ನೀರ ನೆಮ್ಮದಿಯತ್ತ ಪಡ್ರೆ| ಪಡ್ರೆಯ ಜಲಯೋಧರಿಗೆ ನಾಲಂದ ಕಾಲೇಜು ಎನ್ನೆಸ್ಸೆಸ್ ಸಾಥ್ ; ಪಡ್ಪು ಗುಡ್ಡದ ತಳಭಾಗದಲ್ಲಿ ಮದಕ ರೀತಿಯ ರಚನೆ; ಗುಡ್ಡದಲ್ಲಿ ಗಿಡ ನೇಡುವ ಚಟುವಟಿಕೆ;
ಕಳೆದ ಬೇಸಗೆಯಲ್ಲಿ ಅಭೂತಪೂರ್ವ ಎಂಬಂತೆ ಬತ್ತಿ ಬರಡಾಗಿದ್ದ ಸ್ವರ್ಗ ತೋಡಿನ ಪುನರುದ್ಧಾರ; ತೋಡಿನಲ್ಲಿ ವರ್ಷಪೂರ್ತಿ ನೀರು ಹರಿಸುವ ಕನಸಿನೊಂದಿಗೆ ಬೃಹತ್ ಜಲ ಅಭಿಯಾನಕ್ಕೆ ನಾಂದಿಯಾದ ’ನೀರ ನೆಮ್ಮದಿಯತ್ತ ಪಡ್ರೆ’ ಜಲಯೋಧರ ಜಲ ಚಟುವಟಿಕೆಗಳಿಗೆ ಪೆರ್ಲ ನಾಲಂದ ಕಾಲೇಜಿನ ಎನ್ನೆಸ್ಸೆಸ್, ಗ್ರಾಮ ವಿಕಾಸ ಯೋಜನೆ, ಭೂಮಿತ್ರ ಸೇನೆ, ಪಡ್ಪು ಕಾಲೊನಿ ನಿವಾಸಿಗಳು ಸಾಥ್ ನೀಡಿದ್ದಾರೆ.
ಬಹುತೇಕ ಎಲ್ಲಾ ಬೇಸಗೆಯಲ್ಲೂ ನೀರಿನ ಕ್ಷಾಮದಿಂದ ಪರದಾಟ ನಡೆಸಿದ ಪಡ್ರೆ ಪಡ್ಪು ಕಾಲನಿ ನಿವಾಸಿಗಳು ಪಂಚಾಯಿತಿ, ಸಂಘಟನೆಗಳು ಪೂರೈಸಿದ ನೀರನ್ನು ಆಶ್ರಯಿಸಿರುವುದನ್ನು ಮನಗಂಡ ’ನೀರ ನೆಮ್ಮದಿಯತ್ತ ಪಡ್ರೆ’ ಜಲಯೋಧರು ’ಪಡ್ಪು ಛಲೋ’ ಅಭಿಯಾನ ಹಮ್ಮಿಕೊಂಡಿದ್ದು ನಾಲಂದ ಕಾಲೇಜು ಎನ್ನೆಸ್ಸೆಸ್ ಸದಸ್ಯರು, ಗ್ರಾಮ ವಿಕಾಸ ಯೋಜನೆ ಕಾರ್ಯಕರ್ತರು, ಪಡ್ಪು ಕೊಲೋನಿಯ ಹುರಿಯಾಳುಗಳ ನೇತೃತ್ವದಲ್ಲಿ ನೀರು ಇಂಗಿಸುವ ಚಟುವಟಿಕೆ ನಡೆಸಿದ್ದು ಪಡ್ಪುವಿನ ಹಿರಿಯರಾದ ಮಾಯಿಲ ಚಾಲನೆ ನೀಡಿದ್ದರು.
ಗುಡ್ಡದ ತಳಭಾಗದಲ್ಲಿ ಮೇಲ್ಭಾಗದ ಸುರಂಗದಿಂದ ಹರಿದು ರಸ್ತೆ ದಾಟಿ ತೋಡು ಸೇರುತ್ತಿದ್ದ ನೀರನ್ನು ತಡೆದು ಇಂಗಿಸಲು (651) ಘ.ಮೀ.ಮದಕ ರೀತಿಯ ರಚನೆ ನಡೆಸಿ ಸುಮಾರು 10 ಸಾವಿರ ಲೀಟರ್ ನೀರು ಹಿಡಿದಿರಿಸುವಲ್ಲಿ ಸಮರ್ಥರಾಗಿದ್ದಾರೆ. ಜಲತಜ್ಞ ಶ್ರೀಪಡ್ರೆ, ರುವಾರಿಗಳಾದ ಶ್ರೀಹರಿ ಭಟ್ ಸಜಂಗದ್ದೆ, ಸುಬ್ರಹ್ಮಣ್ಯ ಭಟ್ ಕೆ.ವೈ., ಜಗದೀಶ್ಚಂದ್ರ ಕುತ್ತಾಜೆ, ಸವಿತಾ ಬಾಳಿಕೆ, ಶ್ರೀನಿವಾಸ ಸ್ವರ್ಗ, ಮಂಜುನಾಥ ಪಡ್ಪು, ಪ್ರಸಾದ್ ಪಡ್ಪು, ನಾಲಂದ ಗ್ರಾಮ ವಿಕಾಸ ಯೋಜನಾಧಿಕಾರಿ ಶ್ರೀನಿಧಿ ಕೊಲ್ಲೆಂಕಾನ, ಉಪನ್ಯಾಸಕ ಅಜಿತ್ ಪೆರ್ಲ, ಎನ್ನೆಸ್ಸೆಸ್ ಕಾರ್ಯದರ್ಶಿ ಜಗತ್ ಸದಸ್ಯರು, ಸ್ಥಳೀಯರು ನೇತೃತ್ವ ವಹಿಸಿದ್ದರು.