ಪೆರ್ಲ: ವಿದ್ಯಾರ್ಥಿ ದಿಶೆಯಲ್ಲಿಯೇ ಸ್ಪರ್ಧಾತ್ಮಕ ಮನೋಭಾವ ಮೈಗೂಡಿಸಿಕೊಳ್ಳಬೇಕು. ಸೋಲು ಗೆಲುವಿನ ಬಗ್ಗೆ ಚಿಂತಿಸದೆ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಜೀವನದ ಮುಂದಿನ ಹಾದಿ ಸುಗಮವಾಗುವುದು ಎಂದು ಪೆರ್ಲ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಶಿಭೂಷಣ್ ಶಾಸ್ತ್ರಿ ಹೇಳಿದರು.
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಬಿ – ಕ್ವಿಜ್ 2019 ರಸಪ್ರಶ್ನೆಯ ಫೈನಲ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ಸೋತರಷ್ಟೇ ಇನ್ನೊಬ್ಬ ಗೆಲ್ಲಲು ಸಾಧ್ಯ.ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ.ಸೋಲು, ಸವಾಲುಗಳು, ಸಮಸ್ಯೆಗಳಿಂದ ನಿಷ್ಕ್ರಿಯರಾಗದೆ ತಾರ್ಕಿಕ ಜ್ಞಾನವನ್ನು ಬಳಸಿ ಸೋಲಿನ ಕಾರಣಗಳನ್ನು ತಿಳಿದುಕೊಳ್ಳಬೇಕು.ಜೀವನದಲ್ಲಿ ಬೆಳೆಯಲು ಮತ್ತು ಹೊಸ ಹಾದಿಗಳನ್ನು ಪರಿಚಯಿಸಲು ಒದಗಿ ಬಂದಿರುವ ಅವಕಾಶವೇ ಸೋಲು ಎಂಬುದಾಗಿ ಭಾವಿಸಬೇಕು.ಆರೋಗ್ಯವಂತ ಸ್ಪರ್ಧೆಗಳಲ್ಲಿನ ಭಾಗವಹಿಸುವಿಕೆ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಪೂರಕ ಎಂದರು.
ಕಾಲೇಜು ಪ್ರಿನ್ಸಿಪಾಲ್ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ, ವಿದ್ಯಾರ್ಥಿಗಳು ಸಂಕೋಚ ಬಿಟ್ಟು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು.ಈ ರೀತಿಯ ಸ್ಪರ್ಧೆಗಳ ಆಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಹೊಸತನ ಮೂಡಿಸುವಲ್ಲಿ ನಾಂದಿಯಾಗಲಿ ಎಂದರು.
ಕಾರ್ಯಕ್ರಮದ ಸಂಯೋಜಕ ಸುರೇಶ್ ಕೆ.ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾಲೇಜು ಯೂನಿಯನ್ ಅಧ್ಯಕ್ಷೆ ನಯನಶ್ರೀ ಕೆ.ಉಪಸ್ಥಿತರಿದ್ದರು. ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಮುಖ್ಯಸ್ಥೆ ಮಧುರವಾಣಿ ಸ್ವಾಗತಿಸಿ, ಉಪನ್ಯಾಸಕ ಶ್ರೀನಿಧಿ ವಂದಿಸಿದರು.ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಅಶ್ವಿನಿ ಕ್ರಾಸ್ತ ನಿರೂಪಿಸಿದರು.