಾಮವೈಭವಕ್ಕೆ ಕಾಲಿಡುವುದರಲ್ಲಿ ಸಂಶಯವಿಲ್ಲ.
ಸಣ್ಣ ಸಣ್ಣ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ, ಕಾರ್ಯಕ್ರಮ ಆಯೋಜನೆಗೆ, ಶ್ರಮದಾನ ತಂಡಗಳಿಗೆ ನಾಯಕತ್ವ ನೀಡುತ್ತಾ, ಒಬ್ಬ ವಿದ್ಯಾರ್ಥಿ ನಾಯಕನಾಗಿ ರೂಪುಗೊಳ್ಳುವಲ್ಲಿ ಉತ್ತೇಜನ ನೀಡುತ್ತದೆ. ಆದುದರಿಂದ ನಾಯಕತ್ವದ ಗುಣದ ಬೆಳವಣಿಗೆಗೂ ಎನ್ನೆಸ್ಸೆಸ್ ಶಿಬಿರಗಳು ಸಹಕಾರಿ.
ವಿದ್ಯಾರ್ಥಿಗಳ ಜೀವನ ಸುವರ್ಣ ಕಾಲಘಟ್ಟ ಎಂಬುದರಲ್ಲಿ ಎರಡು ಮಾತಿಲ್ಲ. ಆದುದರಿಂದ ಆ ಕಾಲಘಟ್ಟವನ್ನು ಆನಂದಿಸುವುದರಲ್ಲಿ ತಪ್ಪಿಲ್ಲ. ಆದರೆ ಅನಂದಿಸುವುದಕ್ಕೂ ಒಂದು ನಿಯಂತ್ರಣ ರೇಖೆ ಇರಬೇಕು ಎಂದರು.
ಶಿಬಿರದ ನಿರ್ದೇಶಕ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ್ ಖಂಡಿಗೆ ಯವರು ವಾರ್ಡ್ ಸದಸ್ಯೆ, ಶಿಬಿರದ ಸಂಯೋಜಕ ಸಮಿತಿಯ ಅಧ್ಯಕ್ಷೆ ಶಾಂತ ಎಸ್. ಭಟ್ ಅವರಿಗೆ ಪ್ರೊಜೆಕ್ಟ್ ಹಸ್ತಾಂತರಿಸಿದರು.
ನಾಲಂದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ ಚೆಟ್ಟಿಯಾರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ, ಎನ್ನೆಸ್ಸೆಸ್ ಶಿಬಿರಾರ್ಥಿಗಳಾದ ಪ್ರಥಮ ವರ್ಷ ಬಿಕಾಂ ವಿದ್ಯಾರ್ಥಿ ದೀಕ್ಷಿತ್ ಹಾಗೂ ಅಂಕಿತಾ, ಪ್ರಥಮ ವರ್ಷ ಬಿಎ ವಿದ್ಯಾರ್ಥಿನಿ ನವ್ಯಶ್ರೀ ಗೆ ಉತ್ತಮ ಎನ್ನೆಸ್ಸೆಸ್ ಸ್ವಯಂಸೇವಕ ಪ್ರಶಸ್ತಿ ನೀಡಿ ಗೌರವಿಸಿದರು.
ಕುಂಬ್ದಾಜೆ ಗ್ರಾಮ ಪಂಚಾಯಿತಿ ಸದಸ್ಯೆ ಎಲಿಸಬೆತ್ ಕ್ರಾಸ್ತ, ಶಿಬಿರದ ಸಂಯೋಜಕ ಸಮಿತಿಯ ಸಂಚಾಲಕ, ಅಗಲ್ಪಾಡಿ ಶಾಲಾ ಪ್ರಾಂಶುಪಾಲ ಸತೀಶ್ ವೈ, ಅಗಲ್ಪಾಡಿ ಶಾಲಾ ಮುಖ್ಯ ಶಿಕ್ಷಕ ಗಿರೀಶ ಎಂ., ಅಗಲ್ಪಾಡಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ. ಪ್ರಭಾಕರ ರೈ. ಮಠದಮೂಲೆ, ನಾಲಂದ ಕಾಲೇಜು ಆಡಳಿತ ಮಂಡಳಿಯ ಸದಸ್ಯ ಶ್ರೀಧರ ಭಟ್ ಚೋಕೆಮೂಲೆ, ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲಾ ಅಧ್ಯಾಪಕ ರಾಜೇಶ್ ಅಗಲ್ಪಾಡಿ ಶುಭ ಹಾರೈಸಿದರು.
ವಿಶೇಷ ಸಪ್ತ ದಿನ ಶಿಬಿರದ ಭಾಗವಾಗಿ ಅಗಲ್ಪಾಡಿ ಶಾಲೆಯಿಂದ ಮಾರ್ಪನಡ್ಕ, ಜಯನಗರ ಎಸ್ ಸಿ ಕಾಲನಿಯ ರಸ್ತೆ ಬದಿ ಶುಚೀಕರಣ ಹಾಗೂ ಚರಂಡಿಗಳ ನಿರ್ಮಾಣ, ನಾರಂಪಾಡಿ ಪೇಟೆ, ಮಾರ್ಪನಡ್ಕ ಪೇಟೆ ಹಾಗೂ ಶಾಲಾ ಪರಿಸರ ಶುಚೀಕರಣ, ಅಗಲ್ಪಾಡಿ ಶಾಲೆಯಿಂದ ಮಾರ್ಪನಡ್ಕ ರಸ್ತೆ ಬದಿಗೆ ಮಣ್ಣು ಹಾಕಿ ರಸ್ತೆ ದುರಸ್ತಿ, ಶೈಕ್ಷಣಿಕ, ವ್ಯಕ್ತಿತ್ವ ವಿಕಸನ ತರಗತಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತಿತರ ಕಾರ್ಯಕ್ರಮಗಳನ್ನು ಎನ್ನೆಸ್ಸೆಸ್ ಸ್ವಯಂಸೇವಕರು ಹಮ್ಮಿಕೊಂಡರು.
ಕುಂಬ್ಡಾಜೆ ಗ್ರಾಮ ಪಂಚಾಯತ್, ಕುಟುಂಬಶ್ರೀ ಘಟಕಗಳು, ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ಅಗಲ್ಪಾಡಿ ಜಯನಗರ, ಕೆವಿವಿಯಿಎಸ್ ನಾರಂಪಾಡಿ, ಉಪ್ಪಂಗಳ ಟ್ರಸ್ಟ್ , ಸ್ನೇಹ ಕೂಡಾರಮ್ ಜಯನಗರ, ಯಾದವ ಸೇವಾ ಸಂಘ ಅಗಲ್ಪಾಡಿ, ಶಿವಶಕ್ತಿ ಆರ್ಟ್ಸ್ & ಸ್ಫೋರ್ಟ್ಸ್ ಕ್ಲಬ್ ಕುಂಬ್ದಾಜೆ, ದುರ್ಗಾ ಫ್ರೆಂಡ್ಸ್ ಕ್ಲಬ್ ಅಗಲ್ಪಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು- ಮಾರ್ಪನಡ್ಕ ಘಟಕ, ನವಯುಗ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಕುಂಬ್ದಾಜೆ, ಶಿವಗಿರಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ನಾರಂಪಾಡಿ, ಶ್ರೀ ಚೌಕಾರು ಗುಳಿಗಬನ ಸೇವಾ ಸಮಿತಿ ಮಾರ್ಪನಡ್ಕ, ನಾಲಂದ ಚಾರಿಟೇಬಲ್ ಟ್ರಸ್ಟ್ (ರಿ.), ಇನ್ನಿತರ ಸ್ಥಳೀಯ ಸಂಘ ಸಂಸ್ಥೆಗಳ ಹಾಗೂ ಸ್ಥಳೀಯ ದಾನಿಗಳ ಪೂರ್ಣ ಸಹಕಾರದ ಫಲವಾಗಿ ಎನ್ನೆಸ್ಸೆಸ್ ಸಪ್ತದಿನ ಶಿಬಿರದ ಯಶಸ್ವಿಯಾಗಿ ಪೂರ್ಣಗೊಂಡಿತು.
ಮಾಜಿ ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ರೂಪ, ಸುದೀಶ್, ಧನ್ಯ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಕಾರ್ಯದರ್ಶಿ ಕಾವ್ಯ ಸ್ವಾಗತಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ ಎಂ. ವಂದಿಸಿದರು. ನವ್ಯಶ್ರೀ ನಿರೂಪಿಸಿದರು.