ಬದಿಯಡ್ಕ: ಅಗಲ್ಪಾಡಿ ಶಾಲೆಯಲ್ಲಿ ನಡೆದ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರದಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ಪರಿಸರ ಸಂರಕ್ಷಣೆಯ ಅಗತ್ಯತೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಜರಗಿತು.
ಸಂಪನ್ಮೂಲ ವ್ಯಕ್ತಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಉಪನ್ಯಾಸಕ ಮೊಹಮ್ಮದ್ ಅಲಿ ಮಾತನಾಡಿ, ಜಾಗತಿಕ ತಾಪಮಾನ ದಿನೇ ದಿನೇ ಏರುತ್ತಿದ್ದರೂ, ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪ ನಮ್ಮ ನಾಡನ್ನು ತತ್ತರಿಸುತ್ತಿದ್ದರೂ, ಉಸಿರಾಡುವ ಶುದ್ಧ ವಾಯುವಿಗೆ ಹಣ ತೆರಬೇಕಾದ ಪರಿಸ್ಥಿತಿ ಎದುರಾದರೂ, ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲದೆ ಅಲೆದಾಡಿದರೂ, ಮಾನವ ಎಚ್ಚೆತ್ತಿಲ್ಲ. ಮಾನವ ಎಚ್ಚೆತ್ತುಕೊಂಡು ಪ್ರಕೃತಿ ಸಂರಕ್ಷಣೆಯಲ್ಲಿ ತೊಡಗಬೇಕಾದ ಕಾಲ ಈಗಾಗಲೇ ಮೀರಿ ಹೋಗಿದೆ. ಇನ್ನು ಪ್ರಕೃತಿ ಸಂರಕ್ಷಣೆಯಲ್ಲಿ ತೊಡಗದಿದ್ದರೂ, ಪ್ರಕೃತಿಯ ಶೋಷಣೆಯನ್ನು ಕೊನೆಗೊಳಿಸಬೇಕು. ಇಲ್ಲವಾದಲ್ಲಿ ಭೂಮಿಯ ಮೇಲೆ ಮಾನವನ ಅಸ್ತಿತ್ವ ಚರಿತ್ರೆಯ ಪುಟಗಳಲ್ಲಿ ದಾಖಲಾಗುವುದರಲ್ಲಿ ಸಂಶಯವಿಲ್ಲ ಎಂದರು.
ಹೆಸರಿಗೋಸ್ಕರ, ಪ್ರಚಾರಕ್ಕೋಸ್ಕರ ಗಿಡ ನೆಡುವುದು ಸರಿಯಲ್ಲ, ನೆಟ್ಟು ಪ್ರಯೋಜನವೂ ಇಲ್ಲ. ಗಿಡ ನೆಡುವಾಗ ಆರ್ಥಿಕ ದೃಷ್ಟಿಯಿಂದ ನೋಡದೇ ಜೈವವೈವಿದ್ಯ ಸಂರಕ್ಷಣೆ ಸಹಕಾರಿಗಳಾದ ಔಷಧೀಯ ಹಾಗೂ ಹಣ್ಣಿನ ಗಿಡಗಳನ್ನು ನೆಡಬೇಕು. ಗಿಡ ನೆಡುವ ಮನೋಭಾವ ಪರಿಸರ ದಿನಕ್ಕಷ್ಟೇ ಸೀಮಿತವಾಗದೇ, ನೆಟ್ಟ ಗಿಡವನ್ನು ಪೋಷಿಸಿ ಬೆಳೆಸುವುದು ಕಾರ್ಯವೂ ನಡೆಯಬೇಕಿದೆ.
ರಾಷ್ಟ್ರದ ಸಾರ್ವತೋಮುಖ ಬೆಳವಣಿಗೆಗೆ ಅಭಿವೃದ್ಧಿ ಮುಖ್ಯ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶದ ಖಂಡನೀಯ. ಮಾನವನ ಅಸ್ತಿತ್ವಕ್ಕೆ ಭೂಮಿ ಮುಖ್ಯ ಆದರೆ ಭೂಮಿಯ ಅಸ್ತಿತ್ವಕ್ಕೆ ಮಾನವ ಮುಖ್ಯವಲ್ಲ ಎಂಬುದನ್ನು ಅರಿತು ಕಾರ್ಯ ಪ್ರವೃತ್ತರಾಗುವುದು ಉತ್ತಮ.
ಮಾನವ ಭೂಮಿಯ ಮೇಲೆ ನಡೆಸುತ್ತಿರುವ ಅನಿಯಮಿತ ಕಾರ್ಯಗಳು ಮಾನವನಂತೆಯೇ ಈ ಭೂಮಿಯಲ್ಲಿ ವಾಸಿಸಲು ಸಮಾನ ಹಕ್ಕಿರುವ ಇತರ ಜೀವಿಗಳ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾನೆ. ಭೂಮಿಯ ಮೇಲಿನ ಇತರ ಜೀವಿಗಳಿಗೂ ನಮ್ಮಂತೆಯೇ ಬದುಕಲು ನಾವು ಅವಕಾಶ ಮಾಡಿ ಕೊಡಬೇಕು ಎಂದರು.
ಆಹಾರ ವಸ್ತು, ತರಕಾರಿ ಹಾಗೂ ಹಣ್ಣುಹಂಪಲುಗಳ ಕೃಷಿಯಲ್ಲಿ ಹೆಚ್ಚಿನ ಫಸಲು ಲಭಿಸಲು ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸುವ ಮುನ್ನ ಒಮ್ಮೆ ಅಲೋಚಿಸುವುದು ಸೂಕ್ತ. ನಾವೇ ವಿಷ ಹಾಕಿ ನಾವೇ ತಿನ್ನುತ್ತಿದ್ದೇವೆ. ಇವುಗಳು ಪರಿಸರದ ಮೇಲೆ ಮಾತ್ರವಲ್ಲ, ಮಾನವನ ಆರೋಗ್ಯದ ಮೇಲೆಯೂ ತೀವ್ರ ಪರಿಣಾಮವನ್ನುಂಟು ಮಾಡುತ್ತದೆ. ಆದುದರಿಂದ ಪಾರಂಪರಿಕ ರೀತಿಯ ಕೃಷಿಗೆ ನಾವು ಹಿಂದಿರುಗಬೇಕು, ಜೈವಿಕ ಗೊಬ್ಬರ, ಕೀಟನಾಶಕಗಳನ್ನು ಹೆಚ್ಚು ಹೆಚ್ಚು ಬಳಸಬೇಕು ಎಂದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ., ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಶ್ರೀನಿಧಿ, ಅಜಿತ್ ಎಸ್., ಉಪನ್ಯಾಸಕಿ ನಿವೇದಿತ,ಎನ್ನೆಸ್ಸೆಸ್ ಕಾರ್ಯದರ್ಶಿ ಕಾವ್ಯ ಉಪಸ್ಥಿತರಿದ್ದರು.