ಮಾನವೀಯ ಸಂಬಂಧಗಳು ನಶಿಸಿಹೋಗುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯ ಹಾಗೂ ರೋಗಿಗಳ ನಡುವಿನ ಸಂಬಂಧವೂ ಶಿಥಿಲಗೊಳ್ಳುತ್ತಿದ್ದು, ವೈದ್ಯ ಹಾಗೂ ರೋಗಿಯ ಸಂಬಂಧ ಗಟ್ಟಿಗೊಳ್ಳಬೇಕಿದೆ ಎಂದು ಉಕ್ಕಿನಡ್ಕಸ್ ಆಯುರ್ವೇದಿಕ್ಸ್ ನ ಮಾಲಕ ಹಗು ನಾಲಂದ ಮಹಾವಿದ್ಯಾಲಯ ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಜಯಗೋವಿಂದ ಉಕ್ಕಿನಡ್ಕ ಹೇಳಿದರು.
ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಲವಾರು ಸಮಸ್ಯೆಗಳೊಂದಿಗೆ, ಹಲವು ರಾತ್ರಿ ಕೆಲಸ ಮಾಡುವ ವೈದ್ಯರ ಕುರಿತು ಸಂಶಯ ಪಡುವುದು ಸರಿಯಲ್ಲ. ರೋಗಿ ಹಾಗೂ ವೈದ್ಯನ ಮದ್ಯೆ ವಿಶ್ವಾಸವಿಲ್ಲದಿದ್ದಲ್ಲಿ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಕಡಿಮೆಯಾಗುತ್ತದೆ.
ರೋಗಿಯ ಆರೋಗ್ಯ ದೃಷ್ಟಿಯಿಂದ ಕುಟುಂಬ ವೈದ್ಯಕೀಯ ಪದ್ದತಿಯನ್ನು ಅನುಸರಿಸುವುದು ಸೂಕ್ತ. ಕುಟುಂಬ ವೈದ್ಯನಿಗೆ ರೋಗಿಯ ಶರೀರದ ಸಂಪೂರ್ಣ ತಿಳುವಳಿಕೆ ಇರುವುದರಿಂದ ಸೂಕ್ತ ಚಿಕಿತ್ಸೆ ಶೀಘ್ರವಾಗಿ ನೀಡಲು ಸಾಧ್ಯ.
ಯುವ ವೈದ್ಯರು ಸೇವಾ ಮನೋಭಾವನೆಯಿಂದ ದೇಶದ ಹಿತಕ್ಕಾಗಿ, ದೇಶವನ್ನು ರೋಗ ಮುಕ್ತ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದರೆ ಮಾದರಿ ವೈದ್ಯರಾಗಲು ಸಾಧ್ಯ ಎಂದರು.
ವೈದ್ಯರಾಗಿ 37 ವರ್ಷಗಳ ದೀರ್ಘಕಾಲ ಗ್ರಾಮೀಣ ಪ್ರದೇಶಗಳಾದ ಏತಡ್ಕ, ವಾಣೀನಗರ, ಸ್ವರ್ಗದಲ್ಲಿ ಕ್ಲಿನಿಕ್ ನಿರ್ಮಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದ, ಎಂಡೋಸಲ್ಫಾನ್ ಎಂಬ ಮಾರಕ ವಿಷದ ವಿರುದ್ಧ ಹೋರಾಟ ನಡೆಸಿದ, ದೊಂಪತ್ತಡ್ಕ ಕಗ್ಗಲ್ಲು ಕೋರೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಮುಂದಾಳತ್ವ ವಹಿಸುತ್ತಿರುವ ಸಾಮಾಜಿಕ ಹೋರಾಟಗಾರ, ಪರಿಸರ ಪ್ರೇಮಿ ಡಾ. ಮೋಹನ್ ಕುಮಾರ್ ರವರನ್ನು ಡಾ. ಜಯಗೋವಿಂದ ಉಕ್ಕಿನಡ್ಕ, ಗುರುಕುಲಂ ಪ್ರಿಂಟರ್ಸ್ ಮಾಲಕ ರಾಜಾರಾಂ ಪೆರ್ಲ, ಕಾಲೇಜು ಆಡಳಿತ ಮಂಡಳಿಯ ಸದಸ್ಯ ರಾಜಶೇಖರ್ ಪೆರ್ಲ ಮತ್ತಿತರರು ಸನ್ಮಾನಿಸಿದರು.
ಡಾ. ಮೋಹನ್ ಕುಮಾರ್ ಗೌರವ ಸ್ವೀಕರಿಸಿ ಮಾತನಾಡಿ, ಹಣ ಸಂಪಾದನೆ ಮಾತ್ರ ನಮ್ಮ ಉದ್ದೇಶವಾಗಿರಬಾರದು ಅದರೊಂದಿಗೆ ಸಾಮಾಜಮುಖಿ ಚಿಂತನೆಗಳು, ಸ್ವಾರ್ಥ ರಹಿತ ಗುಣ, ಇತರರ ನೋವಿಗೆ ಸ್ಪಂದಿಸುವ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದರು.
ಸ್ವಾರ್ಥ ಸಾಧನೆಯಿಂದಾಗಿ ನಾಡಿನ ಅಭಿವೃದ್ಧಿ ಕುಂಠಿತವಾಗುತ್ತದೆ. ಯುವಜನಾಂಗ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ನಮ್ಮ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಸಹಾಯಕ ಪ್ರಾಂಶುಪಾಲರಾದ ಕೇಶವ ಶರ್ಮ ಮಾತನಾಡಿ, ಜನ ಸೇವೆಯೇ ಜನಾರ್ದನ ಸೇವೆಯೆಂದು ತಿಳಿದು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ವೈದ್ಯರೊಂದಿಗೆ ಬಂದುತ್ವ ಬಾವನೆಯನ್ನು ಬೆಳೆಸಬೇಕು. ವೈದ್ಯರಲ್ಲಿ ವಿಶ್ವಾಸ ಇಟ್ಟುಕೊಂಡಲ್ಲಿ ಮಾತ್ರ ಔಷಧಿ ಫಲಕಾರಿಯಾಗಲು ಸಾಧ್ಯ ಎಂದರು.
ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಜಗತ್, ಅಂಜನಾ, ಕಾವ್ಯ, ಅಜಿತ್ ಉಪಸ್ಥಿತರಿದ್ದರು. ಮೇಘ ಸ್ವಾಗತಿಸಿದರು. ಚೈತ್ರ ವಂದಿಸಿದರು. ಅಶ್ವಿನಿ ನಿರೂಪಿಸಿದರು.