×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಪರಿಸರ ಸಂರಕ್ಷಣೆ ಪ್ರತಿಯೊಬ್ಬನ ಆದ್ಯ ಕರ್ತವ್ಯ

ನಾಲಂದ ಕಾಲೇಜಿನಲ್ಲಿ ನಡೆದ ವಿಶ್ವ ಅರಣ್ಯ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸಕ ಕೇಶವ ಶರ್ಮ

ಸುಡು ಬಿಸಿಲಿನಲ್ಲಿ ನೆರಳಾಗಿ ತಂಪನ್ನೀಯುವ ಮರಗಳು ಉದುರುವ ಎಲೆ, ಬೇರುಗಳಿಂದ ನೀರಿನ ಹರಿವನ್ನು ತಡೆಗಟ್ಟಿ ಇಳೆಗೆ ನೀರುಣಿಸುವುದಲ್ಲದೆ ಜೀವ ಸಂಕುಲಕ್ಕೆ ಬೇಡವಾದ ಅಂಗಾರಾಮ್ಲ ಸ್ವೀಕರಿಸಿ, ಜೀವಿಗಳ ಉಳಿವಿಗೆ ಬೇಕಾದ ಶುದ್ಧ ಆಮ್ಲಜನಕ ಒದಗಿಸಿ ಪ್ರಕೃತಿ ಸಮತೋಲನಕ್ಕೆ ಕಾರಣವಾಗಿದೆ.ಇಂತಹ ನಿಸ್ವಾರ್ಥಿ ಮರಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬನ ಕರ್ತವ್ಯ ಎಂದು ನಾಲಂದ ಕಾಲೇಜು ಕನ್ನಡ ವಿಭಾಗ ಉಪನ್ಯಾಸಕ, ಸ್ಟಾಫ್ ಸೆಕ್ರೆಟರಿ ಕೇಶವ ಶರ್ಮ ಹೇಳಿದರು.

ಕಾಲೇಜು ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ಗುರುವಾರ (21.03.2019) ನಡೆದ ವಿಶ್ವ ಅರಣ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

Forest-day

forest-day2

ಮಾನವ ತನ್ನ ಅತಿ ಆಸೆ ಹಾಗೂ ಸ್ವಾರ್ಥ ಸಾಧನೆಗಾಗಿ ಅಭಿವೃದ್ಧಿ ನೆಪದಲ್ಲಿ ಅರಣ್ಯವನ್ನು ನಿರಂತರವಾಗಿ ಶೋಷಣೆಗೆ ಒಳಪಡಿಸುತ್ತಿದ್ದಾನೆ.ಪರಿಸರದಲ್ಲಿ ತಾನಾಗಿ ಹುಟ್ಟಿ ಬೆಳೆದ ಮರಗಳನ್ನು ಕಡಿಯುವ ಅಧಿಕಾರ ಯಾರಿಗೂ ಇಲ್ಲ. ಮಾನವ ನಿರಂತರ ತಪ್ಪಿನ ಫಲವಾಗಿ ಕಾಡು ನಾಶವಾಗಿ ಪ್ರಾಣಿ ಪಕ್ಷಿ ಸಂಕುಲಗಳಿಗೆ ಆವಾಸಸ್ಥಾನ ಇಲ್ಲದಾಗಿದೆ. ವನ್ಯ ಮೃಗಗಳು ಆಹಾರವನ್ನರಸಿ ನಾಡಿನತ್ತ ಲಗ್ಗೆ ಇಡುವಂತಾಗಿದೆ.ಭೂಮಿಯಲ್ಲಿ ಜನಿಸಿದ ಪ್ರತಿಯೊಂದು ಜೀವಿಗೂ, ಮರಗಳಿಗೂ ಬದುಕುವ ಸಮಾನ ಹಕ್ಕಿದೆ.

ಹಿಂದೆ ದಟ್ಟ ಅರಣ್ಯಗಳಿಂದ ಕೂಡಿದ್ದ ಕಾಸರಗೋಡಿನಲ್ಲಿ ಈಗ ಕಾಡನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಬರ ಪೀಡಿತ ಜಿಲ್ಲೆಯಾಗಿ ಘೋಷಿಸಲಾಗಿದೆ.

ಅರಣ್ಯ ನಾಶದಿಂದ ಮಣ್ಣಿನ ಫಲವತ್ತತೆ ನಶಿಸುವುದಲ್ಲದೆ ನೀರಿನ ಅಭಾವದಿಂದ ಮರುಭೂಮಿ ಸೃಷ್ಟಿಯಾಗಿದೆ. ಅರಣ್ಯ ನಾಶ ಮುಂದುವರಿದರೆ ಪ್ರಕೃತಿ ಮುನಿಯುವುದಲ್ಲದೆ ಆ ಮೂಲಕ ಭಾರೀ ನಾಶ ನಷ್ಟವನ್ನು ಮನುಕುಲ ಹಾಗೂ ಸಕಲ ಪ್ರಾಣಿ ಪಕ್ಷಿ ಎನ್ನದೆ ಸಕಲ ಜೀವ, ಜಲಚರಗಳು ಅನುಭವಿಸ ಬೇಕಾಗುವುದು. ಭವಿಷ್ಯದಲ್ಲಿ ಉಸಿರಾಡುವ ಗಾಳಿಯನ್ನು ಹಣ ತೆತ್ತು ಖರೀದಿಸುವ ಸ್ಥಿತಿ ಬರುವುದರಲ್ಲಿ ಸಂಶಯವಿಲ್ಲ.

ಯುವ ಜನಾಂಗಕ್ಕೆ ಅರಣ್ಯದ ಉಳಿವು ಹಾಗೂ ಅದರ ಮಹತ್ವವನ್ನು ತಿಳಿಸುವ ಸಲುವಾಗಿ ವಿಶ್ವದಾದ್ಯಂತ ಅರಣ್ಯ ದಿನ ಆಚರಿಸಲಾಗುತ್ತದೆ. ಅರಣ್ಯ ಸಂರಕ್ಷಣಾ ತರಗತಿಗಳಲ್ಲಿ ಭಾಗಿಯಾಗುವುದು ಮಾತ್ರವಲ್ಲದೆ ಅವುಗಳನ್ನು ಜೀವನದಲ್ಲಿ ಅಳವಡಿಸಲು ಪ್ರತಿಯೊಬ್ಬನೂ ಪ್ರಯತ್ನಿಸಬೇಕು.ಎಚ್ಚೆತ್ತುಕೊಳ್ಳಬೇಕಾದ ಸಮಯ ಈಗಾಗಲೇ ಮೀರಿದೆ.ಇನ್ನಾದರೂ ಯುವಜನಾಂಗ ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಬೇಕು ಎಂದರು.

ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ.ಎಂ. ಮಾತನಾಡಿ, ಅಭಿವೃದ್ಧಿ ಕಾರ್ಯಗಳು ನಡೆಯುವಾಗ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು.ಅರಣ್ಯ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನವೂ ಅರಣ್ಯ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.

ಜಗತ್ ಸ್ವಾಗತಿಸಿ, ಮನೋಜ್ ವಂದಿಸಿದರು.ವಿಂದ್ಯಾ ನಿರೂಪಿಸಿದರು.