×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಯುವಜನಾಂಗ ರಾಷ್ಟ್ರದ ರಕ್ಷಣೆಗೆ ಮುಂದಾಗಿ

ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಭಾರತವನ್ನು ಭಯೋತ್ಪಾದನೆ ಮುಂತಾದ ರಾಷ್ಟ್ರದ ಭದ್ರತೆಗೆ ಸವಾಲೊಡ್ಡುವ ಹಲವಾರು ಸಮಸ್ಯೆಗಳು ಕಾಡುತ್ತಿದ್ದು, ಯುವಜನಾಂಗ ರಾಷ್ಟ್ರದ ರಕ್ಷಣೆಗೆ ಮುಂದಾಗಬೇಕು ಎಂದು ಗಡಿ ರಕ್ಷಣಾ ಪಡೆಯ ಯೋಧ ಬಾಲಕೃಷ್ಣ ಬಿ. ಹೇಳಿದರು.

ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಜರಗಿದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಸ್ವಾರ್ಥಕ್ಕೆ ರಾಷ್ಟ್ರಹಿತವನ್ನು ಬಲಿಕೊಡದೆ, ರಾಷ್ಟ್ರದ ಹಿತ ನಮ್ಮೆಲ್ಲರ ಹಿತವೆಂಬ ಸಂಕಲ್ಪವನ್ನು ಯುವಜನಾಂಗ ಕೈಗೊಳ್ಳಬೇಕು. ರಾಷ್ಟ್ರದ ಐಕ್ಯತೆ, ಸಮಗ್ರತೆಗೆ ಧಕ್ಕೆಯಾಗದಂತೆ ಯುವ ಜನಾಂಗ ಜಾಗ್ರತೆ ವಹಿಸಬೇಕು. ಜಾತಿ ಭೇಧವೆಲ್ಲವನ್ನು ಮರೆತು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಯುವಜನಾಂಗ ಶ್ರಮಿಸಬೇಕು ಎಂದು ಅವರು ಹೇಳಿದರು.

Independence day 2019 (3)

Independence day 2019 (1)

Independence day 2019 (2)

ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಜಯಗೋವಿಂದ ಉಕ್ಕಿನಡ್ಕ ಮಾತನಾಡಿ, ತಾತ್ಕಾಲಿಕವಾಗಿ ಘೋಷಿಸಿದ್ದ ಸಂವಿಧಾನದ 370 ವಿಧಿ ಹಾಗೂ ಆರ್ಟಿಕಲ್ 35 ಎ ಯನ್ನು ರದ್ದುಗೊಳಿಸುವ ಮುಖಾಂತರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪೂರ್ಣ ಸ್ವಾತಂತ್ರ್ಯವನ್ನು ತಂದುಕೊಟ್ಟಿದೆ. ಸ್ವಾತಂತ್ರ್ಯ ನಮ್ಮ ಮನಸ್ಥಿತಿಯಲ್ಲಿದೆ. ಅರಿವು ನಮ್ಮಲ್ಲಿದ್ದಾಗ ಆ ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯ. ವಿವಿಧತೆಗಳಿಂದ ಕೂಡಿದ ಭಾರತ ದೇಶದಲ್ಲಿ ಎಡ ಬಲ ಚಿಂತನೆಗಳಿಗೆ ಪ್ರಾಶಸ್ತ್ಯ ನೀಡದೇ, ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಂಡು ರಾಷ್ಟ್ರದ ಪ್ರಗತಿಗಾಗಿ ಶ್ರಮಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ, ನೂರಾರು ವರ್ಷಗಳ ಬಳಿಕ ಪರಕೀಯರ ಸಂಕೋಲೆಯಿಂದ ಹೊರಬರಲು ಅನೇಕ ಭಾರತೀಯರು ಶ್ರಮಿಸಿದ್ದು, ಅವರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು. ಅಮೇರಿಕಾ ಹಾಗೂ ಚೀನಾದ ತೀವ್ರ ವ್ಯಾಪಾರ ಪೈಪೋಟಿಯಿಂದಾಗಿ ಅವುಗಳನ್ನು ಅವಲಂಬಿತ ರಾಷ್ಟ್ರಗಳು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸ್ವಾತಂತ್ರ್ಯ ನಂತರದ ೭೨ ವರ್ಷಗಳ ಆರ್ಥಿಕ ಸ್ಥಿತಿಗತಿ ಪರಿಶೀಲಿಸಿದಾಗ ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿಲ್ಲ.

ಕಳೆದ ಎಂಟು ವರ್ಷದ ಆರ್ಥಿಕ ಬೆಳವಣಿಗೆ ಪರಿಶೀಲಿಸಿದಾಗ ಭಾರತವು, ವಿದೇಶಿ ರಾಷ್ಟ್ರಗಳಿಂದ ಮುಂದಿದೆ. ಆದರೆ ಮುಂಬರುವ ದಿನಗಳಲ್ಲಿ ಬೆಳವಣಿಗೆಯ ದರ ಕುಂಠಿತವಾಗುವ ಸಾಧ್ಯತೆ ಇದ್ದು, ರಾಷ್ಟ್ರ ಆರ್ಥಿಕ ಹಿಂಜರಿತವನ್ನು ಅನುಭವಿಸಬೇಕಾಗುತ್ತದೆ. ದೇಶವನ್ನು ಆರ್ಥಿಕವಾಗಿ ಬಲಿಷ್ಠ ಮಾಡುವ ನಿಟ್ಟಿನಲ್ಲಿ, ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸುವ ಸಲುವಾಗಿ, ಭಾರತೀಯರು ಖರ್ಚು ವೆಚ್ಚಗಳ ಮೇಲೆ ಹಿಡಿತ ಸಾಧಿಸುವುದು ಸೂಕ್ತ ಎಂದು ಡಾ| ವರ್ಮುಡಿ ಸಲಹೆ ನೀಡಿದರು.

೨೦೦೨ ನೇ ಇಸವಿಯಲ್ಲಿಸೈನ್ಯವನ್ನು ಸೇರಿ ೯ ವರ್ಷ ಕಾಶ್ಮೀರದಲ್ಲಿ, ೩ ವರ್ಷ ರಾಜಸ್ಥಾನದಲ್ಲಿ, ೩ ವರ್ಷ ಗುಜರಾತ್ ನಲ್ಲಿ, ಸೇವೆ ಸಲ್ಲಿಸಿ, ಪ್ರಸ್ತುತ ಪಶ್ಚಿಮ ಬಂಗಾಳದ ಗಡಿ ಭದ್ರತಾ ಪಡೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿರುವ, ತನ್ನ ನಿಷ್ಠಾವಂತ ಸೇವೆಗೆ ೩೯ರಷ್ಟು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡ, ಸರ್ಚ್ ಓಪರೇಷನ್ ಸ್ಪೆಷಲಿಸ್ಟ್ ಬಾಲಕೃಷ್ಣ ಬಿ. ಅವರಿಗೆ ಕಾಲೇಜಿನ ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಸ್ಮರಣಿಕೆ ನೀಡಿ ಗೌರವಿಸಿದರು.

ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಸ್ವಾಗತಿಸಿದರು. ಕಾರ್ಯದರ್ಶಿ ಜಗತ್ ವಂದಿಸಿದರು. ಕವಿತಾ ನಿರೂಪಿಸಿದರು.