ನಾಲಂದ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯಲ್ಲಿ ಗೌರವ ಸ್ವೀಕರಿಸಿ ನಾರಾಯಣ ಭಟ್ ಬನಾರಿ
ವಿದ್ಯಾರ್ಥಿಗಳು ತಿದ್ದಿ ಸರಿ ದಾರಿಗೆ ತರಲು ಶಿಕ್ಷೆಯೊಂದೇ ಮಾರ್ಗವಲ್ಲ. ಅಧ್ಯಾಪಕ ತನ್ನ ವಿದ್ಯಾರ್ಥಿಗಳನ್ನು ತನ್ನ ಮಕ್ಕಳಿಂದಲೂ ಹೆಚ್ಚು ಪ್ರೀತಿಸಬೇಕು. ತಾನು ಮಾಡುವ ಪುಣ್ಯ ಕಾರ್ಯದಲ್ಲಿ ಸಂಪೂರ್ಣ ತೃಪ್ತಿ, ಪ್ರೀತಿ, ತಾಳ್ಮೆ ಇರಬೇಕು ಎಂದು ನಿವೃತ್ತ ಶಿಕ್ಷಕ ನಾರಾಯಣ ಭಟ್ ಬನಾರಿ ಹೇಳಿದರು.
ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ತಮ್ಮ ಜೀವನವನ್ನು ರೂಪಿಸಲು ಹಲವಾರು ಅವಕಾಶಗಳಿದೆ. ಕೆಲಸದಲ್ಲಿ ತಾರತಮ್ಯವಿಲ್ಲ. ಕೆಲಸ ಸಣ್ಣದಾದರೂ, ದೊಡ್ಡದಾದರೂ, ತೃಪ್ತಿ, ನಿಷ್ಠೆ, ಶ್ರದ್ಧೆ ಇದ್ದಲ್ಲಿ ಅದೇ ಪರಮಾನಂದ ಎಂದರು. ಸಣ್ಣ ಮಗುವಿನಿಂದಲೂ ಕೂಡ ಹಲವಾರು ವಿಚಾರಗಳನ್ನು ತಿಳಿಯಲು ಸಾಧ್ಯ. ಆದುದರಿಂದ ಜೀವನವೇ ಮೊದಲ ಪಾಠಶಾಲೆ ಎಂದರು.
28 ವರ್ಷಗಳ ಕಾಲ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಾರಾಯಣ ಭಟ್ ಬನಾರಿ ಹಾಗೂ ಪೆರ್ಲ ಶ್ರೀ ಸತ್ಯನಾರಾಯಣ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೨೯ ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ರಾಮ ನಾಯ್ಕ ಅವರನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ ಚೆಟ್ಟಿಯಾರ್ ಹಾಗೂ ಪ್ರಾಂಶುಪಾಲರಾದ ಡಾ. ವಿಘ್ನೇಶ್ವರ ವರ್ಮುಡಿ ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ ಚೆಟ್ಟಿಯಾರ್ ಮಾತನಾಡಿ, ಅಜ್ಞಾನದಿಂದ ಕುರುಡನಾಗಿದ್ದವನನ್ನು ಜ್ಞಾನದ ಬೆಳಕು ಹಾಯಿಸಿ ಕಣ್ಣು ತೆರೆಸಿದ ಅಧ್ಯಾಪಕರನ್ನು ವಿದ್ಯಾರ್ಥಿಗಳು ಎಂದೆಂದಿಗೂ ಮರೆಯಬಾರದು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ ಸ್ವಾಗತಿಸಿದರು. ಅಶ್ವಿನಿ ಕ್ರಾಸ್ತ ವಂದಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಅಮೃತ ನಿರೂಪಿಸಿದರು.