ಭಾರತೀಯ ಸ್ತ್ರೀಯರು ಔದ್ಯೋಗಿಕ, ರಾಜಕೀಯ, ಸಾಮಾಜಿಕ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಪುರುಷರಷ್ಟೇ ಸಾಧನೆ ಮಾಡಿದ್ದಾರೆ ಎಂದು ನಾಲಂದ ಕಾಲೇಜು ಜಿಯೋಗ್ರಾಫಿ ವಿಭಾಗ ಉಪನ್ಯಾಸಕಿ ವಿದ್ಯಾ. ಕೆ.ಎಂ. ಹೇಳಿದರು.
ಪೆರ್ಲ ನಾಲಂದ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತೀಯ ಧರ್ಮ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜನೀಯ ಸ್ಥಾನವಿದ್ದು ಸ್ತ್ರೀಯರನ್ನು ಎಲ್ಲಿ ಗೌರವ ಭಾವದಿಂದ ಕಾಣಲಾಗುವುದೋ ಅಲ್ಲಿ ದೇವರಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ತಾಯಿ, ಸಹೋದರಿ, ಮಡದಿ ಅಥವಾ ಪುತ್ರಿಯಾಗಿ ಓರ್ವ ಮಹಿಳೆ ಇದ್ದೇ ಇರುತ್ತಾಳೆ.
ಮಹಿಳೆ ತನ್ನ ಸ್ವಾತಂತ್ರ್ಯ ಹಾಗೂ ಹಕ್ಕುಗಳಿಗೆ ಹೋರಾಟ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿಯಿಂದ ಹಾಗೂ ಮಹಿಳೆಯರನ್ನು ಸಬಲರಾಗಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಸ್ತ್ರೀ ಯಾವುದೇ ರೀತಿಯ ಹಿಂಜರಿಕೆ, ಕೀಳರಿಮೆ ಇಲ್ಲದೆ ಸವಾಲುಗಳನ್ನು ದಿಟ್ಟವಾಗಿ ಎದುರಿಸುವ ಮೂಲಕ ಹಾಗೂ ಲಭಿಸುವ ಅವಕಾಶಗಳನ್ನು ಸದುಪಯೋಗ ಪಡಿಸಿ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡಲ್ಲಿ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ.ಎಂ.ಮಾತನಾಡಿ, ಸ್ತ್ರೀಯರನ್ನು ಪೂಜನೀಯ ಸ್ಥಾನದಲ್ಲಿ ಕಾಣುವುದಲ್ಲದೆ ಗೌರವದಿಂದ ವ್ಯವಹರಿಸುವುದು ಪ್ರತಿಯೊಬ್ಬ ಪುರುಷನ ಕರ್ತವ್ಯ ಎಂದರು.
ಎನ್ನೆಸ್ಸೆಸ್ ಕಾರ್ಯದರ್ಶಿ ರೂಪ, ಧನ್ಯ, ಸುದೀಶ್, ನಿಶ್ಚಿತ ಉಪಸ್ಥಿತರಿದ್ದರು. ಅಶ್ವಿನಿ ಸ್ವಾಗತಿಸಿ, ವಾಣಿಶ್ರೀ ವಂದಿಸಿದರು. ಕವಿತ ನಿರೂಪಿಸಿದರು.