ಪೆರ್ಲ: ರಾಷ್ಟ್ರ ಸುರಕ್ಷಿತವಾಗಿದ್ದಲ್ಲಿ ಮಾತ್ರ ನಾವು ನಿರ್ಭಯವಾಗಿ ಜೀವಿಸಲು ಸಾಧ್ಯ. ರಾಷ್ಟ್ರದ ರಕ್ಷಣೆಗಾಗಿ ಪ್ರತಿ ಮನೆ ಮನೆಯಲ್ಲಿ ಒಬ್ಬ ಸೈನಿಕ ಹುಟ್ಟಲಿ, ತನ್ನ ಜೀವನವನ್ನು ರಾಷ್ಟ್ರ ಸೇವೆಗೆ ಮೀಸಲಿಡುವಂತಾಗಲಿ ಎಂದು ಕಾಲೇಜಿನ ಅಂಗ್ಲಬಾಷಾ ಉಪನ್ಯಾಸಕಿ ಸವಿತಾ ಡಿ. ಶೆಟ್ಟಿ ಹೇಳಿದರು.
೨೦ನೇ ವರ್ಷದ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಪೆರ್ಲ ನಾಲಂದ ಕಾಲೇಜಿನ ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಗಿಲ್ ವಿಜಯ ದಿವಸ ಒಂದು ದಿನಕ್ಕೆ ಮಾತ್ರ ಸೀಮಿತವಾಗದಿರಲಿ, ಪ್ರಾಣದ ಹಂಗನ್ನು ತೊರೆದು, ಹಗಳಿರುಳೆನ್ನದೆ ತಾಯಿ ಭಾರತೀಯ ಸೇವೆ ಗೈದು ಹುತಾತ್ಮರಾದ ವೀರ ಯೋಧರ ಬಲಿದಾನ ಪ್ರತಿ ದಿನದಲ್ಲೂ, ಪ್ರತಿ ಕ್ಷಣ ಕ್ಷಣದಲ್ಲೂ ಪ್ರತಿ ಭಾರತೀಯನ ಮನದಲ್ಲೂ ಚಿರ ಸ್ಮರಣೀಯವಾಗಿರಲಿ ಎಂದರು.
ತ್ಯಾಗ ಬಲಿದಾನಕ್ಕೆ ಇನ್ನೊಂದು ಹೆಸರು ನಮ್ಮ ಸೈನಿಕರು. ಸೈನಿಕರ ತ್ಯಾಗ, ಬಲಿದಾನದಿಂದ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ. ನಮ್ಮ ನಾಳೆಗಳಿಗಾಗಿ ತಮ್ಮ ನಾಳೆಗಳನ್ನು ಮುಡಿಪಾಗಿಟ್ಟ ಧೀರ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.
ದ್ವೇಷ, ಅಸೂಯೆಗಲಿಲ್ಲದೇ, ನಿಷ್ಕಲ್ಮಶ ಮನಸ್ಸಿನಿಂದ ಯಾವಾಗ ನಾವು ನಮ್ಮ ದೇಶ, ನಮ್ಮ ಧರ್ಮ ಎನ್ನುತ್ತೇವೆಯೋ ಆಗ ನಮ್ಮ ರಾಷ್ಟ್ರವನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ ಎನ್ನುವ ಕಳಕಳಿ ಮೂಡಲು ಸಾಧ್ಯ. ಭಾರತೀಯರು ವಿವಿಧತೆಗಳನ್ನು ಮರೆತು ಏಕತೆಯತ್ತ ಸಾಗಬೇಕು, ರಾಷ್ಟ್ರದ ರಕ್ಷಣೆಗೆ ಕಂಕಣ ಬದ್ಧರಾಗಿರಬೇಕು ಎಂದರು.
ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಜಗತ್, ಅಭಿಲಾಶ್, ಅಂಜನಾ, ಕವಿತಾ ಉಪಸ್ಥಿತರಿದ್ದರು. ಕೃತಿಕಾ ಸ್ವಾಗತಿಸಿ, ಧನ್ಯ ವಂದಿಸಿದರು. ವಿಂದ್ಯಾ ನಿರೂಪಿಸಿದರು.