ಸ್ವರ್ಗದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಡೆಂಟಲ್ ಅಸೋಸಿಯೇಷನ್ ಅಧ್ಯಕ್ಷ ಡಾ.ಶ್ರೀಕೃಷ್ಣ ಭಟ್
ಅಂದವಾದ ವದನಕ್ಕೆ ಸುಂದರ ನಗು ಮೌಲ್ಯ ಹಾಗೂ ಮೆರುಗು ನೀಡುವುದು.ಬಲಿಷ್ಟ ಹಾಗೂ ಸುಂದರ ಹಲ್ಲುಗಳಿಂದ ಮಾನವನ ವ್ಯಕ್ತಿತ್ವ ಹಾಗೂ ಆತ್ಮವಿಶ್ವಾಸ ವೃದ್ಧಿಸಿ ಸರ್ವತೋಮುಖ ಯಶಸ್ಸಿಗೆ ಕಾರಣವಾಗುವುದು ಎಂದು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಪುತ್ತೂರು ಶಾಖಾಧ್ಯಕ್ಷ ಡಾ. ಶ್ರೀಕೃಷ್ಣ ಭಟ್ ಹೇಳಿದರು.
ಕುಂಡಾಪು ಜಲಾನಯನ ಅಭಿವೃದ್ಧಿ ಸಮಿತಿ ವಾಣೀನಗರ-ಪಡ್ರೆ, ನಬಾರ್ಡ್ ಎಸ್ ಡಿಪಿ-ಸಿಆರ್ ಡಿ ನೀಲೇಶ್ವರ, ಪೆರ್ಲ ನಾಲಂದ ಕಾಲೇಜು ಗ್ರಾಮ ವಿಕಾಸ ಸಮಿತಿ ಮತ್ತು ಇಂಡಿಯನ್ ಡೆಂಟಲ್ ಅಸೋಸಿಯೇಶನ್, ಪುತ್ತೂರು ಶಾಖೆ ಆಶ್ರಯದಲ್ಲಿ ಮಂಗಳೂರು ಎ. ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ-ಸಾರ್ವಜನಿಕ ದಂತ ಆರೋಗ್ಯ ವಿಭಾಗದ ನುರಿತ ವೈದ್ಯರಿಂದ ಸ್ವರ್ಗ ಶ್ರೀ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಎಲ್ಲರೊಂದಿಗೆ ನಗುನಗುತ್ತಾ ಆತ್ಮವಿಶ್ವಾಸದಿಂದ ಸಂಭಾಷಣೆ ನಡೆಸಲು ಆರೋಗ್ಯವಂತ ಹಾಗೂ ಸುಂದರವಾದ ಹಲ್ಲುಗಳು ಅತ್ಯಗತ್ಯ .ದೈಹಿಕ ಆರೋಗ್ಯ ಹಾಗೂ ಮುಖದ ಸೌಂದರ್ಯದಲ್ಲೂ ಹಲ್ಲುಗಳು ಪ್ರಮುಖ ಪಾತ್ರ ವಹಿಸುವುದು. ನಾವು ಸೇವಿಸುವ ಆಹಾರವನ್ನು ಚೆನ್ನಾಗಿ ಜಗಿದರೆ ಮಾತ್ರ ಆಹಾರ ಸಂಪೂರ್ಣ ಜೀರ್ಣವಾಗಲು, ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಲಭಿಸಿ ಆ ಮೂಲಕ ದೈಹಿಕ ಆರೋಗ್ಯ ಸುಸ್ಥಿತಿಯಲ್ಲಿರಲು ಸಾಧ್ಯ.
ಜೀವನ ಶೈಲಿಯಲ್ಲಿ ಉಂಟಾದ ಬದಲಾವಣೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ನಾವು ಸೇವಿಸಿವ ಆಹಾರ ದೈಹಿಕ ಆರೋಗ್ಯ ಮತ್ತು ಹಲ್ಲಿನ ಬಲಿಷ್ಠತೆಯನ್ನು ನಿರ್ಣಯಿಸುವುದು.
ಆಹಾರ ಸೇವನೆಯ ಮೊದಲು ಹಾಗೂ ಬಳಿಕ ಹಲ್ಲುಗಳನ್ನು ಸ್ವಚ್ಛಗೊಳಿಸುವುದು, ಪೌಷ್ಠಿಕ ಆಹಾರ ಸೇವನೆ, ಹಲ್ಲಿನ ಆರೋಗ್ಯದಲ್ಲಿ ನ್ಯೂನತೆ ಕಂಡು ಬಂದಲ್ಲಿ ದಂತ ವೈದ್ಯರಿಂದ ಸಲಹೆ, ಸೂಕ್ತ ಚಿಕಿತ್ಸೆ ಪಡೆಯುವ ಕಾಳಜಿ, ಮುನ್ನೆಚ್ಚರಿಕೆ ಹಾಗೂ ಆರೈಕೆ ಇದ್ದಲ್ಲಿ ನಮ್ಮ ಹಲ್ಲುಗಳನ್ನು ಪುಷ್ಟಿಕರವಾಗಲು ಸಾಧ್ಯ ಎಂದರು.
ಕಾಲೇಜು ಪ್ರಿನ್ಸಿಪಾಲ್ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ, ಸ್ವಸ್ಥ ಆರೋಗ್ಯ ನಮ್ಮದಾಗಲು ಆಹಾರ ಪದ್ಧತಿಯನ್ನು ಬದಲಾಯಿಸಲೇ ಬೇಕು. ಫ್ಯಾಷನ್ ಎಂದು ತಿಳಿದಿರುವ, ಪೇಟೆಗಳಲ್ಲಿ ಅಗ್ಗವಾಗಿ ಲಭಿಸುವ ಜಂಕ್ ಫುಡ್ ಸೇವೆನೆ ಹಲ್ಲು ಹಾಗೂ ದೈಹಿಕ ಆರೋಗ್ಯವನ್ನು ಬಾಧಿಸುವುದು. ಕಾಲೇಜು ಗ್ರಾಮ ವಿಕಾಸ ಸಮಿತಿ ನೇತೃತ್ವದಲ್ಲಿ ಗ್ರಾಮೀಣ ಜನರ ಸೌಕರ್ಯಕ್ಕಾಗಿ ದಂತ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪುತ್ತೂರಿನ ದಂತ ವೈದ್ಯ ಡಾ. ಪ್ರಕಾಶ್ ಪುತ್ತೂರು ಪ್ರಸ್ತಾವಿಕವಾಗಿ ಮಾತಮಾಡಿದರು. ಮಂಗಳೂರು ಎ.ಬಿ.ಶೆಟ್ಟಿ ಸ್ಮಾರಕ ದಂತ ವಿದ್ಯಾಲಯ ಉಪನ್ಯಾಸಕಿ ದಿಶ, ಗ್ರಾಮ ವಿಕಾಸ ಯೋಜನೆ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಜಲಾನಯನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣ ಕುಮಾರ್ ಎನ್. ಉಪಸ್ಥಿತರಿದ್ದರು.
ಸವಿತಾ ಬಾಳಿಕೆ ಸ್ವಾಗತಿಸಿ, ಕಾಲೇಜು ಉಪನ್ಯಾಸಕ ಶ್ರೀನಿಧಿ ವಂದಿಸಿದರು. ಸ್ನೇಹ ಬಾಳಿಕೆ ನಿರೂಪಿಸಿದರು.